ಸಿನಿಮಾ ಸುದ್ದಿ

ಕನ್ನಡ ನಿರ್ಮಾಪಕನ ಮಲಯಾಳಂ ಚಿತ್ರಕ್ಕೆ ಕೇರಳ ರಾಜ್ಯ ಪ್ರಶಸ್ತಿ: ಪುಷ್ಕರ್ ಮಲ್ಲಿಕಾರ್ಜುನಯ್ಯ ಸಾಧನೆ

Harshavardhan M

- ಹರ್ಷವರ್ಧನ್ ಸುಳ್ಯ

ಸ್ಯಾಂಡಲ್ ವುಡ್ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರು ತಮ್ಮ ಮಲಯಾಳಂ ಸಿನಿಮಾ 'ತಿಂಗಳಾಯಿಚ ನಿಶ್ಚಯಂ'ಗೆ ಕೇರಳ ರಾಜ್ಯ ಪ್ರಶಸ್ತಿ ಸ್ವೀಕರಿಸಿದ್ದಾರೆ. ಸೆನ್ನಾ ಹೆಗ್ಡೆ ನಿರ್ದೇಶನದ 'ತಿಂಗಳಾಯಿಚ ನಿಶ್ಚಯಂ', ಎರಡನೇ ಅತ್ಯುತ್ತಮ ಸಿನಿಮಾ ಮತ್ತು ಅತ್ಯುತ್ತಮ ಕಥೆ ಸೇರಿದಂತೆ ಒಟ್ಟು ಎರಡು ವಿಭಾಗಗಳಲ್ಲಿ ಸಿನಿಮಾ ಪ್ರಶಸ್ತಿ ಗೆದ್ದುಕೊಂಡಿತ್ತು.. 

ಇತ್ತೀಚಿಗಷ್ಟೆ ನಡೆದ 51ನೇ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ನಿರ್ಮಾಪಕ ಪುಷ್ಕರ್ ಮತ್ತು ನಿರ್ದೇಶಕ ಸೆನ್ನಾ ಹೆಗ್ಡೆ ಪ್ರಶಸ್ತಿ ಸ್ವೀಕರಿಸಿದ್ದಾರೆ. ಮೊದಲನೇ ಅತ್ಯುತ್ತಮ ಸಿನಿಮಾ ಸಿನಿಮಾ ಪ್ರಶಸ್ತಿ 'ದಿ ಗ್ರೇಟ್ ಇಂಡಿಯನ್ ಕಿಚನ್' ಸಿನಿಮಾ ಪಾಲಾಗಿದೆ. 

ಕೇರಳ ರಾಜ್ಯ ಪ್ರಶಸ್ತಿಯೊಂದಿಗೆ
ಪುಷ್ಕರ್ ಮಲ್ಲಿಕಾರ್ಜುನಯ್ಯ

ಗೋದಿ ಬಣ್ಣ ಸಾಧಾರಣ ಮೈಕಟ್ಟು, ಕಿರಿಕ್ ಪಾರ್ಟಿ, ಹಂಬಲ್ ಪೊಲಿಟಿಷಿಯನ್ ನೊಗ್ರಾಜ್, ಕಥೆಯೊಂದು ಶುರುವಾಗಿದೆ, ಅವನೇ ಶ್ರೀಮನ್ನಾರಾಯಣ, ಪಾಪ್ ಕಾರ್ನ್ ಮಂಕಿ ಟೈಗರ್ ಮುಂತಾದ ಸದಭಿರುಚಿಯ ಹಾಗೂ ಪ್ರಯೋಗಾತ್ಮಕ ಸಿನಿಮಾಗಳನ್ನು ಮಾಡಿರುವ ಶ್ರೇಯ ಪುಷ್ಕರ್ ಅವರದು. ತಿಂಗಳಾಯಿಚ ನಿಶ್ಚಯಂ ಸಿನಿಮಾ ಕಥೆಯನ್ನು ಮೊದಲು ಕನ್ನಡದಲ್ಲಿ ಮಾಡಬೇಕಾಗಿತ್ತು, ಆದರೆ ಕಥೆಯ ಪರಿಸರ ಕೇರಳವನ್ನು ಹೋಲುತ್ತಿದ್ದುದರಿಂದ ಮಲಯಾಳಂನಲ್ಲಿ ಸಿನಿಮಾ ಮಾಡುವ ನಿರ್ಧಾರಕ್ಕೆ ಪುಷ್ಕರ್ ಮತ್ತು ಸೆನ್ನಾ ಹೆಗ್ಡೆ ಬಂದಿದ್ದರು.

ಈ ಹಿಂದೆ ಪುಷ್ಕರ್ ನಿರ್ಮಿಸಿದ್ದ ಕಥೆಯೊಂದು ಶುರುವಾಗಿದೆ ಕನ್ನಡ ಸಿನಿಮಾವನ್ನು ಸೆನ್ನಾ ಹೆಗ್ಡೆ ಅವರು ನಿರ್ದೇಶಿಸಿದ್ದರು ಎನ್ನುವುದು ವಿಶೇಷ. ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ತಾವು ಮಲಯಾಳಂ ಸಿನಿಮಾ ಮಾಡಲು ಮುಂದಾಗಿದ್ದು ಹೇಗೆ ಎನ್ನುವ ಪ್ರಶ್ನೆಗೆ ಪುಷ್ಕರ್ ನಗುತ್ತಾ ಉತ್ತರಿಸಿದ್ದು ಹೀಗೆ. ಸಿನಿಮಾಗೆ ಭಾಷೆಯ ಹಂಗಿಲ್ಲ. ಕನ್ನಡ ಮಾತ್ರವಲ್ಲದೆ ಭಾರತದ ಹಲವು ಭಾಷೆಗಳಲ್ಲಿ ಸಿನಿಮಾ ಮಾಡಬೇಕು ಎನ್ನುವುದು ತಮ್ಮ ಕನಸು ಎಂದು ತಮ್ಮ ಹಂಬಲವನ್ನು ಹಂಚಿಕೊಂಡಿದ್ದಾರೆ. 

