ಸಿನಿಮಾ ಸುದ್ದಿ

ಡಿಟೆಕ್ಟಿವ್ ತೀಕ್ಷ್ಣ; ನನ್ನ ಮೇಲೆ ನಂಬಿಕೆ ಇಟ್ಟ ನಿರ್ದೇಶಕರು, ನಿರ್ಮಾಪಕರಿಗೆ ಕ್ರೆಡಿಟ್ ಸಲ್ಲಬೇಕು: ಪ್ರಿಯಾಂಕಾ ಉಪೇಂದ್ರ

Ramyashree GN

ನಟಿ ಪ್ರಿಯಾಂಕಾ ಉಪೇಂದ್ರ ಅವರ 50ನೇ ಚಿತ್ರವಾದ 'ಡಿಟೆಕ್ಟಿವ್ ತೀಕ್ಷ್ಣ' ಬಿಡುಗಡೆಗೆ ಸಜ್ಜಾಗುತ್ತಿದೆ. ಇತ್ತೀಚೆಗಷ್ಟೇ ಚಿತ್ರದ ಟ್ರೇಲರ್ ಅನ್ನು ರಿಯಲ್‌ಸ್ಟಾರ್ ಉಪೇಂದ್ರ ಮತ್ತು ಇತರ ಗಣ್ಯರು ಸಮಾರಂಭದಲ್ಲಿ ಬಿಡುಗಡೆ ಮಾಡಿದರು. ತ್ರಿವಿಕ್ರಮ್ ರಘು ಅವರ ನಿರ್ದೇಶನದ ಈ ಚಿತ್ರವು ಕ್ರೈಮ್ ಥ್ರಿಲ್ಲರ್ ಆಗಿದೆ ಮತ್ತು ಪ್ರಿಯಾಂಕಾ ಅವರು ತೀಕ್ಷ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಉಪೇಂದ್ರ, ಪತ್ತೇದಾರಿ ಪಾತ್ರವು ಬೆಳ್ಳಿತೆರೆಗೆ ಮಾತ್ರ ಸೀಮಿತವಾಗಿಲ್ಲ. ಇದು ಪ್ರತಿ ಮನೆಯನ್ನೂ ವ್ಯಾಪಿಸಿದೆ. ಪ್ರತಿಯೊಬ್ಬ ಪತಿಗೂ ಒಬ್ಬ ಪತ್ತೇದಾರಿ ಹೆಂಡತಿ ಇರುತ್ತಾಳೆ ಎಂದು ತಿಳಿಸಿದರು.

ಪ್ರಿಯಾಂಕಾ ಉಪೇಂದ್ರ

ಚಿತ್ರದ ಬಗ್ಗೆ ಮಾತನಾಡಿದ ಉಪ್ಪಿ, 'ಡಿಟೆಕ್ಟಿವ್ ತೀಕ್ಷ್ಣ ಪಾತ್ರವನ್ನು ಎಲ್ಲಾ ಆಯಾಮಗಳಲ್ಲಿ ದೋಷರಹಿತವಾಗಿ ಚಿತ್ರಿಸಲಾಗಿದೆ. ಚಿತ್ರವು ಕೇವಲ ದೃಶ್ಯ ವೈಭವ ಮಾತ್ರವಲ್ಲ, ತನ್ನ ಸಂಗೀತದಿಂದಲೂ ಸೆಳೆಯುತ್ತದೆ. ಪ್ರಿಯಾಂಕಾ ಅವರು ಈ ಚಿತ್ರದ ಮೂಲಕ 50 ಸಿನಿಮಾಗಳಲ್ಲಿ ನಟಿಸಿದ ಸಾಧನೆ ಮಾಡಿದ್ದಾರೆ. ಅವರ 50ನೇ ಚಿತ್ರದೊಂದಿಗೆ ಅವರಿಗೆ ಯಶಸ್ಸನ್ನು ಬಯಸುತ್ತೇವೆ ಮತ್ತು ಇದು ಅವರ ಶತ ಸಿನಿಮಾಗಳ ಪಯಣಕ್ಕೆ ಮೆಟ್ಟಿಲಾಗಲಿ' ಎಂದು ಹೇಳಿದರು.

