ಸಿನಿಮಾ ಸುದ್ದಿ

'ಮುತ್ತಪ್ಪ ರೈ' ಜೀವನ ಕಥೆ ಬೆಳ್ಳಿತೆರೆ ಮೇಲೆ ಬರಲಿದೆಯೇ?

Sumana Upadhyaya

ಮಾಜಿ ಡಾನ್ ಮುತ್ತಪ್ಪ ರೈ ಜೀವನ ಕಥೆಯಾಧಾರಿತ ಚಿತ್ರ ಅವರ ಸಾವಿನ ಬಳಿಕವಾದರೂ ತಯಾರಾಗಲಿದೆಯೇ?
ಮುತ್ತಪ್ಪ ರೈ ಜೀವನ ಕುರಿತ ಚಿತ್ರವನ್ನು ರೈ ಎಂಬ ಶೀರ್ಷಿಕೆಯೊಂದಿಗೆ ದ ಗ್ರೇಟರ್ ಗ್ಯಾಂಗ್ ಸ್ಟರ್ ಎವರ್ ಎಂಬ ಟ್ಯಾಗ್ ಲೈನ್ ನೊಂದಿಗೆ ನಿರ್ಮಾಪಕ ಸಿ ಆರ್ ಮನೋಹರ್ 2016ರಲ್ಲಿ ಘೋಷಣೆ ಮಾಡಿದ್ದರು.

ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅದರ ನಿರ್ದೇಶನದ ಹೊಣೆ ಹೊತ್ತಿದ್ದರು. ಆರಂಭದಲ್ಲಿ ಸುದೀಪ್ ಮುತ್ತಪ್ಪ ರೈ ಪಾತ್ರವನ್ನು ಮಾಡುತ್ತಾರೆ ಎಂದು ಹೇಳಲಾಗಿತ್ತಾದರೂ ನಂತರ ಬಾಲಿವುಡ್ ನಟ ವಿವೇಕ್ ಒಬೆರಾಯ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು.

ಅಭಿಮಾನಿಗಳು, ಹಿತೈಷಿಗಳ ಸಮ್ಮುಖದಲ್ಲಿ ಚಿತ್ರಕ್ಕೆ ಮುಹೂರ್ತ ನೆರವೇರಿಸಿ ವಿವೇಕ್ ಒಬೆರಾಯ್ ಲುಕ್ ಸಹ ಬಿಡುಗಡೆಯಾಗಿತ್ತು. ಚಿತ್ರವನ್ನು ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ತಯಾರಿಸುವುದೆಂದು ಮಂಗಳೂರು, ಬೆಂಗಳೂರು, ಮುಂಬೈ, ಲಂಡನ್ ಮತ್ತು ದುಬೈಗಳಲ್ಲಿ ಚಿತ್ರೀಕರಣ ಮಾಡುವುದೆಂದು ತೀರ್ಮಾನವಾಗಿತ್ತು.ನಂತರ ಅರ್ಧಕ್ಕೆ ನಿಂತುಹೋಯಿತು.

ಇದೀಗ ಮುತ್ತಪ್ಪ ರೈ ತೀರಿಕೊಂಡಿದ್ದಾರೆ. ಅವರ ಕುರಿತ ಚಿತ್ರ ಬರಲಿದೆಯೇ ಎಂದು ನಿರ್ಮಾಪಕ ಮನೋಹರ್ ಅವರನ್ನು ಕೇಳಿದರೆ ಬೆಳ್ಳಿತೆರೆ ಮೇಲೆ ಮುತ್ತಪ್ಪ ರೈ ಕುರಿತು ಹೇಳುವ ಹಲವು ಆಸಕ್ತಿಕರ ವಿಷಯಗಳಿವೆ. ಚಿತ್ರ ತಯಾರಿಸುತ್ತೇನೆ ಎಂದು ಮುತ್ತಪ್ಪ ರೈ ಬದುಕಿದ್ದಾಗಲೇ ಹೇಳಿದ್ದೆ. ಇದನ್ನು ಮುಂದುವರಿಸಲು ನೋಡುತ್ತಿದ್ದೇನೆ. ಚಿತ್ರಕ್ಕೆ ನ್ಯಾಯ ಒದಗಿಸುವ ನಿರ್ದೇಶಕರು, ಕಥೆ, ಕಲಾವಿದರು ಸಿಕ್ಕಿ ಚಿತ್ರವನ್ನು ತಯಾರಿಸುತ್ತೇನೆ ಎಂಬ ನಂಬಿಕೆಯಿದೆ ಎಂದು ಹೇಳಿದರು.

ದರ್ಶನ್ ನಟನೆಯ ಚಕ್ರವರ್ತಿ ಸಿನಿಮಾಕ್ಕೂ ಮುತ್ತಪ್ಪ ರೈ ಜೀವನಕ್ಕೂ ಹೋಲಿಕೆಯಿದೆ ಎಂದು ಹೇಳಲಾಗುತ್ತಿದೆ. ಚಿಂತನ್ ನಿರ್ದೇಶನದ ಸಿಎಸ್ ಡಿ ವೀರ ಫಿಲ್ಮ್ಸ್ ನಡಿ ತಯಾರಾದ ಚಿತ್ರ 2017ರಲ್ಲಿ ಬಿಡುಗಡೆಯಾಗಿತ್ತು.

SCROLL FOR NEXT