ಸಿನಿಮಾ ಸುದ್ದಿ

ಜೀವನದಲ್ಲಿ ಕಷ್ಟದ ಸಂದರ್ಭ ಎದುರಿಸುತ್ತಿರುವವರಿಗೆ ವಿಜಯ ಪ್ರಸಾದ್ ಅವರ ಚಿತ್ರಗಳೇ ಔಷಧವಾಗಿರುತ್ತವೆ: ಸುಮನ್ ರಂಗನಾಥ್

Ramyashree GN

ಕೆಲ ನಿರ್ದಿಷ್ಟ ಪಾತ್ರಗಳಿಗೆ ಹೆಸರುವಾಸಿಯಾಗಿರುವ ನಟಿ ಸುಮನ್ ರಂಗನಾಥ್, ನಿರ್ದೇಶಕ ವಿಜಯ ಪ್ರಸಾದ್ ಅವರ ನೆಚ್ಚಿನ ನಟಿ ಕೂಡ ಹೌದು. ಏಕೆಂದರೆ, ನಿರ್ದೇಶಕರ ಚೊಚ್ಚಲ ಸಿದ್ಲಿಂಗು ಚಿತ್ರದಿಂದ ಪ್ರಾರಂಭವಾದ ಈ ಸಹಯೋಗವು ತೋತಾಪುರಿ 2 ವರೆಗೆ ಮುಂದುವರಿದಿದೆ. 

'ಪ್ರತಿಯೊಂದು ಸಿನಿಮಾದಲ್ಲೂ ಅವರು ನನಗೆ ವಿಭಿನ್ನ ಮತ್ತು ಆಕರ್ಷಕ ಪಾತ್ರಗಳನ್ನು ನೀಡುತ್ತಾರೆ. ಅವರ ಸಿನಿಮಾಗಳಲ್ಲಿ ಯಾವಾಗಲೂ ಒಂದು ಸಂದೇಶ ಮತ್ತು ಹಾಸ್ಯ ಇರುತ್ತದೆ. ಅವರು ತಮ್ಮ ಸಿನಿಮಾಗಳಲ್ಲಿ ಭಾವನಾತ್ಮಕವಾದ ಪಾತ್ರದಲ್ಲಿ ನಟಿಸಲು ಅವಕಾಶ ನೀಡುತ್ತಾರೆ. ಚಿತ್ರದ ಸಂದೇಶವನ್ನು ಪರಿಣಾಮಕಾರಿಯಾಗಿ ರವಾನಿಸಲು ಹಾಸ್ಯದೊಂದಿಗೆ ಭಾವನಾತ್ಮಕ ವಿಚಾರಗಳನ್ನು ಬಹಲ ಕೌಶಲದಿಂದ ಸಂಯೋಜಿಸುತ್ತಾರೆ. ಅವರ ಸಿನಿಮಾಗಳು ಜೀವನದಲ್ಲಿ ಕಷ್ಟದ ಸಂದರ್ಭಗಳನ್ನು ಎದುರಿಸುತ್ತಿರುವವರಿಗೆ ಹಿತವಾದ ಔಷಧವಿದ್ದಂತೆ' ಎಂದು ತೋತಾಪುರಿ 2 ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿರುವ ನಟಿ ಸುಮನ್ ರಂಗನಾಥ್ ಹೇಳುತ್ತಾರೆ. 

'ಅವರ (ವಿಜಯ ಪ್ರಸಾದ್) ಕಥೆಗಳು ಜೀವನದ ಪಾಠಗಳನ್ನು ಸಹ ನೀಡುತ್ತವೆ. ಹೀಗಾಗಿಯೇ, ವಿಜಯ ಪ್ರಸಾದ್ ಅವರ ಚಿತ್ರಗಳು ಯಾವಾಗಲೂ ಪ್ರತ್ಯೇಕವಾಗಿ ನಿಲ್ಲುತ್ತವೆ. ನಾನು ಅವರ ಚಿತ್ರಗಳನ್ನು ಕೇವಲ ಹಾಸ್ಯ ಅಥವಾ ರಾಜಕೀಯ ಚಿತ್ರಗಳೆಂದು ವರ್ಗೀಕರಿಸುವುದಿಲ್ಲ. ಬದಲಿಗೆ, ನಾನು ಬಹುಶಃ ಈ ಪ್ರಕಾರಕ್ಕೆ ‘ವಿಜಯತ್ವ!’ ಎಂದು ಹೆಸರಿಸುತ್ತೇನೆ' ಎಂದು ಹೇಳುತ್ತಾರೆ. 