ನಿರ್ದೇಶಕ ತ್ರಿವಿಕ್ರಮ್ ರಘು ಮಾತನಾಡಿ, ಪ್ರಿಯಾಂಕಾ ಅವರ ನಟನೆಯ ಚಿತ್ರವನ್ನು ನಿರ್ದೇಶಿಸುವ ಭಾಗ್ಯ ಸಿಕ್ಕಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು. 'ಪ್ರಿಯಾಂಕಾ ಅವರ ಅಚಲವಾದ ಬದ್ಧತೆಯು ಈ ಸಿನಿಮಾದ ಮೂಲ ಆಧಾರವಾಗಿದೆ ಮತ್ತು ಕಲಾವಿದರಿಂದ ತಂತ್ರಜ್ಞರವರೆಗೆ ಇಡೀ ತಂಡವು ಈ ರೋಮಾಂಚಕ ಕಥೆಗೆ ಜೀವ ತುಂಬಲು ಸಾಕಷ್ಟು ಕೊಡುಗೆ ನೀಡಿದ್ದಾರೆ' ಎಂದರು.

ಈ ಚಿತ್ರ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಮುಂದಿನ ಎರಡು ತಿಂಗಳಲ್ಲಿ ತೆರೆಗೆ ಬರಲಿದೆ ಎಂದು ರಘು ಬಹಿರಂಗಪಡಿಸಿದ್ದಾರೆ.

ಪ್ರಿಯಾಂಕಾ ಉಪೇಂದ್ರ ಮಾತನಾಡಿ, 'ನಾನು 50 ಚಿತ್ರಗಳಲ್ಲಿ ನಟಿಸುವ ಭಾಗ್ಯವನ್ನು ಪಡೆದಿದ್ದೇನೆ ಎಂಬ ಅಂಶವನ್ನು ನೆನಪಿಸಿಕೊಂಡಾಗ, ನನ್ನ ಮೇಲೆ ನಂಬಿಕೆ ಇಟ್ಟಿರುವ ನಿರ್ದೇಶಕರು ಮತ್ತು ನಿರ್ಮಾಪಕರಿಗೆ ನಾನು ಕ್ರೆಡಿಟ್ ಸಲ್ಲಿಸಬೇಕು. ನಾನು ಯಾವಾಗಲೂ ಎಲ್ಲಾ ಕೆಡೆಗಳ ಇನ್ಪುಟ್ ಅನ್ನು ಗೌರವಿಸುತ್ತೇನೆ ಮತ್ತು ಎಚ್ಚರಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇನೆ. ಈ ಚಿತ್ರದಲ್ಲಿ ನಾನು ನಿರೂಪಿಸುವ ಪಾತ್ರವು ಮಾನಸಿಕವಾಗಿ ಬಲಿಷ್ಠತೆಯನ್ನು ಕೇಳುತ್ತದೆ ಮತ್ತು ಈ ಚಿತ್ರವು ಆಕರ್ಷಕ ಫ್ರಾಂಚೈಸಿಗೆ ಅಡಿಪಾಯ ಒದಗಿಸುತ್ತದೆ ಎಂದು ನಾನು ಭಾವಿಸುತ್ತೇನೆ' ಎಂದರು.

ಕುತೂಹಲಕಾರಿಯಾಗಿ, ಚಿತ್ರತಂಡ ಕನ್ನಡ, ತೆಲುಗು, ತಮಿಳು, ಮಲಯಾಳಂ, ಒರಿಯಾ ಮತ್ತು ಬೆಂಗಾಲಿ ಸೇರಿದಂತೆ ಏಳು ಭಾಷೆಗಳಲ್ಲಿ ಚಿತ್ರ ಬಿಡುಗಡೆಗೆ ತಯಾರಿ ನಡೆಸುತ್ತಿದೆ.

ಡಿಟೆಕ್ಟಿವ್ ತೀಕ್ಷ್ಣ ಚಿತ್ರಕ್ಕೆ ಪಿ ರೋಹಿತ್ ಅವರ ಸಂಗೀತ ಸಂಯೋಜನೆಯಿದ್ದು, ಮನು ದಾಸಪ್ಪ ಅವರ ಛಾಯಾಗ್ರಹಣವಿದೆ.

SCROLL FOR NEXT