ಸಿನಿಮಾ ಸುದ್ದಿ

ಡಾ. ವಿಷ್ಣುವರ್ಧನ್ 71ನೇ ಜನ್ಮಜಯಂತಿ: ಗಣ್ಯರು, ಸಿನಿತಾರೆಯರು, ಅಭಿಮಾನಿಗಳಿಂದ ಗೌರವ; ಒಡಿಶಾ ತೀರದಲ್ಲಿ ಮರಳು ಶಿಲ್ಪ 

Sumana Upadhyaya

ಸಾಹಸ ಸಿಂಹ, ಅಭಿನಯ ಭಾರ್ಗವ, ಕೋಟಿಗೊಬ್ಬ, ಕಲಾದೈವ, ಮೈಸೂರು ರತ್ನ ಎಂದು ಅಭಿಮಾನಿಗಳಿಂದ ಪ್ರೀತಿಯಿಂದ ಕರೆಸಿಕೊಳ್ಳುವ ಡಾ.ವಿಷ್ಣುವರ್ಧನ್ ಅವರ ಜನ್ಮಜಯಂತಿ ಇಂದು.

ಪ್ರೀತಿಯ 'ಯಜಮಾನ' 'ರಾಮಚಾರಿ' ಇಂದು ಇರುತ್ತಿದ್ದರೆ 71ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆದರೆ ಡಿಸೆಂಬರ್ 30,2009ರಂದು ಅವರು ಅಗಲಿದರು. ಭೌತಿಕವಾಗಿ, ದೈಹಿಕವಾಗಿ ಇಲ್ಲದಿದ್ದರೂ ಅವರ ಅಭಿಮಾನಿಗಳಿಗೆ ಪ್ರೀತಿಯಂತೂ ಕಿಂಚಿತ್ತೂ ಕಡಿಮೆಯಾಗಿಲ್ಲ. ನೋವಿನ ಮಧ್ಯೆ ಅಭಿಮಾನಿಗಳು ತಮ್ಮದೇ ರೀತಿಯಲ್ಲಿ ವಿಷ್ಣುದಾದನ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ.

ಪ್ರತಿವರ್ಷ ವಿಷ್ಣು ಅಭಿಮಾನಿಗಳು ಮೈಸೂರು ಹಾಗೂ ಅಭಿಮಾನ್ ಸ್ಟುಡಿಯೊದಲ್ಲಿ ಅದ್ದೂರಿಯಾಗಿ ಆಚರಿಸುತ್ತಿದ್ದರೆ ಈ ಬಾರಿ ಕುಟುಂಬಸ್ಥರು ಮತ್ತು ಅಭಿಮಾನಿಗಳು ಸರಳವಾಗಿ ಆಚರಿಸುತ್ತಿದ್ದಾರೆ. ಡಾ ವಿಷ್ಣು ಸ್ಮರಿಸಿದ ಗಣ್ಯರು, ಸಿನಿ ತಾರೆಯರು: ಡಾ.ವಿಷ್ಣುವರ್ಧನ್ ಅವರ ಜನ್ಮಜಯಂತಿ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿ ಸೇರಿದಂತೆ, ರಾಜಕೀಯ ನಾಯಕರು, ಗಣ್ಯರು, ಸಿನಿ ತಾರೆಯರು ಸ್ಮರಿಸಿಕೊಂಡಿದ್ದಾರೆ. 

‘’ಕನ್ನಡ ಚಿತ್ರರಂಗ ಕಂಡ ಮೇರು ಕಲಾವಿದ, ಅಭಿಮಾನಿಗಳ ಪಾಲಿನ ನೆಚ್ಚಿನ ಸಾಹಸಸಿಂಹ ದಿವಂಗತ ಡಾ.ವಿಷ್ಣುವರ್ಧನ್ ಅವರ ಜನ್ಮದಿನದಂದು ಅವರಿಗೆ ಆದರಪೂರ್ವಕ ನಮನಗಳು. ಅವರ ಕಲಾಸೇವೆ, ಹೃದಯವಂತಿಕೆ, ಕನ್ನಡ ನಾಡು ನುಡಿಗಳ ಬಗ್ಗೆ ಅವರಿಗಿದ್ದ ಕಾಳಜಿ, ಅವರ ಸಾಧನೆಗಳು ಪ್ರೇರಣಾದಾಯಕ’’ ಎಂದು ಸಿಎಂ ಬಸವರಾಜ ಬೊಮ್ಮಾಯಿ ಬರೆದುಕೊಂಡಿದ್ದಾರೆ.

