ಸಿನಿಮಾ ಸುದ್ದಿ

ಜನಪ್ರಿಯ ತಮಿಳು ಚಲನಚಿತ್ರ ನಟ, ನಿರ್ದೇಶಕ ವಿಶು ನಿಧನ

Shilpa D

ಚೆನ್ನೈ: ಅವಿಭಜಿತ ಮತ್ತು ಮಧ್ಯಮ ವರ್ಗದ ಕುಟುಂಬಗಳ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸುವಲ್ಲಿ ಹೆಸರುವಾಸಿಯಾಗಿದ್ದ ತಮಿಳು ಚಲನಚಿತ್ರ ನಟ, ಚಿತ್ರ ಸಾಹಿತಿ, ನಿರ್ದೇಶಕ ವಿಶು ದೀರ್ಘಕಾಲದ ಅನಾರೋಗ್ಯದಿಂದ ಭಾನುವಾರ ಸಂಜೆ ನಿಧನಹೊಂದಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. 

ವಿಶು ಅವರು ವಯೋಮಾನ ಸಂಬಂಧಿತ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಭಾನುವಾರ ಸಂಜೆ 6 ಗಂಟೆಗೆ ಅವರು ಕೊನೆಯುಸಿರೆಳಿದಿದ್ದಾರೆ. ರಂಗಭೂಮಿ ಕಲಾವಿದರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ವಿಶು ಅವರು, ಜನಪ್ರಿಯ ನಿರ್ದೇಶಕರಾಗಿ ತಮ್ಮ ಚಲನಚಿತ್ರಗಳಲ್ಲಿ ಮಧ್ಯಮ ವರ್ಗದ ಕುಟುಂಬಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಮತ್ತು ಹಾಸ್ಯಮಯವಾಗಿ ಚಿತ್ರಿಸುತ್ತಿದ್ದರು.

ವಿಶು ಅವರು ಸೂಪರ್ ಸ್ಟಾರ್ ರಜನಿಕಾಂತ್ ಅವರೊಂದಿಗೆ 'ನಲ್ಲವನುಕ್ಕು ನಲ್ಲವನ್', 'ಮನ್ನನ್', 'ಅರುಣಾಚಲಂ' ಮತ್ತು "ಉಳ್ಳೆಪಾಳಿ’ ಚಿತ್ರಗಳಲ್ಲಿ ನಟಿಸಿದ್ದಾರೆ.

ವಿಶು ಎಂದು ಜನಪ್ರಿಯರಾದ ಮೀನಾಕ್ಷಿಸುಂದರಂ ರಾಮಸ್ವಾಮಿ ವಿಶ್ವನಾಥನ್ ಅವರು ತಮ್ಮ ವೃತ್ತಿಜೀವನವನ್ನು ರಂಗಭೂಮಿ ವೇದಿಕೆಯಲ್ಲಿ ಆರಂಭಿಸಿದರು. ರಂಗಭೂಮಿ ಕಲಾವಿದ ವೈ ಜಿ ಪಾರ್ಥಸಾರಥಿಯವರ ನಾಟಕ ತಂಡದಲ್ಲಿ ಕತೆಗಳನ್ನು ಬರೆಯುವುದರ ಮೂಲಕ ಹಂತ-ಹಂತವಾಗಿ ಬೆಳೆದರು.

ನಂತರ ಸಹಾಯಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪ್ರವೇಶಿಸಿದ ಅವರು, ಚಿತ್ರಸಾಹಿತ್ಯ ಮತ್ತು ಸಂಭಾಷಣೆಗಳನ್ನು ಬರೆಯುವ ಮೂಲಕ ಅನುಭವಿ ಕೆ ಬಾಲಚಂದರ್‌ಗೆ ಹತ್ತಿರವಾದರು.
ರಾಷ್ಟ್ರೀಯತೆ ಮತ್ತು ಆಧ್ಯಾತ್ಮಿಕದಲ್ಲಿ ನಂಬಿಕೆ ಹೊಂದಿದ್ದ ಅವರು 2016ರಲ್ಲಿ ಬಿಜೆಪಿ ಸೇರಿದ್ದರು.

SCROLL FOR NEXT