ಸಿನಿಮಾ ಸುದ್ದಿ

ಶ್ವಾನಗಳೇ ನಟಿಸಿರುವ ಮಲಯಾಳಂ ಸಿನಿಮಾ ವಿತರಣಾ ಹಕ್ಕು ಕನ್ನಡದ ಕೆಆರ್‌ಜಿ ಸ್ಟುಡಿಯೋಸ್ ಪಾಲು!

Ramyashree GN

ಶ್ವಾನ ಪ್ರೇಮದ ಕುರಿತಾದ ಕನ್ನಡದ '777 ಚಾರ್ಲಿ' ಈಗಾಗಲೇ ಚಿತ್ರರಸಿಕರ ಮನಗೆದ್ದು, ಹಿಟ್ ಆಗಿದೆ. ರಕ್ಷಿತ್ ಶೆಟ್ಟಿ ನಟನೆಯ ಈ ಸಿನಿಮಾವನ್ನು ಕನ್ನಡಿಗರು ಮಾತ್ರವಲ್ಲದೆ ಹಲವು ಭಾಷೆಯ ಜನ ವೀಕ್ಷಿಸಿ ಮೆಚ್ಚಿಕೊಂಡಿದ್ದಾರೆ. ಇದೀಗ, ಶ್ವಾನಗಳೇ ತುಂಬಿರುವ ಚಿತ್ರವೊಂದು ಮಲಯಾಳಂನಲ್ಲಿ ಬರುತ್ತಿದೆ. ಈ ಸಿನಿಮಾವನ್ನು ಕನ್ನಡದ ವಿತರಣಾ ಸಂಸ್ಥೆಯಾದ ಕೆಆರ್‌ಜಿ ಸ್ಟುಡಿಯೋಸ್ ವಿಶ್ವದಾದ್ಯಂತ ಚಿತ್ರ ಬಿಡುಗಡೆಯ ಹಕ್ಕುಗಳನ್ನು ಪಡೆದುಕೊಂಡಿದೆ.

ದೇವನ್ ಇದೇ ಮೊದಲ ಬಾರಿಗೆ ನಿರ್ದೇಶಿಸಿದ 'ವಾಲಟ್ಟಿ' ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಒಂದು ಅದ್ಭುತ ಪರಿಕಲ್ಪನೆ ಎಂದು ಹೇಳಲಾಗಿದೆ. ಸಿನಿಮಾದಲ್ಲಿ ನಾಯಿಗಳು ಮತ್ತು ಇತರ ಸಾಕುಪ್ರಾಣಿಗಳು ಮನುಷ್ಯರನ್ನು ತಮ್ಮ ಜಗತ್ತಿಗೆ ಆಹ್ವಾನಿಸುತ್ತವೆ. ಪ್ರೀತಿ, ಹಾಸ್ಯ ಮತ್ತು ಸಾಹಸದಿಂದ ತುಂಬಿದ ರಿಫ್ರೆಶ್ ದೃಷ್ಟಿಕೋನವನ್ನು ನೀಡುತ್ತವೆ.

ಈ ಚಿತ್ರವು ಸಾಕು ನಾಯಿಗಳ ಗ್ಯಾಂಗ್ ಒಟ್ಟಿಗೆ ಅದ್ಭುತ ಸಾಹಸವನ್ನು ಕೈಗೊಳ್ಳುವ ಬಗ್ಗೆ ಹೃದಯಸ್ಪರ್ಶಿ ಕಥೆಯನ್ನು ಹೇಳುತ್ತದೆ ಮತ್ತು ಮಲಯಾಳಂನ ಜನಪ್ರಿಯ ನಟರಾದ ರೋಷನ್ ಮ್ಯಾಥ್ಯೂ, ಸೌಬಿನ್ ಶಾಹಿರ್, ಇಂದ್ರನ್ಸ್, ಸನ್ನಿ ವೇಯ್ನ್, ಸೈಜು ಕುರುಪ್ ಮತ್ತು ಇತರರು ನಾಯಿಗಳ ಪಾತ್ರಗಳಿಗೆ ಧ್ವನಿ ನೀಡಿದ್ದಾರೆ.

ಕೆಆರ್‌ಜಿ ಸ್ಟುಡಿಯೋಸ್‌ನ ಸಂಸ್ಥಾಪಕ ಕಾರ್ತಿಕ್ ಗೌಡ ಮಾತನಾಡಿ, ಈ ಚಲನಚಿತ್ರವು ತನ್ನ ವಿಶಿಷ್ಟ ಮತ್ತು ತಾಜಾ ಕಥೆ ಹೇಳುವ ಮೂಲಕ ಎಲ್ಲಾ ವಯೋಮಾನದ ಪ್ರೇಕ್ಷಕರನ್ನು ಆಕರ್ಷಿಸುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸುತ್ತಾರೆ. 

ತೆಲುಗಿನಲ್ಲಿ ಚಿತ್ರವನ್ನು ಪ್ರಸ್ತುತಪಡಿಸಲಿರುವ ದಿಲ್ ರಾಜು ಮತ್ತು ಹಿಂದಿಯಲ್ಲಿ ಚಿತ್ರವನ್ನು ವಿತರಿಸಲಿರುವ ಅನಿಲ್ ಥಡಾನಿ ಅವರ ಸಹಯೋಗವನ್ನು ಅವರು ಪ್ರಕಟಿಸುತ್ತಾರೆ. ಸಾಗರೋತ್ತರ ವಿತರಣೆಯನ್ನು ಹೋಮ್ ಸ್ಕ್ರೀನ್ ಎಂಟರ್ಟೈನ್ಮೆಂಟ್ ನಿರ್ವಹಿಸುತ್ತದೆ.

ವಾಲಟ್ಟಿಯನ್ನು ವಿಜಯ್ ಬಾಬು ಪ್ರಸ್ತುತಪಡಿಸಿದ್ದಾರೆ ಮತ್ತು ಫ್ರೈಡೆ ಫಿಲ್ಮ್ ಹೌಸ್ ನಿರ್ಮಿಸಿದ್ದು, ಮಲಯಾಳಂನಲ್ಲಿ ಜುಲೈ 14 ರಂದು ಬಿಡುಗಡೆಯಾಗಲಿದೆ. ಅದಾದ ಒಂದು ವಾರದ ನಂತರ ಕನ್ನಡ, ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ವಿಶ್ವದಾದ್ಯಂತ ಬಿಡುಗಡೆ ಮಾಡಲಾಗುತ್ತದೆ.

SCROLL FOR NEXT