ಸಿನಿಮಾ ಸುದ್ದಿ

ರಾಜವರ್ಧನ್ ರ 'ಗಜರಾಮ'ನಿಗೆ ತಪಸ್ವಿನಿ ಪೂಣಚ್ಚ ನಾಯಕಿ!

Srinivasamurthy VN

ಬೆಂಗಳೂರು: ಬಿಚ್ಚುಗತ್ತಿಯ ಮೂಲಕ ಸ್ಯಾಂಡಲ್‌ವುಡ್‌ ಸಿನಿರಸಿಕರ ಮನಗೆದ್ದಿದ್ದ ನಟ ರಾಜವರ್ಧನ್ ರ ಮುಂದಿನ ಚಿತ್ರ ‘ಗಜರಾಮ’ ಸೆಟ್ಟೇರಿದ್ದು, ಈ ಚಿತ್ರದ ನಾಯಕಿಯಾಗಿ ಹರಿಕಥೆ ಅಲ್ಲ ಗಿರಿಕಥೆ ಖ್ಯಾತಿಯ ತಪಸ್ವಿನಿ ಪೂಣಚ್ಚ ಆಯ್ಕೆಯಾಗಿದ್ದಾರೆ.

ಯುವ ನಿರ್ದೇಶಕ ಸುನೀಲ್ ಕುಮಾರ್ ವಿ.ಎ ಈ ಗಜರಾಮ ಚಿತ್ರವನ್ನು ನಿರ್ದೇಶಿಸುತ್ತಿದ್ದು, ತಪಸ್ವಿನಿ ಈಗಾಗಲೇ ಕಥೆ ಕೇಳಿ ಓಕೆ ಮಾಡಿದ್ದಾರೆ.  ಈ ಹಿಂದೆ ಇದೇ ಗಜರಾಮ ಚಿತ್ರತಂಡ ತಮ್ಮ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಮೂಲಕ  ಸುದ್ದಿ ಮಾಡಿತ್ತು. ಇದೀಗ ನಾಯಕಿ ಆಯ್ಕೆ ಮೂಲಕ ಮತ್ತೆ ಸುದ್ದಿಯಾಗುತ್ತಿದೆ.

ರಾಜವರ್ಧನ್ ರ ಗಜರಾಮ ಚಿತ್ರಕ್ಕೆ ನಾಯಕಿಯಾಗಿ ಕೊಡಗಿನ ಬೆಡಗಿ ತಪಸ್ವಿನಿ ಪೂಣಚ್ಚ ತೆರೆ ಹಂಚಿಕೊಳ್ಳುತ್ತಿದ್ದಾರೆ. ಹರಿಕಥೆ ಅಲ್ಲ ಗಿರಿಕಥೆ ಚಿತ್ರದಲ್ಲಿ ನಾಯಕಿಯಾಗಿ ಗಮನ ಸೆಳೆದಿದ್ದ ತಪಸ್ವಿನಿ ಪೂಣಚ್ಚ ಈಗ ‘ಗಜರಾಮ’ನ ಜೋಡಿಯಾಗಿದ್ದಾರೆ. ನಾಯಕಿಯಾಗಿ ತಪಸ್ವಿನಿಗಿದು ಎರಡನೇ ಸಿನಿಮಾ. ಈ ಕುರಿತು ಮಾತನಾಡಿರುವ ತಪಸ್ವಿನಿ, 'ಹರಿಕಥೆ ಅಲ್ಲ ಗಿರಿಕಥೆ ಚಿತ್ರಕ್ಕೆ ನಾನು ಸೆಲೆಕ್ಟ್ ಆಗಿದ್ದೇ ಆಕಸ್ಮಿಕವಾಗಿ. ಸಿನಿಮಾ ಇಂಡಸ್ಟ್ರಿಗೆ ಬರಬೇಕು ಅನ್ನೋದು ನನ್ನ ಉದ್ದೇಶ ಆಗಿರಲಿಲ್ಲ. ಆದರೆ ಇನ್ ಸ್ಟಾಗ್ರಾಮ್ ನಲ್ಲಿ ಒಂದು ಫೋಟೋ ನೋಡಿ ಚಿತ್ರತಂಡ ನನ್ನ ಸಂಪರ್ಕ ಮಾಡಿದರು. ಕಥೆ ಕೇಳಿ ಇಷ್ಟ ಆಯ್ತು, ಒಪ್ಪಿಕೊಂಡೆ. ಇದೀಗ ‘ಗಜರಾಮ’ ಸಿನಿಮಾ ಅವಕಾಶ ಸಿಕ್ಕಿದೆ. ಹರಿಕಥೆ ಅಲ್ಲ ಗಿರಿಕಥೆ ಚಿತ್ರದ ನಂತರ ಸಾಕಷ್ಟು ಸಿನಿಮಾ ಆಫರ್ ಬರ್ತಿದೆ. ಆದರೆ ಗಜರಾಮ ಸಿನಿಮಾ ಪಾತ್ರ ಇಷ್ಟ ಆಯ್ತು. ಹಳ್ಳಿ ಹುಡುಗಿ ಪಾತ್ರದಲ್ಲಿ ಈ ಸಿನಿಮಾದಲ್ಲಿ ನಾನು ಕಾಣಿಸಿಕೊಳ್ಳುತ್ತಿದ್ದೇನೆ ಎಂದು ನಟಿ ತಪಸ್ವಿನಿ ಹೇಳಿದ್ದಾರೆ.

