ಸಿನಿಮಾ ಸುದ್ದಿ

ಕನ್ನಡ ಸಿನೆಮಾಗಳ ಮಾಂತ್ರಿಕ ವರ್ಷ 2022: ರಾಷ್ಟ್ರಮಟ್ಟದಲ್ಲಿ ಶ್ರೀಗಂಧದ ಕಂಪನ್ನು ಪರಸರಿಸಿದ 'ಸ್ಯಾಂಡಲ್ ವುಡ್'

Sumana Upadhyaya

2022 ಕಳೆದ 2023ಕ್ಕೆ ನಾಳೆ ಕಾಲಿಡುತ್ತಿದ್ದೇವೆ. ಈ ಸಂದರ್ಭದಲ್ಲಿ ಕಳೆದ ವರ್ಷದ ಘಟನಾವಳಿಗಳನ್ನು ನೆನಪು ಮಾಡಿಕೊಳ್ಳುವುದು ಸಹಜ, 2022 ಖಂಡಿತವಾಗಿ ಕನ್ನಡ ಚಿತ್ರರಂಗಕ್ಕೆ ಮಾಂತ್ರಿಕ ವರ್ಷ ಎಂದೇ ಹೇಳಬಹುದು. ಕೆಜಿಎಫ್-2 ಮತ್ತು ಕಾಂತಾರ ಚಿತ್ರಗಳು ರಾಜ್ಯ ಮಾತ್ರವಲ್ಲದೆ ರಾಷ್ಟ್ರಮಟ್ಟದಲ್ಲೂ ಗಲ್ಲಾಪೆಟ್ಟಿಗೆಯಲ್ಲಿ ಗೆದ್ದು ಇತಿಹಾಸ ನಿರ್ಮಿಸಿದವು. 777 ಚಾರ್ಲಿ ಮತ್ತು ವಿಕ್ರಾಂತ್ ರೋಣಾ ಚಿತ್ರಗಳು ಬ್ಲಾಕ್ ಬಸ್ಟರ್ ಆದವು.

ಪುನೀತ್ ರಾಜ್‌ಕುಮಾರ್ ಅವರ ಬಹು ನಿರೀಕ್ಷಿತ ಜೇಮ್ಸ್ ಅವರ ನಿಧನದ ತಿಂಗಳ ನಂತರ ತೆರೆಗೆ ಬಂದಿದ್ದರಿಂದ ಸ್ಯಾಂಡಲ್‌ವುಡ್ ಅಭಿಮಾನಿಗಳಿಗೆ ಇದು ಭಾವನಾತ್ಮಕ ಚಿತ್ರವಾಗಿತ್ತು. ಚೇತನ್ ಕುಮಾರ್ ನಿರ್ದೇಶನದ '100 ಕೋಟಿ ಕ್ಲಬ್' ಸೇರಿದ ಮೊದಲ ಚಿತ್ರವಾಯಿತು. ದಿವಂಗತ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿರ್ದೇಶಕ ಅಮೋಘವರ್ಷ ಜೊತೆ ಸೇರಿ ಗಂಧದ ಗುಡಿ ಮಾಡಿ ಅದು ಕಳೆದ ನವೆಂಬರ್ ನಲ್ಲಿ ತೆರೆಕಂಡು ಪ್ರೇಕ್ಷಕರ ಮನಗೆದ್ದಿತು. ಈ ಮೂಲಕ ಪುನೀತ್ ರಾಜ್ ಕುಮಾರ್ ಬದುಕಿಗೆ ಮತ್ತು ಬಣ್ಣದ ಬದುಕಿಗೆ ಸೂಕ್ತ ವಿದಾಯ ಹೇಳಿದ್ದಾರೆ. 

ಈ ವರ್ಷ ಸ್ಯಾಂಡಲ್‌ವುಡ್‌ನಲ್ಲಿ ಅನೇಕ ಹೊಸ ಪ್ರತಿಭೆಗಳು ಕಾಣಿಸಿಕೊಂಡರು. ಅವರ ಯೋಜನೆಗಳು ಸಾಕಷ್ಟು ಪ್ರೀತಿ ಮತ್ತು ಮೆಚ್ಚುಗೆಯನ್ನು ಗಳಿಸಿವೆ. ಸ್ಯಾಂಡಲ್‌ವುಡ್‌ನಲ್ಲಿ ಕಳೆದ 12 ತಿಂಗಳುಗಳಲ್ಲಿ ಏನೆಲ್ಲಾ ನಡೆದಿದೆ ಎಂಬುದರ ಸಮಗ್ರ ನೋಟ ಇಲ್ಲಿದೆ.

