ಸಿನಿಮಾ ಸುದ್ದಿ

ವೀರಗಾಸೆ ಕಲಾವಿದರಿಗೆ, ಕಲೆಗೆ ಅವಮಾನ ಮಾಡಿಲ್ಲ, ಇಂದು ಕಲಾವಿದರನ್ನು ಭೇಟಿ ಮಾಡುತ್ತೇನೆ: ಡಾಲಿ ಧನಂಜಯ್

Sumana Upadhyaya

ಬೆಂಗಳೂರು: ಡಾಲಿ ಧನಂಜಯ್ ಅಭಿನಯದ ರಾಜ್ಯಾದ್ಯಂತ ಬಿಡುಗಡೆಯಾಗಿ ಪ್ರದರ್ಶನ ಕಾಣುತ್ತಿರುವ ‘ಹೆಡ್ ಬುಷ್’ (head bush) ಸಿನಿಮಾದಲ್ಲಿ ವೀರಭದ್ರ ದೇವರ ವೀರಗಾಸೆಗೆ ಅವಮಾನ ಮಾಡಲಾಗಿದೆ ಎಂದು ವಿವಾದ ಹುಟ್ಟಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಡಾಲಿ ಧನಂಜಯ್ ಮತ್ತು ಚಿತ್ರತಂಡದ ಬಗ್ಗೆ ಪರ-ವಿರೋಧ ಪ್ರತಿಕ್ರಿಯೆ ಕೇಳಿಬರುತ್ತಿದೆ. ಜಯರಾಜ್ ಪಾತ್ರಧಾರಿ ಡಾಲಿ ಧನಂಜಯ್ ಫೈಟಿಂಗ್ ಸನ್ನಿವೇಶದಲ್ಲಿ ವೀರಗಾಸೆ ಕಲಾವಿದರಿಗೆ ಒದೆಯಲಾಗಿದೆ. ಅದು ಕಲೆ ಮತ್ತು ವೀರಭದ್ರ ದೇವರಿಗೆ ಮಾಡಿದ ಅಪಮಾನ ಎಂದು ಕಲಾವಿದರು ಮತ್ತು ಹಲವು ಸಾರ್ವಜನಿಕರು ಆಕ್ಷೇಪಿಸಿದ್ದಾರೆ. 

ವೀರಗಾಸೆ (Veeragase) ಕಲೆಗೆ ಮತ್ತು ಅದಕ್ಕೆ ಸಂಬಂಧಿಸಿದ ವೀರಭದ್ರ ದೇವರಿಗೆ ಅವಮಾನ ಮಾಡಿದ ನಿರ್ದೇಶಕರು, ಕಲಾವಿದರು ಹಾಗೂ ನಿರ್ಮಾಪಕರು ಕೂಡಲೇ ಕ್ಷಮೆ ಕೇಳಬೇಕು ಹಾಗೂ ಆ ದೃಶ್ಯವನ್ನು ಸಿನಿಮಾದಿಂದ ಕೈ ಬಿಡಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ. 

ಈ ಬಗ್ಗೆ ಡಾಲಿ ಧನಂಜಯ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ತಾನೂ ಕೂಡ ವೀರಭದ್ರ ದೇವರ ಆರಾಧಕ ಆಗಿರುವುದರಿಂದ ಯಾವುದೇ ಕಾರಣಕ್ಕೂ ಅವಮಾನ ಮಾಡಿಲ್ಲ. ನಾನು ಚಿಕ್ಕವನಿಂದಲೇ ವೀರಗಾಸೆ ಕಲೆಯ ಆರಾಧಕ. ಚಿತ್ರದಲ್ಲಿ ನಿಜವಾದ ವೀರಗಾಸೆ ಕಲಾವಿದರ ಪಾತ್ರಧಾರಿಗಳಿಗೆ ನಾನು ಹೊಡೆಯುವ ದೃಶ್ಯವಲ್ಲ ಅದು, ವೀರಗಾಸೆ ಕಲಾವಿದರಿಗೆ ಅವಮಾನ ಮಾಡಿದ ಪಾತ್ರಧಾರಿಗಳಿಗೆ ನಾನು ಜಯರಾಜ್ ಪಾತ್ರಧಾರಿ ಹೊಡೆಯುವ ದೃಶ್ಯವದು. ನಿಜವಾದ ಕಲಾವಿದರ ಪಾತ್ರಧಾರಿಗಳು ಹಿಂದೆ ಚಪ್ಪಲಿ ಇಲ್ಲದೆ ಇದ್ದಾರೆ. ನಕಲಿ ಪಾತ್ರಧಾರಿಗಳು ಕಾಲಿಗೆ ಶೂ ಧರಿಸಿಕೊಂಡಿದ್ದಾರೆ. ನಾನು ವೀರಗಾಸೆ ಪಾತ್ರಗಳನ್ನು ಶಾಲೆ, ಕಾಲೇಜುಗಳಲ್ಲಿ ಮಾಡುತ್ತಿದ್ದೆ, ನನಗೆ ಆ ಕಲೆಯ ಬಗ್ಗೆ ಅಪಾರ ಗೌರವವಿದೆ, ಅವರಿಗೆ ಅವಮಾನ ನಾನು ಮಾಡಲು ಸಾಧ್ಯವೇ ಇಲ್ಲ, ಈ ಪಾತ್ರಗಳನ್ನು ಚರ್ಚಿಸಿಯೇ ಮಾಡಿದ್ದೇವೆ ಎಂದರು.

ಇಂದು ವೀರಗಾಸೆ ಕಲಾವಿದರನ್ನು ಬೆಂಗಳೂರಿನಲ್ಲಿ ಭೇಟಿ ಮಾಡುತ್ತಿದ್ದೇನೆ. ಕಲಾವಿದರೊಂದಿಗೆ ಚರ್ಚೆ ಮಾಡಿ, ಈ ವಿಷಯವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುತ್ತೇನೆ. ನನಗೂ ವೀರಭದ್ರ ದೇವರ ಮೇಲೆ ಅಪಾರ ಭಕ್ತಿ. ವೀರಗಾಸೆ ಕಲೆಯನ್ನು ತುಂಬಾ ಇಷ್ಟ ಪಡುವವನು. ಹಾಗಾಗಿ ನನ್ನಿಂದ ಯಾವುದೇ ಅವಮಾನ ಆಗುವಂತಹ ಕೆಲಸ ಆಗಲ್ಲ ಎಂದಿದ್ದಾರೆ.

SCROLL FOR NEXT