ಸಿನಿಮಾ ಸುದ್ದಿ

ಡ್ರಗ್ಸ್ ಮಾಫಿಯಾದಲ್ಲಿ ಚಿರಂಜೀವಿ ಹೆಸರು ಪ್ರಸ್ತಾಪಿಸಿದ್ದು ಸರಿಯಲ್ಲ: ಗಾಂಧಿ ನಗರ ಗಾಂಜಾ ನಗರಿಯಾಗಿಲ್ಲ; ದೊಡ್ಡಣ್ಣ

Shilpa D

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಕೆಲವರು ಮಾದಕ ವಸ್ತು ಸೇವನೆ ಮಾಡುತ್ತಾರೆ ಎಂಬ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಅನೇಕ ಪರ-ವಿರೋಧದ ಚರ್ಚೆ ನಡೆಯುತ್ತಿದೆ. ಈ ಕುರಿತಂತೆ ಇದೇ ಮೊದಲ ಬಾರಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಚಂದನವನದ ಪ್ರಮುಖರು ಬುಧವಾರ ಸಭೆ ಸೇರಿದ್ದರು.

ಈ ವೇಳೆ  ಮಾತನಾಡಿದ ಹಿರಿಯ ನಟ ದೊಡ್ಡಣ್ಣ 'ನಾವು ಚಿತ್ರರಂಗಕ್ಕೆ ಬಂದಾಗ ಇಂಥದ್ದನ್ನೆಲ್ಲ ಕಂಡಿಲ್ಲ. ಯಾಕೆಂದರೆ ನಮ್ಮ ತಲೆ ಮೇಲೆ ಜವಾಬ್ದಾರಿ ಜಾಸ್ತಿ ಇತ್ತು. ಇದ್ದ ಸರ್ಕಾರಿ ನೌಕರಿಗಳನ್ನು ಬಿಟ್ಟು, ಕಲೆಯನ್ನು ನಂಬಿಕೊಂಡು ಇಲ್ಲಿಗೆ ಬಂದಿದ್ವಿ. ನಮಗೆ ಬೇರೇನೂ ಅಲ್ಲ, ಎರಡು ಹೊತ್ತಿನ ಅನ್ನ ಸಿಕ್ಕಿದ್ದರೆ ಸಾಕಿತ್ತು. ಇದನ್ನು ಒಂದು ಗುರುಕುಲದಂತೆ ನೋಡಿದವರು ನಾವು. ನಮಗೆ ಡ್ರಗ್ಸ್‌ ಬಗ್ಗೆ ದೇವರಾಣೆ ಗೊತ್ತಿರಲಿಲ್ಲ' ಎಂದಿದ್ದಾರೆ ದೊಡ್ಡಣ್ಣ.

'ನನಗೆ ಎರಡು ವಿಷಯಕ್ಕೆ ತುಂಬ ನೋವಾಗಿದೆ. ಈ ಪ್ರಕರಣದಲ್ಲಿ ಸತ್ತವರ ವಿಷಯ ತೆಗೆದುಕೊಂಡಿದ್ದು ನನಗೆ ಬಹಳ ನೋವುಂಟುಮಾಡಿದೆ. ಯಾಕೆಂದರೆ ನಾವು ಕೂಡ ಹೆಣ್ಣುಮಕ್ಕಳನ್ನು ಹೆತ್ತಿದ್ದೇವೆ. ಆ ಮಗು ಎಷ್ಟು ಸಹಿಸಿಕೊಳ್ಳಬೇಕು? ಸ್ವಲ್ಪ ಆಳವಾಗಿ ಯೋಚನೆ ಮಾಡಿ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಮ್ಮ ತಲೆಮಾರಿಗೂ ಡ್ರಗ್ಸ್ ಗೂ ಯಾವುದೇ ಸಂಬಂಧವಿಲ್ಲ. ಆ ವಿಚಾರವಾಗಿ ನಮಗೇನೂ ತಿಳಿದಿಲ್ಲ. ಆದರೆ ಹೊಸ ತಲೆಮಾರು ಹಾದಿ ತಪ್ಪುತ್ತಿರುವುದು ನಿಜ. ಆದರೆ ಇತ್ತೀಚೆಗೆ ಮೃತಪಟ್ಟ ಚಿರಂಜೀವಿ ಸರ್ಜಾ ವಿಷಯ ಪ್ರಸ್ತಾಪಿಸಿದ್ದು ಸರಿಯಲ್ಲ ಎಂದು ಹೇಳಿದ್ದಾರೆ.

'ಯಾರೋ ಮಾತನಾಡುವಾಗ ಇಡೀ ಗಾಂಧಿನಗರವೇ ಗಾಂಜಾನಗರ ಆಗಿದೆ ಎಂದು ಹೇಳಿದರು. ಆ ಮಾತು ಕೂಡ ನನಗೆ ನೋವುಂಟು ಮಾಡಿತು. ತಮ್ಮ ತಾಯಿಸತ್ಯವಾಗಲೂ ಗಾಂಧಿನಗರ ಆ ರೀತಿ ಆಗಿಲ್ಲ. ಇವತ್ತಿನ ಕೊರೊನಾ ಪರಿಸ್ಥಿತಿಯಲ್ಲಿ ಕೆಲಸವಿಲ್ಲದ ಕೈಗಳು ಕೆಲಸಕ್ಕಾಗಿ ಹಾತೊರೆದು ಕಾಯುತ್ತಿದ್ದಾವೆ. ಇಂಥ ಸಂದರ್ಭದಲ್ಲಿ ಯಾರ ಬಳಿಯೂ ಡ್ರಗ್ಸ್‌ಗೆ ಹಣ ಮತ್ತು ಸಮಯ ಇಲ್ಲ. ಚಿತ್ರೋದ್ಯಮದ ಹೊರಗಿನವರು ಯಾರೋ ಈ ರೀತಿ ಮಾಡಿರಬಹುದು' ಎಂಬುದು ದೊಡ್ಡಣ್ಣ ಅಭಿಪ್ರಾಯ ಪಟ್ಟಿದ್ದಾರೆ.

SCROLL FOR NEXT