ಸಿನಿಮಾ ಸುದ್ದಿ

ಜೈಲರ್, ಗದರ್ 2 ಸಿನಿಮಾಗಳ ನಡುವೆಯೂ ಗೆದ್ದ ಕನ್ನಡದ ಚಿತ್ರಗಳು; ಸಿನಿಪ್ರೇಮಿಗಳ ಫುಲ್ ಮಾರ್ಕ್ಸ್!

Ramyashree GN

ಬೆಂಗಳೂರು: ಕನ್ನಡದ ‘ಕೌಸಲ್ಯಾ ಸುಪ್ರಜಾ ರಾಮ’ ಮತ್ತು ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರಗಳು ಹಿಟ್ ಆಗಿ ಸಿನಿಪ್ರೇಮಿಗಳ ಮನ ಗೆಲ್ಲುತ್ತಿವೆ. ಬ್ಲಾಕ್‌ಬಸ್ಟರ್‌ ಚಿತ್ರಗಳಾದ 'ಗದರ್ 2' ಮತ್ತು ರಜಿನಿಕಾಂತ್ ನಟನೆಯ 'ಜೈಲರ್' ಸಿನಿಮಾಗಳ ಸುತ್ತಲಿನ ದೊಡ್ಡ ಹೈಪ್ ನಡುವೆಯೂ ಕೌಟುಂಬಿಕ ಪ್ರೇಕ್ಷಕರನ್ನು ಥಿಯೇಟರ್‌ಗೆ ಸೆಳೆಯುವಲ್ಲಿ ಈ ಎರಡೂ ಚಿತ್ರಗಳು ಯಶಸ್ವಿಯಾಗಿವೆ.

'ಕೌಸಲ್ಯಾ ಸುಪ್ರಜಾ ರಾಮ' ಚಿತ್ರಕ್ಕೆ ಐಎಂಡಿಬಿ 8 ರೇಟಿಂಗ್ ನೀಡಿದ್ದು, ರಕ್ಷಿತ್ ಶೆಟ್ಟಿ ನಟನೆಯ 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರಕ್ಕೆ 9.1 ರೇಟಿಂಗ್ ನೀಡಿದೆ.

‘ಜೈಲರ್’ ಮತ್ತು ‘ಗದರ್ 2’ ಚಿತ್ರಗಳ ಬಿಡುಗಡೆಯಿಂದಾಗಿ ಆರಂಭದಲ್ಲಿ ‘ಕೌಸಲ್ಯಾ ಸುಪ್ರಜಾ ರಾಮ’ ಹಲವು ಥಿಯೇಟರ್‌ಗಳಿಂದ ಎತ್ತಂಗಡಿ ಆದರೂ, ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಲ್ಲಿ ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿತು. ರೊಮ್ಯಾಂಟಿಕ್ ಕಾಮಿಡಿ ಎಂಟರ್‌ಟೈನರ್ ಆಗಿರುವ ಈ ಸಿನಿಮಾವು ಮೊದಲ ದಿನದಿಂದಲೂ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದೆ ಮತ್ತು ಇಂದಿಗೂ ಉತ್ತಮ ಪ್ರದರ್ಶನ ಕಾಣುತ್ತಿದೆ.

ಡಾರ್ಲಿಂಗ್ ಕೃಷ್ಣ, ಬೃಂದಾ ಆಚಾರ್ಯ, ಮಿಲನ ನಾಗರಾಜ್, ರಂಗಾಯಣ ರಘು ಪ್ರಮುಖ ಪಾತ್ರಗಳಲ್ಲಿದ್ದಾರೆ. ಶಶಾಂಕ್ ಚಿತ್ರವನ್ನು ನಿರ್ದೇಶಿಸಿದ್ದು, ಮಾಜಿ ಸಚಿವ ಬಿಸಿ ಪಾಟೀಲ್ ಚಿತ್ರ ನಿರ್ಮಿಸಿದ್ದಾರೆ.

‘777 ಚಾರ್ಲಿ’ ಖ್ಯಾತಿಯ ಸೂಪರ್‌ ಸ್ಟಾರ್ ರಕ್ಷಿತ್ ಶೆಟ್ಟಿ ಅವರ ಬಹು ನಿರೀಕ್ಷಿತ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ನಿರೀಕ್ಷೆಗೂ ಮೀರಿ ಯಶಸ್ಸು ಕಾಣುತ್ತಿದೆ. ನಟಿ ರುಕ್ಮಿಣಿ ವಸಂತ್ ನಟನೆಗೆ ಎಲ್ಲರೂ ಫಿದಾ ಆಗಿದ್ದಾರೆ. 

ಕನ್ನಡ ಬೆಳ್ಳಿತೆರೆಯಲ್ಲಿ ನಿರೂಪಿತವಾದ ಅತ್ಯುತ್ತಮ ಪ್ರೇಮಕಥೆಗಳಲ್ಲಿಯೇ ಈ ಸಿನಿಮಾ ಒಂದಾಗಿದ್ದು, ಈ ಯಶಸ್ಸಿನಿಂದ ಉತ್ತೇಜಿತವಾಗಿರುವ ಚಿತ್ರತಂಡ ತೆಲುಗು ಭಾಷೆಯಲ್ಲಿ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಪ್ರೇಕ್ಷಕರೊಂದಿಗೆ ಚಿತ್ರದ ಯಶಸ್ಸನ್ನು ಆಚರಿಸಲು ಚಿತ್ರತಂಡ ರಾಜ್ಯಾದ್ಯಂತ ಪ್ರವಾಸವನ್ನೂ ಘೋಷಿಸಿತ್ತು. ಚಿತ್ರದ ಎರಡನೇ ಭಾಗ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗುತ್ತಿದ್ದು, ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.

ನಿರ್ದೇಶಕ ಹೇಮಂತ್ ರಾವ್ ಚಿತ್ರರಂಗಕ್ಕೆ ಮತ್ತೊಂದು ಸೂಪರ್‌ಹಿಟ್ ಚಿತ್ರವನ್ನು ನೀಡಿದ್ದಾರೆ ಮತ್ತು ಚರಣ್ ರಾಜ್ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತ ಪ್ರೇಕ್ಷಕರನ್ನು ಆಕರ್ಷಿಸಿದೆ.

ಇತ್ತೀಚಿನ ದಿನಗಳಲ್ಲಿ ದೊಡ್ಡ ಸಿನಿಮಾಗಳ ಬಿಡುಗಡೆಯ ನಡುವೆಯೂ ಈ ಎರಡೂ ಸಿನಿಮಾಗಳ ಪ್ರದರ್ಶನ ಮತ್ತು ಕಮರ್ಷಿಯಲ್ ಯಶಸ್ಸು ಕನ್ನಡ ಸಿನಿ ಪ್ರೇಮಿಗಳ ಸಂತೋಷಕ್ಕೆ ಕಾರಣವಾಗಿದೆ.

SCROLL FOR NEXT