ಸಿನಿಮಾ ಸುದ್ದಿ

ಕೆಜಿಎಫ್ ಸಿನಿಮಾ ಬರೋಕ್ಕೆ ಮುಂಚೆ ಯಶ್‌ ಯಾರು? ಆತ ಎಷ್ಟು ದೊಡ್ಡ ನಟ ಹೇಳಿ?: ಅಲ್ಲು ಅರವಿಂದ್

Shilpa D

ತೆಲುಗಿನ ಜನಪ್ರಿಯ ಸಿನಿಮಾ ನಿರ್ಮಾಪಕರು, ಸ್ಟಾರ್ ನಟ ಅಲ್ಲು ಅರ್ಜುನ್ ಅವರ ತಂದೆಯೂ ಆಗಿರುವ ಅಲ್ಲು ಅರವಿಂದ್ ಅವರು ಯಾವುದೋ ವಿಷಯಕ್ಕೆ ಯಶ್ ಅವರನ್ನು ಉದಾಹರಿಸಿ, ‘ಕೆಜಿಎಫ್’ಗೆ ಮುನ್ನ ಯಶ್ ಸ್ಟಾರ್ ಆಗಿರಲಿಲ್ಲ ಎಂದಿದ್ದಾರೆ.

ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ 'ಕೋಟಬೊಮ್ಮಲಿ ಪಿಎಸ್' ಚಿತ್ರದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ನಿರ್ಮಾಪಕ ಅಲ್ಲು ಅರವಿಂದ್ ಭಾಗಿ ಆಗಿದ್ದರು. ಇದೇ ವೇಳೆ ಸ್ಟಾರ್ ನಟರ ಸಂಭಾವನೆ ಕುರಿತು ಪತ್ರಕರ್ತರ ಪ್ರಶ್ನೆಗಳಿಗೆ ಅರವಿಂದ್ ಉತ್ತರಿಸಿದ್ದರು.

ಗೀತಾ ಆರ್ಟ್ಸ್ ಬ್ಯಾನರ್‌ನಲ್ಲಿ ಸಣ್ಣ ಚಿತ್ರಗಳನ್ನು ಬಿಟ್ಟರೆ ದೊಡ್ಡ ಚಿತ್ರಗಳು ಏಕೆ ಬರುತ್ತಿಲ್ಲ ಎನ್ನುವ ಪ್ರಶ್ನೆ ಎದುರಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಅಲ್ಲು ಅರವಿಂದ್ ಸಿನಿಮಾ ನಿರ್ಮಾಣ ವೆಚ್ಚವೇ ಕಾರಣ ಎಂದರು. ಬಳಿಕ ಚಿತ್ರದ ನಿರ್ಮಾಣ ವೆಚ್ಚದ ವಿಚಾರಕ್ಕೆ ಬಂದರೆ ಎಲ್ಲರೂ ಸ್ಟಾರ್ ನಟರ ಸಂಭಾವನೆ ಬಗ್ಗೆಯೇ ಮಾತನಾಡುತ್ತಿದ್ದಾರೆ. ಭಾರೀ ಸಂಭಾವನೆ ಪಡೆಯುವ ಹೀರೋಗಳಲ್ಲಿ ನಿಮ್ಮ ಕುಟುಂಬದ ಒಬ್ಬ ಹೀರೋ ಇದ್ದಾರೆ ಅಲ್ಲವೇ ಎಂದು ಪತ್ರಕರ್ತರೊಬ್ಬರು ಕೇಳಿದ್ದಾರೆ. ಇದಕ್ಕೆ ಅರವಿಂದ್ ಕೊಟ್ಟ ಉತ್ತರ ವಿಚಿತ್ರವಾಗಿತ್ತು.

ಇತ್ತೀಚೆಗೆ ಹೆಚ್ಚಾದ ಸಿನಿಮಾ ಬಜೆಟ್‌ನಲ್ಲಿ ಹೀರೋಗಳು ಗರಿಷ್ಠ 20 ರಿಂದ 25%ರಷ್ಟು ಸಂಭಾವನೆ ರೂಪದಲ್ಲಿ ಪಡೆಯುತ್ತಾರೆ. ಹಾಗಾಗಿ ಹೀರೋಗಳಿಂದ ಖರ್ಚು ಹೆಚ್ಚುತ್ತದೆ ಎಂದು ಹೇಳುವುದಕ್ಕಿಂತ, ನಿರ್ಮಾಣ ವೆಚ್ಚ ಹೆಚ್ಚಿಸಿದ ಸಿನಿಮಾಗಳಲ್ಲಿ ಹೀರೋಗಳು ಇರ್ತಾರೆ ಎಂದು ನನಗೆ ಅನ್ನಿಸುತ್ತಿದೆ. ಕೆಲ ಸಿನಿಮಾಗಳ ಬಜೆಟ್ ಎಷ್ಟಿದೆ ಎಂದು ನೀವೇ ಗಮನಿಸಿ.

ಆ ಬಜೆಟ್‌ನಲ್ಲಿ ನಟರ ಸಂಭಾವನೆ ಎಷ್ಟು ಎಂದು ಲೆಕ್ಕ ಹಾಕಿಕೊಳ್ಳಿ, ಕಡಿಮೆ ಇರುತ್ತದೆ. ಹೀರೋಗಳಿಂದಾಗಿ ಪ್ರೊಡಕ್ಷನ್ ಬಜೆಟ್ ಹೆಚ್ಚಿದೆ, ಅದಕ್ಕೆ ನಿರ್ಮಾಪಕರು ಸಿನಿಮಾ ಮಾಡದೇ ದೂರ ಉಳಿಯುತ್ತಿದ್ದಾರೆ ಎನ್ನುವುದು ಸರಿಯಲ್ಲ ಎಂದ ಅವರು, ಈಗ ದೊಡ್ಡ ಚಿತ್ರಗಳನ್ನು ಅದ್ಧೂರಿಯಾಗಿ ತೋರಿಸದ ಹೊರತು ಪ್ರೇಕ್ಷಕರು ಒಪ್ಪಿಕೊಳ್ಳುವುದಿಲ್ಲ.

ಹೀರೋಗಳು ಯಾರೇ ಆಗಿರಲಿ, ಸಿನಿಮಾವನ್ನು ಅದ್ಧೂರಿಯಾಗಿ ತೋರಿಸಬೇಕು. 'KGF' ಸಿನಿಮಾ ಬರುವ ಮುನ್ನ ಆತ (ಯಶ್) ಯಾರು? ಆತ ಎಷ್ಟು ದೊಡ್ಡ ಹೀರೋ? ಸಿನಿಮಾವನ್ನು ಅದ್ಧೂರಿಯಾಗಿ ತೋರಿಸಿದ್ದರಿಂದ ಆ ಸಿನಿಮಾ ಗೆದ್ದಿತು. ಇದೊಂದು ಉದಾಹರಣೆ ಅಷ್ಟೇ' ಎಂದು ಅಲ್ಲು ಅರವಿಂದ್ ಹೇಳಿದ್ದಾರೆ.

ನಟರ ಸಂಭಾವನೆ ವಿಚಾರದ ಬಗ್ಗೆ ಮಾತನಾಡುವ ಭರದಲ್ಲಿ ನಟ ಯಶ್ ಹೆಸರು ಎಳೆದು ತಂದು ಅಲ್ಲು ಅರವಿಂದ್ ಈಗ ಸುದ್ದಿಯಾಗಿದ್ದಾರೆ.

SCROLL FOR NEXT