ಈ ಹಿಂದೆ ಯೋಗರಾಜ್ ಭಟ್ ಮತ್ತು ಸೂರಿ ಅವರೊಂದಿಗೆ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿ ಅನುಭವ ಇರುವ ಸುನೀಲ್ ಕುಮಾರ್ ‘ಗಜರಾಮ’ ಸಿನಿಮಾ ಮೂಲಕ ಪೂರ್ಣ ಪ್ರಮಾಣ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ. ಆಕ್ಷನ್ ಮಾಸ್ ಎಂಟಟೈನರ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರ್ಕಕೆ ಮನೋಮೂರ್ತಿ ಸಂಗೀತ ನೀಡಿದ್ದು, ಕೆ.ಎಸ್.ಚಂದ್ರಶೇಖರ್ ಛಾಯಾಗ್ರಾಹಣವಿದೆ., ಜ್ಞಾನೇಶ್ ಬಿ ಮಠದ್ ಸಂಕಲನ, ಧನಂಜಯ್ ನೃತ್ಯ ನಿರ್ದೇಶನ, ಚಿನ್ಮಯ್ ಭಾವಿಕೆರೆ, ಜಯಂತ್ ಕಾಯ್ಕಿಣಿ ಸಾಹಿತ್ಯವಿದೆ. ಲೈಫ್ ಲೈನ್ ಫಿಲ್ಮಂ ಪ್ರೊಡಕ್ಷನ್‌ನಡಿ ನರಸಿಂಹ ಮೂರ್ತಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು ಮಲ್ಲಿಕಾರ್ಜುನ್ ಕಾಶಿ ಮತ್ತು ಝವೀಯರ್ ಫರ್ನಾಂಡಿಸ್ ಕೂಡ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. 

ಇದೇ ತಿಂಗಳಾಂತ್ಯಕ್ಕೆ ಗಜರಾಮ ಸಿನಿಮಾ ಸೆಟ್ಟೇರಲಿದೆ. ಶಿಷ್ಯ ದೀಪಕ್, ಶರತ್ ಲೋಹಿತಾಶ್ವ ಮತ್ತು ಶೋಭ್ ರಾಜ್ ಪ್ರಮುಖ ಈ ಚಿತ್ರದ ವಿಶೇಷ ಪಾತ್ರಗಳಲ್ಲಿದ್ದಾರೆ. ಮತ್ತೊಂದೆಡೆ, ರಾಜವರ್ಧನ್ ಪ್ರಣಯಂ ಮತ್ತು ಹಿರಣ್ಯ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದು, ಎರಡೂ ಚಿತ್ರಗಳು ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿವೆ.

SCROLL FOR NEXT