ಸಿನಿಮಾ ಸುದ್ದಿ

ನ.16 ರಂದು 'ಪುನೀತ ನಮನ' ಮೈಸೂರು ರಾಜವಂಶಸ್ಥ ಯದುವೀರ್ ಭಾಗಿ

Nagaraja AB

ಬೆಂಗಳೂರು: ಅಕಾಲಿಕವಾಗಿ ಇಹಲೋಕ ತ್ಯಜಿಸಿದ ಅಪ್ಪು ಸ್ಮರಣಾರ್ಥ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಇದೇ 16ರಂದು “ಪುನೀತ ನಮನ” ಕಾರ್ಯಕ್ರಮ ಆಯೋಜಿಸಿದೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಕಲಾವಿದರ ಸಂಘ, ನಿರ್ಮಾಪಕರು, ನಿರ್ದೇಶಕರ ಸಂಘ ಒಳಗೊಂಡಂತೆ ಅಂಗಸಂಸ್ಥೆಗಳು ಒಗ್ಗೂಡಿ ನಡೆಸುತ್ತಿರುವ ಕಾರ್ಯಕ್ರಮ ಇದಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮೈಸೂರು ಮಹಾರಾಜ ಯದುವೀರ್ ಒಡೆಯರ್ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ ಎಂದು ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ ಹಾಗೂ ಪದಾಧಿಕಾರಿಗಳು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪುನೀತ್ ನಿಧನದಿಂದ ತೀವ್ರ ದುಃಖಿತರಾಗಿ ಸಂತಾಪ ವ್ಯಕ್ತಪಡಿಸಿರುವ ಯದುವೀರ್ ಒಡೆಯರ್ ಅವರು, “ಪುನೀತ ನಮನ” ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಮ್ಮತಿಸಿದ್ದಾರೆ ಎಂದು ಸಾ ರಾ ಗೋವಿಂದು ತಿಳಿಸಿದರು.

ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ 3 ಗಂಟೆಗೆ ಆರಂಭವಾಗಿ ಸಂಜೆ 6 ಗಂಟೆಯವರೆಗೆ ನಡೆಯಲಿದೆ. ಪಾಸ್ ಇಲ್ಲದವರಿಗೆ ಪ್ರವೇಶ ಇರುವುದಿಲ್ಲ. ಮನರಂಜನಾತ್ಮಕ ಕಾರ್ಯಕ್ರಮಗಳು ಇರುವುದಿಲ್ಲ. ಸಾ ರಾ ಗೋವಿಂದ್ ನೇತೃತ್ವದಲ್ಲಿ ಎಲ್ಲ ಕಾರ್ಯಕ್ರಮಗಳೂ ನಡೆಯಲಿದ್ದು, ನಿರ್ಮಾಪಕ, ನಿರ್ದೇಶಕ ನವರಸನ್ ಸಹಕಾರ ನೀಡಲಿದ್ದಾರೆ ಎಂದು ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ ತಿಳಿಸಿದರು.

ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದ ಬಹುತೇಕ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ವಿಶೇಷವಾಗಿ ಡಾ. ರಾಜ್ ಕುಟುಂಬ ಸದಸ್ಯರೆಲ್ಲರೂ ಆಗಮಿಸಲಿದ್ದಾರೆ. ಇದು ಸಿನಿಮಾ ರಂಗಕ್ಕೆ ಮಾತ್ರ ಸೀಮಿತವಾಗಿದ್ದು, ಸಾರ್ವಜನಿಕರು ಅನ್ಯಥಾ ಭಾವಿಸಬಾರದು ಎಂದು ಮನವಿ ಮಾಡಿದರು.

ಚಿತ್ರೋದ್ಯಮದ ಸುಮಾರು ಒಂದೂವರೆ ಸಾವಿರದಷ್ಟು ಕಲಾವಿದರು ಹಾಗೂ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಪುನೀತ್ ಕುರಿತು ಗೀತ ರಚನೆಕಾರ ಡಾ. ನಾಗೇಂದ್ರ ಪ್ರಸಾದ್ ಹಾಡು ರಚಿಸಿದ್ದು, ಗುರುಕಿರಣ್ ಸಂಗೀತ ನೀಡಿದ್ದಾರೆ. ಈ ಹಾಡು ಮುಗಿವ ತನಕ ಗಣ್ಯರು ಭಾವಚಿತ್ರಕ್ಕೆ ನಮಿಸಲಿದ್ದಾರೆ.

ಪುನೀತ್ ನಟಿಸಿದ ಚಿತ್ರಗಳ ತುಣುಕು, ಹಾಡುಗಳು ಪ್ರದರ್ಶಿತವಾಗಲಿದ್ದು, 3 ಗಂಟೆಗಳ ಕಾರ್ಯಕ್ರಮವಾಗಿದೆ. ಅಂದು ಎಲ್ಲ ಚಿತ್ರಗಳ ಚಿತ್ರೀಕರಣವನ್ನೂ ಸ್ಥಗಿತಗೊಳಿಸಲಾಗುವುದು ಎಂದು ಸಾ ರಾ ಗೋವಿಂದು ಮಾಹಿತಿ ನೀಡಿದರು.

SCROLL FOR NEXT