ಸಿನಿಮಾ ಸುದ್ದಿ

'ನಿಲ್ದಾಣದಲ್ಲಿ ನೆಲದ ಮೇಲೆ ಕೂರಿಸಿದರು; ಶ್ವಾನಗಳ ಕಾಟ ಬೇರೆ'; ದೆಹಲಿ ಏರ್ ಪೋರ್ಟ್ ವಿರುದ್ಧ ನಿರ್ದೇಶಕ ರಾಜಮೌಳಿ ಗರಂ!

Srinivasamurthy VN

ನವದೆಹಲಿ: ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿರುದ್ಧ ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಗರಂ ಆಗಿದ್ದು, ವಿದೇಶದಿಂದ ಬರುವ ಅತಿಥಿಗಳಿಗೆ ಭಾರತದ ಬಗ್ಗೆ ಒಳ್ಳೆಯ ಭಾವನೆ ಮೂಡುವುದಿಲ್ಲ ಎಂದು ಹೇಳಿದ್ದಾರೆ.

ಇತ್ತೀಚೆಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ತಾವು ಕಂಡ ಚಿತ್ರಣವನ್ನು ಅವರು ಸೋಷಿಯಲ್​ ಮೀಡಿಯಾ ಮೂಲಕ ವಿವರಿಸಿದ್ದು, ವಿದೇಶದಿಂದ ಬಂದವರನ್ನು ದೆಹಲಿ ನಿಲ್ದಾಣದಲ್ಲಿ ನಡೆಸಿಕೊಂಡ ರೀತಿಯ ಬಗ್ಗೆ ನಿರ್ದೇಶಕ ರಾಜಮೌಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ 2 ಟ್ವೀಟ್ ಮಾಡಿರುವ  ರಾಜಜಮೌಳಿ, 'ರಾತ್ರಿ 1 ಗಂಟೆಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದೆ. ಆರ್​ಟಿಪಿಸಿಆರ್​ ಟೆಸ್ಟ್​ ಸಲುವಾಗಿ ಫಾರ್ಮ್​ ತುಂಬಲು ನೀಡಿದರು. ಎಲ್ಲ ಪ್ರಯಾಣಿಕರು ನೆಲದ ಮೇಲೆ ಕುಳಿತುಕೊಂಡು, ಗೋಡೆಗೆ ಒರಗಿಸಿಕೊಂಡು ಫಾರ್ಮ್​ ತುಂಬುತ್ತಿದ್ದರು. ಅದು ಸರಿ ಎನಿಸುವುದಿಲ್ಲ. ಕನಿಷ್ಠ ಟೇಬಲ್​ ಒದಗಿಸುವುದು  ಸರಳ ಸೇವೆ’ ಎಂದು ರಾಜಮೌಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಂತೆಯೇ ಮತ್ತೊಂದು ಟ್ವೀಟ್ ನಲ್ಲಿ, 'ವಿಮಾನ ನಿಲ್ದಾಣದ ಒಳಗೆ ಈ ಪರಿಸ್ಥಿತಿಯಾದರೆ ಹೊರಗೆ ಬೇರೆಯದೇ ವಾತಾವರಣ ಇದೆ. ವಿಮಾನ ನಿಲ್ದಾಣದಿಂದ ಹೊರಗೆ ಬರುವ ಗೇಟ್​ನಲ್ಲಿ ಅನೇಕ ಬೀದಿ ನಾಯಿಗಳು ಕಾಣಿಸಿಕೊಳ್ಳುತ್ತಿವೆ. ವಿದೇಶದಿಂದ ಬರುವ ಅತಿಥಿಗಳು ವಿಮಾನ ನಿಲ್ದಾಣದಲ್ಲೇ ಇಂಥ  ವಾತಾವರಣವನ್ನು ನೋಡಿದರೆ ಭಾರತದ ಬಗ್ಗೆ ಒಳ್ಳೆಯ ಭಾವನೆ ಮೂಡುವುದಿಲ್ಲ. ದಯವಿಟ್ಟು ಈ ಬಗ್ಗೆ ಗಮನ ಹರಿಸಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ರಾಜಮೌಳಿ ಮನವಿ ಮಾಡಿಕೊಂಡಿದ್ದಾರೆ. 

ಇನ್ನು ರಾಜಮೌಳಿ ಅವರ ಈ ಟ್ವೀಟ್ ಇದೀಗ ಭಾರಿ ಚರ್ಚೆಗೆ ಕಾರಣವಾಗಿದ್ದು, ರಾಜಮೌಳಿ ಟ್ವೀಟ್ ಬೆನ್ನಲ್ಲೇ ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

SCROLL FOR NEXT