ಕೆಎ ಸುರೇಶ್ ನಿರ್ಮಾಣದ ತೋತಾಪುರಿ 2 ಚಿತ್ರ ಇದೇ ವಾರ ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಚಿತ್ರದಲ್ಲಿ ಜಗ್ಗೇಶ್ ಮತ್ತು ಡಾಲಿ ಧನಂಜಯ್ ಕೂಡ ನಟಿಸಿದ್ದಾರೆ.

ತೋತಾಪುರಿ ಸಿನಿಮಾದಲ್ಲೂ ವಿಕ್ಟೋರಿಯಾ ಪಾತ್ರದಲ್ಲಿ ಸುಮನ್ ರಂಗನಾಥ್ ಅವರು ನಟಿಸಿದ್ದರು. ತೋತಾಪುರಿ 2ನಲ್ಲಿನ ತಮ್ಮ ಪಾತ್ರದ ಬಗ್ಗೆ ಮಾತನಾಡುವ ಅವರು, 'ಆಕೆ ಏಕೆ ಮತ್ತು ಹೇಗೆ  ಕ್ರೈಸ್ತ ಸನ್ಯಾಸಿನಿಯಾಗುತ್ತಾಳೆ ಎಂಬುದೇ ಪಾತ್ರದ ಪ್ರಮುಖ ಅಂಶ. ಚಿತ್ರವು ವಿವಿಧ ಧರ್ಮಗಳ ಕೋಮು ಸೌಹಾರ್ದತೆ ಕುರಿತು ಹೇಳುತ್ತದೆ ಮತ್ತು ವಿಭಿನ್ನ ಪಾತ್ರಗಳ ಮೂಲಕ ಜೀವನದ ವಿವಿಧ ಹಂತಗಳನ್ನು ಸೆರೆಹಿಡಿಯುತ್ತದೆ. ನನ್ನ ಬಹುತೇಕ ದೃಶ್ಯಗಳು ಡಾಲಿ ಧನಂಜಯ್ ಅವರ ಜೊತೆಯಾಗಿದ್ದರೆ, ಜಗ್ಗೇಶ್, ಅದಿತಿ ಪ್ರಭುದೇವ ಮತ್ತು ವೀಣಾ ಸುಂದರ್ ಅವರ ದೃಶ್ಯಗಳೂ ಇವೆ. ಒಟ್ಟಾರೆ ಹೇಳುವುದಾದರೆ ಇದೊಂದು ಕಾಮಿಡಿ ಎಂಟರ್‌ಟೈನರ್ ಚಿತ್ರವಾಗಿದೆ' ಎಂದು ಅವರು ಹೇಳುತ್ತಾರೆ.

ತೋತಾಪುರಿ ಸಿನಿಮಾದೊಂದಿಗೆ ಸುಮನ್ ರಂಗನಾಥ್ ಅವರು 'ರವಿಕೆ ಪ್ರಸಂಗ' ಎಂಬ ಹಾಸ್ಯಮಯ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 'ನಾನು ನಟ ಸುಚೇಂದ್ರ ಪ್ರಸಾದ್ ಅವರ ಜೊತೆಗೆ ಇನ್ನೂ ಹೆಸರಿಡದ ಚಿತ್ರವೊಂದರಲ್ಲಿ ಕೆಲಸ ಮಾಡಲಿದ್ದೇನೆ. ಇದು ಗಂಡ-ಹೆಂಡತಿ ಸಂಬಂಧದ ಸುತ್ತ ಕೇಂದ್ರೀಕೃತವಾಗಿರುವ ಚಿತ್ರವಾಗಿದ್ದು, ಇನ್ನೂ ಚಿತ್ರೀಕರಣವನ್ನು ಪ್ರಾರಂಭಿಸಬೇಕಾಗಿದೆ' ಎನ್ನುತ್ತಾರೆ ಸುಮನ್.

SCROLL FOR NEXT