ಸೆಪ್ಟೆಂಬರ್ 18, 1950ರಂದು ಮೈಸೂರಿನಲ್ಲಿ ಜನಿಸಿದ್ದ ಡಾ ವಿಷ್ಣು ಅವರ ಮೊದಲ ಹೆಸರು ಸಂಪತ್ ಕುಮಾರ್. ಚಿತ್ರರಂಗಕ್ಕೆ ಬಂದ ಮೇಲೆ ಡಾ ವಿಷ್ಣುವರ್ಧನ್ ಆದರು. ‘ವಂಶವೃಕ್ಷ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಡಾ.ವಿಷ್ಣುವರ್ಧನ್‌ಗೆ ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಬ್ರೇಕ್ ನೀಡಿದ್ದು ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ನಾಗರಹಾವು’ ಸಿನಿಮಾ. ‘ಭೂತಯ್ಯನ ಮಗ ಅಯ್ಯು’, ‘ಸಾಹಸ ಸಿಂಹ’, ‘ಬಂಧನ’, ‘ಹಬ್ಬ’, ‘ಜೀವನದಿ’, ‘ಯಜಮಾನ’, ‘ಸಿಂಹಾದ್ರಿಯ ಸಿಂಹ’, ‘ಯಜಮಾನ’, ‘ಆಪ್ತಮಿತ್ರ’, ‘ಆಪ್ತರಕ್ಷಕ’ ಮುಂತಾದ ಅನೇಕ ಹಿಟ್ ಚಿತ್ರಗಳನ್ನು ಡಾ.ವಿಷ್ಣುವರ್ಧನ್ ನೀಡಿದರು. 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಡಾ.ವಿಷ್ಣುವರ್ಧನ್‌ಗೆ ರಾಜ್ಯ ಪ್ರಶಸ್ತಿ, ಡಾ.ರಾಜ್‌ಕುಮಾರ್ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿವೆ. 

ಮರಳಿನಲ್ಲಿ ಶಿಲ್ಪ: ಅಂತಾರಾಷ್ಟ್ರೀಯ ಖ್ಯಾತಿಯ ಒಡಿಶಾ ಮೂಲದ ಮರಳು ಕಲಾವಿದ ಮಾನಸ್ ಕುಮಾರ್ ಸಾಹೋ ವಿಷ್ಣುವರ್ಧನ್ ಅವರ 71ನೇ ಹುಟ್ಟುಹಬ್ಬದ ಅಂಗವಾಗಿ ಅವರ ಮರಳು ಪ್ರತಿಮೆಯನ್ನು ರಚಿಸಿದ್ದಾರೆ. ಪುರಿಯ ಗೋಲ್ಡನ್ ಬೀಚ್ ತೀರದಲ್ಲಿ ಈ ಸುಂದರ ಮರಳು ಕೃತಿಯನ್ನು ರಚಿಸಿದ್ದು ಅದರಲ್ಲಿ ಕರ್ನಾಟಕದ ಧ್ವಜ, ತಲೆಯಲ್ಲಿ ಪೇಟಾ ಮತ್ತು ಹಣೆಗೆ ಕೆಂಪು ತಿಲಕ ಹಚ್ಚಲಾಗಿದೆ. 
ಇದೇ ಮೊದಲ ಬಾರಿಗೆ ಒಡಿಶಾ ಸಮುದ್ರ ತೀರದಲ್ಲಿ ಸ್ಯಾಂಡಲ್ ವುಡ್ ಕಲಾವಿದನ ಚಿತ್ರ ಬಿಡಿಸಲಾಗಿದೆ. 

SCROLL FOR NEXT