ಸಿನಿಮಾ ಸುದ್ದಿ

‘ಇಂಡಿಯನ್‌ ಫಿಲ್ಮ್‌ ಪರ್ಸನಾಲಿಟಿ ಆಫ್‌ ದಿ ಇಯರ್‌’ ಪ್ರಶಸ್ತಿ ಪಡೆದ ನಟ ಚಿರಂಜೀವಿಗೆ ಪ್ರಧಾನಿ ಅಭಿನಂದನೆ

Ramyashree GN

ನವದೆಹಲಿ: ಗೋವಾದಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್ಎಫ್ಐ) 53ನೇ ಆವೃತ್ತಿಯಲ್ಲಿ ತೆಲುಗು ಸೂಪರ್‌ಸ್ಟಾರ್ ಚಿರಂಜೀವಿ ಅವರಿಗೆ ‘ಇಂಡಿಯನ್‌ ಫಿಲ್ಮ್‌ ಪರ್ಸನಾಲಿಟಿ ಆಫ್‌ ದಿ ಇಯರ್‌’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ನಟರನ್ನು ಅಭಿನಂದಿಸಿದರು.

ಈ ಕುರಿತು ಟ್ವೀಟ್ ಮಾಡಿರುವ ನರೇಂದ್ರ ಮೋದಿ, ಗೋವಾದಲ್ಲಿ ನಡೆಯುತ್ತಿರುವ ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರತಿಷ್ಠಿತ ಇಂಡಿಯನ್‌ ಫಿಲ್ಮ್‌ ಪರ್ಸನಾಲಿಟಿ ಆಫ್‌ ದಿ ಇಯರ್‌ ಪ್ರಶಸ್ತಿಗೆ ಆಯ್ಕೆಯಾದ ಚಿರಂಜೀವಿ ಅವರಿಗೆ ಅಭಿನಂದನೆಗಳು' ಎಂದು ಬರೆದಿದ್ದಾರೆ.

ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರ ಟ್ವೀಟ್ ಅನ್ನು ರೀಟ್ವೀಟ್ ಮಾಡಿ ತೆಲುಗಿನಲ್ಲೇ ಟ್ವೀಟ್ ಮಾಡಿರುವ ಪ್ರದಾನಿ, ಚಿರಂಜೀವಿ ಅವರ ನಟನಾ ಕೌಶಲ್ಯಕ್ಕಾಗಿ ನಟನನ್ನು ಹೊಗಳಿದ್ದಾರೆ.

ಗೋವಾ ಯೂನಿವರ್ಸಿಟಿಯ ಒಳಾಂಗಣ ಕ್ರೀಡಾಂಗಣದಲ್ಲಿ ಸಂಜೆ ನಡೆದ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ವರ್ಣರಂಜಿತ ಸಮಾರಂಭದಲ್ಲಿ ಸಚಿವ ಅನುರಾಗ್‌ ಠಾಕೂರ್‌ ಅವರು ಪ್ರಶಸ್ತಿಯನ್ನು ಘೋಷಿಸಿದರು. ಆದರೆ ಕಾರ್ಯಕ್ರಮದಲ್ಲಿ ನಟ ಚಿರಂಜೀವಿ ಹಾಜರಿರಲಿಲ್ಲ.

ಅನುರಾಗ್ ಠಾಕೂರ್ ಕೂಡ ತಮ್ಮ ಟ್ವಿಟರ್ ಖಾತೆಯಲ್ಲಿ ನಟನನ್ನು ಅಭಿನಂದಿಸಿದ್ದು, ಚಿರಂಜೀವಿ ಅವರು ನಟ ಮತ್ತು ನಿರ್ಮಾಪಕರಾಗಿ ಸುಮಾರು 150 ಕ್ಕೂ ಹೆಚ್ಚು ಚನಲಚಿತ್ರಗಳೊಂದಿಗೆ ಚಿತ್ರರಂಗದಲ್ಲಿ ದಶಕಗಳ ವೃತ್ತಿಜೀವನವನ್ನು ಹೊಂದಿದ್ದಾರೆ. ಅವರು ತೆಲುಗು ಚಿತ್ರರಂಗದಲ್ಲಿ ಅಗಾಧವಾಗಿ ಜನಪ್ರಿಯರಾಗಿದ್ದಾರೆ ಮತ್ತು ಹೃದಯಸ್ಪರ್ಶಿಸುವ ನಟನೆಯನ್ನು ನೀಡಿದ್ದಾರೆ. ಅವರಿಗೆ ಅಭಿನಂದನೆಗಳು' ಎಂದು ಬರೆದಿದ್ದಾರೆ.

66 ವರ್ಷದ ಚಿರಂಜೀವಿ ಅವರು ತಮ್ಮ ನಾಲ್ಕು ದಶಕಗಳ ಕಾಲದ ವೃತ್ತಿಜೀವನದಲ್ಲಿ 10 ಫಿಲ್ಮ್‌ಫೇರ್ ಮತ್ತು 4 ನಂದಿ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಸ್ತಿಗಳು ಮತ್ತು ಪುರಸ್ಕಾರಗಳನ್ನು ಪಡೆದಿದ್ದಾರೆ. ಅವರು ಇತ್ತೀಚೆಗೆ 'ಗಾಡ್‌ಫಾದರ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು, ಇದರಲ್ಲಿ ಸಲ್ಮಾನ್ ಖಾನ್ ಕೂಡ ನಟಿಸಿದ್ದಾರೆ.

SCROLL FOR NEXT