ರಿಯಲ್ ಸ್ಟಾರ್ ಉಪೇಂದ್ರ ನಟನೆಯ 'ಯುಐ' ಹಾಗೂ ಅಭಿನಯ ಚಕ್ರವರ್ತಿ ಸುದೀಪ್ ನಟನೆಯ 'ಮ್ಯಾಕ್ಸ್' ಚಿತ್ರಗಳು 5 ದಿನಗಳ ಅಂತರದಲ್ಲಿ ತೆರೆಗೆ ಬರುತ್ತಿದ್ದು, ಈ ನಡುವಲ್ಲೇ ಎರಡೂ ಚಿತ್ರಗಳ ನಡುವೆ ಕ್ಲ್ಯಾಶ್ ಆಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಡಿಸೆಂಬರ್ 20ರಂದು ಉಪೇಂದ್ರ ಅಭಿನಯದ ‘ಯುಐ’ ಸಿನಿಮಾ ರಿಲೀಸ್ ಆಗುತ್ತಿದ್ದು, ಡಿ.25ರಂದು ಮ್ಯಾಕ್ಸ್ ಚಿತ್ರ ಬಿಡುಗಡೆಯಾಗುತ್ತಿದೆ. ಎರಡು ಚಿತ್ರಗಳು ಸ್ಟಾರ್ ನಟರ ಚಿತ್ರಗಳಾಗಿದ್ದು, ಎರಡೂ ಚಿತ್ರಗಳ ಬಿಡುಗಡೆ ದಿನಾಂಕಗಳ ನಡುವಿನ ಅಂತರ ಬಹಳ ಕಡಿಮೆಯಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸುದೀಪ್ ಅವರು, ಉಪೇಂದ್ರ ಅವರ ಸ್ಟಾರ್ಡಮ್ ಬಗ್ಗೆ ನನಗೆ ಅನುಮಾನವೇ ಇಲ್ಲ. ಚಿತ್ರರಂಗಕ್ಕೆ ಅವರು ಬಹಳ ಕೊಡುಗೆ ನೀಡಿದ್ದಾರೆ. ನಾವೆಲ್ಲ ಅವರನ್ನು ನೋಡಿ ಕಲಿತುಕೊಂಡು ಬಂದವರು. ಉಪೇಂದ್ರ ಅವರಿಗೆ ಇಲ್ಲದೇ ಇರುವ ತಲೆ ನೋವು ನಮಗೆ-ನಿಮಗೆ ಯಾಕೆ? ಅವರೇ ಇದರ ಬಗ್ಗೆ ಎಲ್ಲಿಯೂ ಮಾತನಾಡುತ್ತಿಲ್ಲ. ಎರಡು ಕನ್ನಡ ಸಿನಿಮಾ ಬರೋಕೆ ಕಾರಣ ಇದೆ. ಕನ್ನಡ ಸಿನಿಮಾ ಬರದಿದ್ದಾಗಲೇ ಬೇರೆ ಭಾಷೆಯ ಸಿನಿಮಾಗಳ ಹಾವಳಿ ನಡೆಯೋದು ಎಂದು ಹೇಳಿದರು.
ನನ್ನ ಸಿನಿಮಾ ಅಲ್ಲ ಎಂದರೂ ಉಪೇಂದ್ರ ಅವರ ಸಿನಿಮಾವನ್ನು ದಯವಿಟ್ಟು ನಂಬಿ. ನನಗೆ ಅವರ ಮೇಲೆ ಅಪಾರ ಗೌರವ ಇದೆ. ಯಾವಾಗ ನಿರ್ದೇಶನ ಮಾಡುತ್ತೀರಿ ಎಂದು ನಾನು ಆಗಾಗ ಅವರನ್ನು ಒತ್ತಾಯಿಸುತ್ತಿದ್ದೆ. ಅವರ ಸಿನಿಮಾ ಕೂಡ ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸಬೇಕು ಎಂದು ಹಾರೈಸುತ್ತೇನೆ. ನಮ್ಮಿಂದ ತೊಂದರೆಯಾಗಿದೆ ಎಂದು ಅವರು ಹೇಳಿಲ್ಲ, ಅವರಿಂದ ನಮಗೆ ತೊಂದರೆ ಆಗಿದೆ ಎಂದು ನಾವು ಹೇಳಿಲ್ಲ.
ನಿರ್ಮಾಪಕರು ಅಳೆದು ತೂಗಿ ಬಿಡುಗಡೆ ದಿನಾಂಕವನ್ನು ನಿಗದಿ ಮಾಡಿದ್ದಾರೆ. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಕೂಡ ಸಿನಿಮಾ ಬಿಡುಗಡೆಯಾಗುತ್ತಿರುವ ಕಾರಣ ಎಲ್ಲವನ್ನೂ ನೋಡಿಕೊಂಡು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಬೇಕಾಗುತ್ತದೆ. ಇದರಲ್ಲಿ ಉಪೇಂದ್ರ ಅವರ ಜೊತೆ ಸ್ಪರ್ಧೆ ಮಾಡುವ ವಿಚಾರವೇ ಬರುವುದಿಲ್ಲ, ನಾನು ಅವರ ಸಿನಿಮಾ ನೋಡಿಕೊಂಡು ಬೆಳೆದವನು. ಈ ರಿಲೀಸ್ನಿಂದ ಉಪೇಂದ್ರ ಅವರ ತಂಡಕ್ಕೆ ತೊಂದರೆ ಆಗಲ್ಲ. ನಮ್ಮಲ್ಲಿ ಕ್ಲ್ಯಾಶ್ ಇಲ್ಲ. ಗುರು ಬರುತ್ತಿದ್ದಾರೆ. ಸ್ವಲ್ಪ ದಿನ ಆದ್ಮೇನೆ ನಾನು ಶಿಷ್ಯನಾಗಿ ಬರುತ್ತಿದ್ದೇನೆ. ನಮ್ಮ ಚಿತ್ರರಂಗದಲ್ಲಿ ಯಾವ ಹೀರೋಗಳ ಜೊತೆಗೂ ಕ್ಲ್ಯಾಶ್ ಇಲ್ಲ ಎಂದು ತಿಳಿಸಿದರು.