ಸಾಮಾನ್ಯವಾಗಿ ಇತರೆ ಭಾಷೆಗಳ ನಿರ್ಮಾಪಕರು ಕನ್ನಡ ಸಿನಿಮಾಗಳನ್ನು ನಿರ್ಮಾಣ ಮಾಡುವುದನ್ನು ನೋಡುತ್ತೇವೆ, ಅಂಥದ್ದರಲ್ಲಿ ಕನ್ನಡದ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಮಲಯಾಳಂ ಸಿನಿಮಾ ಮಾಡಿ ರಾಜ್ಯಪ್ರಶಸ್ತಿಯನ್ನು ಗೆದ್ದಿರುವುದು ಕನ್ನಡಿಗರು ಹೆಮ್ಮೆ ಪಡುವ ವಿಚಾರ. ಪ್ರತಿಷ್ಟಿತ ಕೇರಳ ಅಂತಾರಾಷ್ಟ್ರೀಯ ಚಿತ್ರೋತ್ಸವ IFFKನಲ್ಲೂ ಸಿನಿಮಾ ಪ್ರದರ್ಶನ ಕಂಡು ಮೆಚ್ಚುಗೆಗೆ ಪಾತ್ರವಾಗಿತ್ತು. 

ನಿರ್ದೇಶಕ ಸೆನ್ನಾ ಹೆಗ್ಡೆ

'ತಿಂಗಳಾಯಿಚ ನಿಶ್ಚಯಂ' ಸಿನಿಮಾವನ್ನು ಕಾನ್ಹಂಗಾಡ್ ನಲ್ಲಿ ಚಿತ್ರೀಕರಣ ಮಾಡಿದ್ದು ಕೇರಳ ಹಳ್ಳಿಯ ಚಿತ್ರಣವನ್ನು ಕಟ್ಟಿಕೊಡುತ್ತದೆ. ಸೆನ್ನಾ ಹೆಗ್ಡೆ ನೈಜತೆಯನ್ನು ಇಷ್ಟಪಡುವ ಒಬ್ಬ ಫಿಲಂ ಮೇಕರ್ ಎನ್ನುವ ಪುಷ್ಕರ್ ಹಾಗಾಗಿಯೇ ಸಿನಿಮಾದಲ್ಲಿ ಸಿಂಕ್ ಸೌಂಡ್ ಬಳಕೆಯಾಗಿದ್ದಾಗಿ ಕಾರಣ ನೀಡುತ್ತಾರೆ. ಹಣದ ಲೆಕ್ಕಾಚಾರದಲ್ಲಿ ಡಬ್ಬಿಂಗ್ ಗೆ ಹೋಲಿಸಿದರೆ ಸಿಂಕ್ ಸೌಂಡಿಗೆ ಖರ್ಚು ಜಾಸ್ತಿ. ಆದರೆ ಸಿನಿಮಾವನ್ನು ನೈಜವಾಗಿ ಕಟ್ಟಿಕೊಡುವ ಉದ್ದೇಶವಿದ್ದಿದ್ದದರಿಂದ ಸಿಂಕ್ ಸೌಂಡಿಗೆ ಗ್ರೀನ್ ಸಿಗ್ನಲ್ ನೀಡಿದ್ದಾಗಿ ಪುಷ್ಕರ್ ಮಾಹಿತಿ ಹಂಚಿಕೊಂಡಿದ್ದಾರೆ. 

ಒಟಿಟಿ ತಾಣವಾಗಿರುವ ಸೋನಿ ಲಿವ್ ನಲ್ಲಿ 'ತಿಂಗಳಾಯಿಚ ನಿಶ್ಚಯಂ' ಬಿಡುಗಡೆಯಾಗಿದ್ದು, ದೇಶಾದ್ಯಂತ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಸಿನಿಮಾವನ್ನು ಮುಂದಿನ ದಿನಗಳಲ್ಲಿ ಕನ್ನಡದಲ್ಲಿ ರೀಮೇಕ್ ಮಾಡುವ ಯೋಜನೆಯನ್ನು ಪುಷ್ಕರ್ ಹೊಂದಿದ್ದಾರೆ. ಮುಂದಿನ ದಿನಗಳಲ್ಲಿ ಆ ಬಗ್ಗೆ ಹೆಚ್ಚಿನ ಮಾಹಿತಿ ಹೊರಬೀಳಲಿದೆ. ಪುಷ್ಕರ್ ನಿರ್ಮಾಣದ, ಸಿಂಪಲ್ ಸುನಿ ನಿರ್ದೇಶಿಸಿ ಶರಣ್ ನಟಿಸಿರುವ ಅವತಾರ ಪುರುಷ ಡಿಸೆಂಬರ್ 10ರಂದು ತೆರೆಕಾಣಲು ಸಿದ್ಧವಾಗಿದೆ.

SCROLL FOR NEXT