2020 ಮತ್ತು 2021 ರಲ್ಲಿ ಕೋವಿಡ್ ಸಾಂಕ್ರಾಮಿಕದಿಂದಾಗಿ ಚಿತ್ರಗಳು ಬಿಡುಗಡೆಯಾಗದೆ, ಥಿಯೇಟರ್ ನಲ್ಲಿ ತೆರೆಕಾಣದೆ ಹಿನ್ನಡೆಯ ನಂತರ, 2022ರ ಜನವರಿ ನಂತರ ಥಿಯೇಟರ್ ಗಳಲ್ಲಿ ಬಿಡುಗಡೆ ಕಾಣಲು ಪ್ರಾರಂಭವಾದವು. ಮೊದಲ ಎರಡು ತಿಂಗಳಲ್ಲಿ ಒಂಬತ್ತನೆ ದಿಕ್ಕು ಮತ್ತು ಡಿಎನ್‌ಎಯಿಂದ ಸುಮಾರು 45 ಚಲನಚಿತ್ರಗಳು ಬಿಡುಗಡೆಯಾದವು, ನಂತರ ಲವ್ ಮಾಕ್‌ಟೇಲ್ 2, ಏಕ್ ಲವ್ ಯಾ, ಬೈ2ಲವ್ ಮತ್ತು ಓಲ್ಡ್ ಮಾಂಕ್ ಚಿತ್ರಗಳು ಮಿಶ್ರ ಪ್ರತಿಕ್ರಿಯೆ ಕಂಡವು. ಪುನೀತ್ ರಾಜ್‌ಕುಮಾರ್ ಅವರ ಕೊನೆಯ ಪ್ರಮುಖ ಚಿತ್ರ, ಜೇಮ್ಸ್, ಮಾರ್ಚ್ 17 ರಂದು ಬಿಡುಗಡೆಯಾಗಿ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಬರೆದು 150 ಕೋಟಿಗಿಂತಲೂ ಹೆಚ್ಚು ಗಳಿಸಿತು.

ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಯಾಂಡಲ್‌ವುಡ್‌ಗೆ ಮೊದಲ ದೊಡ್ಡ ಬ್ರೇಕ್ ಎಂದರೆ ಕೆಜಿಎಫ್ ಚಾಪ್ಟರ್ 2, ಮಾಸ್ ಮಸಾಲಾ ಆಕ್ಷನ್ ಎಂಟರ್‌ಟೈನರ್. ಪ್ರಶಾಂತ್ ನೀಲ್ ನಿರ್ದೇಶನವು ಕನ್ನಡ ಚಿತ್ರರಂಗವನ್ನು ಮತ್ತೊಮ್ಮೆ ರಾಷ್ಟ್ರಮಟ್ಟಕ್ಕೆ ತಲುಪಿಸಿತು. ಅದು ಬಿಡುಗಡೆಯಾದ ಪ್ರತಿಯೊಂದು ಕೇಂದ್ರಗಳಲ್ಲಿಯೂ ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿಯಿತು. ಈ ಚಿತ್ರವು ಅಂತಿಮವಾಗಿ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 1,200 ಕೋಟಿ ರೂಪಾಯಿ ಗಳಿಸಿತು.

ನಂತರ ಉಪೇಂದ್ರ ಅವರ ಹೋಮ್ ಮಿನಿಸ್ಟರ್ ಚಿತ್ರ ಬಂತು. ಇದು ನೀರಸ ಪ್ರತಿಕ್ರಿಯೆಯನ್ನು ಪಡೆಯಿತು. ಅವತಾರ ಪುರುಷ, ಹರಿಕಥೆ ಅಲ್ಲ ಗಿರಿಕಥೆ ಮತ್ತು ಗಜಾನನ ಸೇರಿದಂತೆ ಇತರ ಚಿತ್ರಗಳು ಏಪ್ರಿಲ್-ಜೂನ್ ಅವಧಿಯಲ್ಲಿ ಬಿಡುಗಡೆಯಾಗಿ ಸೋತು ಹೋದವು. ಕೆಜಿಎಫ್-2 ಏಪ್ರಿಲ್ 14 ರಂದು ಬಿಡುಗಡೆಯಾದ ನಂತರ ವಾರಗಟ್ಟಲೆ ಥಿಯೇಟರ್ ನಲ್ಲಿ ಪ್ರದರ್ಶನ ಕಂಡಿತು. ಹೆಚ್ಚಿನ ಪ್ರೀತಿಯನ್ನು ಪಡೆದ ಇತರ ಚಿತ್ರಗಳೆಂದರೆ ಶುಗರ್‌ಲೆಸ್ ಮತ್ತು ವೀಲ್ ಚೇರ್ ರೋಮಿಯೋ, ಇದರ ಕಥೆಗಳು ಗಮನಸೆಳೆದವು.

ಚೊಚ್ಚಲ ನಿರ್ದೇಶಕ ಕಿರಣ್‌ರಾಜ್ ಅವರ 777 ಚಾರ್ಲಿ ಜೂನ್ ನಲ್ಲಿ ತೆರೆಕಂಡಿತು. ರಕ್ಷಿತ್ ಶೆಟ್ಟಿ ನಟನೆ, ನಿರ್ಮಾಣದ ಚಿತ್ರ. ಇದು ಸ್ಯಾಂಡಲ್ ವುಡ್ ನಲ್ಲಿ ದಾಖಲೆ ನಿರ್ಮಿಸಿತು. ಮನುಷ್ಯ-ಪ್ರಾಣಿಗಳ ಬಾಂಧವ್ಯದ ಕುರಿತಾದ ಹೃದಯಸ್ಪರ್ಶಿ ಚಿತ್ರವು ಪ್ರೇಕ್ಷಕರ ಎಲ್ಲಾ ವಲಯಗಳಲ್ಲಿ ವಿಮರ್ಶಾತ್ಮಕವಾಗಿ ಮೆಚ್ಚುಗೆ ಗಳಿಸಿ 100 ಕೋಟಿಗೂ ಹೆಚ್ಚು ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿತು.

ಜುಲೈ ಮತ್ತು ಸೆಪ್ಟೆಂಬರ್ ನಡುವೆ 50 ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆ ಕಂಡವು. ಶಿವರಾಜ್‌ಕುಮಾರ್ ಅವರ ಬಹು ನಿರೀಕ್ಷಿತ ಬೈರಾಗಿ ವಿಫಲವಾಯಿತು. ಬೆಂಕಿ, ರವಿ ಬೋಪಣ್ಣ, ಪೆಟ್ರೋಮ್ಯಾಕ್ಸ್, ತೋತಾಪುರಿ ಮತ್ತು ಮಾನ್ಸೂನ್ ರಾಗದಂತಹ ಚಲನಚಿತ್ರಗಳು ಬಿಡುಗಡೆಗೆ ಮುನ್ನ ಹೆಸರು ಮಾಡಿದರೂ ಗೆಲ್ಲಲಿಲ್ಲ. ನಂತರ ಬಂದಿದ್ದು ಕಿಚ್ಚ ಸುದೀಪ್ ಅವರ ವಿಕ್ರಾಂತ್ ರೋಣ. ಈ ಮಿಸ್ಟರಿ ಥ್ರಿಲ್ಲರ್‌ಗಾಗಿ ಅನುಪ್ ಭಂಡಾರಿ ಜೊತೆಗೂಡಿ, ಸುದೀಪ್ ಈ ಚಿತ್ರದಲ್ಲಿ ಪ್ರಯೋಗವನ್ನು ಪ್ರಯತ್ನಿಸಿದರು, ಅದು 100 ಕೋಟಿ ಕ್ಲಬ್‌ಗೆ ಪ್ರವೇಶಿಸಿತು. ಗಣೇಶ್-ಯೋಗರಾಜ್ ಭಟ್ ಅವರ ಗಾಳಿಪಟ 2 ಮತ್ತು ಶರಣ್ ಅವರ ಗುರು ಶಿಷ್ಯರು ಯಶಸ್ಸನ್ನು ಕಂಡವು. 

ನಂತರ ಬಂದಿದ್ದೇ ರಿಷಬ್ ಶೆಟ್ಟಿಯ ಕಾಂತಾರ. ಸೆಪ್ಟೆಂಬರ್ 30 ರಂದು ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಭಾರೀ ಯಶಸ್ಸು ಕಂಡ ನಂತರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಡಬ್ಬಿಂಗ್ ಆಗಿ ಅಲ್ಲಿ ಕೂಡ ಗೆಲುವು ಕಂಡಿತು.

ಮಾನವ-ಪ್ರಕೃತಿಯ ಸಂಘರ್ಷವನ್ನು ಎತ್ತಿ ತೋರಿಸುವ ಆಕ್ಷನ್ ಥ್ರಿಲ್ಲರ್, ಕರಾವಳಿಯ ಆಕರ್ಷಕ ಭೂತಕೋಲದ  ಚಿತ್ರಣಕ್ಕಾಗಿ ಮತ್ತು ರಿಷಬ್ ಶೆಟ್ಟಿಯವರ ಅದ್ಭುತ ಅಭಿನಯಕ್ಕಾಗಿ ಸಾಕಷ್ಟು ಹೆಸರು ಗಳಿಸಿತು. ಸರಿಸುಮಾರು 20 ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ನಿರ್ಮಿಸಲಾದ ಕಾಂತಾರ ಭಾರತ ಮತ್ತು ಪ್ರಪಂಚದಾದ್ಯಂತ 450 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡಿತು. 

ನಂತರ ಧನಂಜಯ್ ಅವರ ಬುಷ್ ಅಕ್ಟೋಬರ್ ನಲ್ಲಿ ಬಿಡುಗಡೆಯಾಯಿತು, ಇದು ಸಾಕಷ್ಟು ವಿವಾದಗಳನ್ನು ಎದುರಿಸಿತು, ಪುನೀತ್ ರಾಜ್ ಕುಮಾರ್ ಅವರ ಕೊನೆಯ ಗಂಧದ ಗುಡಿ ಸಾಕ್ಷ್ಯಚಿತ್ರ ಅಕ್ಟೋಬರ್ ನಲ್ಲಿ ಬಿಡುಗಡೆಯಾಗಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಕೊನೆಯ ಬಾರಿ ತೆರೆಮೇಲೆ ಕಣ್ತುಂಬಿಕೊಂಡರು. ಇದು ಕರ್ನಾಟಕದ ಸಸ್ಯ-ಪ್ರಾಣಿ ಸಂಪತ್ತು, ಪ್ರಕೃತಿ ಬಗ್ಗೆ ಪರಿಚಯಿಸಿದ ಚಿತ್ರ. ನಂತರ ಶಾಸಕ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ಅವರ ಚೊಚ್ಚಲ, ಬನಾರಸ್, ನವೆಂಬರ್‌ನಲ್ಲಿ ತೆರೆಕಂಡಿತು. 

ಹೊಸ ಪ್ರತಿಭೆಗಳ ಗುಂಪು ಕಂಬ್ಳಿಹುಳ, ಹಳದಿ ಗ್ಯಾಂಗ್ಸ್ ಮತ್ತು ಧರಣಿ ಮಂಡಲ ಮಧ್ಯದೊಳಗೆಯೊಂದಿಗೆ ಸಾಕಷ್ಟು ಛಾಪು ಮೂಡಿಸಿದವು. ದಿಲ್ ಪಸಂದ್, ರಾಣಾ, ಟ್ರಿಪಲ್ ರೈಡಿಂಗ್ ಮತ್ತು ತಿಮ್ಮಯ್ಯ ಮತ್ತು ತಿಮ್ಮಯ್ಯನಂತಹ ದೊಡ್ಡ ಚಿತ್ರಗಳ ಜೊತೆಗೆ ಬಂದರೂ ಸಾಕಷ್ಟು ಸದ್ದು ಮಾಡಿದವು.

ಡಿಸೆಂಬರ್‌ನಲ್ಲಿ ಅನೇಕ ಚಿತ್ರಗಳು ತೆರೆಕಂಡವು. ವಿಜಯಾನಂದ್, ಮತ್ತು ಶಿವಣ್ಣನ ಹೆಗ್ಗುರುತು 125 ನೇ ಚಿತ್ರ, ವೇದಾ, ಧನಂಜಯ್ ಅವರ ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ, ಹರಿಪ್ರಸಾದ್ ಜಯಣ್ಣ ಅವರ ಪದವಿ ಪೂರ್ವ ಮತ್ತು ಯೋಗಿ ಅವರ ನಾನು ಅದು ಮತ್ತು ಸರೋಜಾದಂತಹ ಆಸಕ್ತಿದಾಯಕ ಚಿತ್ರಗಳು ತೆರೆಗೆ ಬಂದಿವೆ. 

2022 ರ ಮಧ್ಯಭಾಗದಲ್ಲಿ ಕೆಜಿಎಫ್ -2 ಹ್ಯಾಂಗೊವರ್ ಹೊಂದಿದ್ದರೆ, ವರ್ಷದ ಅಂತ್ಯವು ಕಾಂತಾರ ಮಂತ್ರದ ಅಡಿಯಲ್ಲಿತ್ತು. ದೊಡ್ಡ ಹೆಸರುಗಳು, ಆಸಕ್ತಿದಾಯಕ ಪರಿಕಲ್ಪನೆಗಳು, ಕಾದಂಬರಿ ಕಲ್ಪನೆಗಳು ಮತ್ತು ಸಂಕೀರ್ಣವಾದ ನಿರೂಪಣೆಗಳ ಹೊರತಾಗಿಯೂ, ಕನ್ನಡ ಚಿತ್ರರಂಗವು ಎರಡು ಕೆ'ಗಳ... ಕಾಂತಾರ ಮತ್ತು ಕೆಜಿಎಫ್-2. ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದ್ದಂತೂ ಸುಳ್ಳಲ್ಲ. 

SCROLL FOR NEXT