ಹೊಯ್ಸಳ, ಕ್ಷೇತ್ರಪತಿ ಮತ್ತು ಸಲಾರ್ ಸಿನಿಮಾಗಳಲ್ಲಿ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡು ಕನ್ನಡ ಸಿನಿಪ್ರೇಮಿಗಳ ಗಮನಸೆಳೆದಿದ್ದ ನವೀನ್ ಶಂಕರ್ ಅಭಿನಯದ ಬಹುನಿರೀಕ್ಷಿತ 'ನೋಡಿದವರು ಏನಂತಾರೆʼ ಚಿತ್ರ ಜನವರಿ.31ಕ್ಕೆ ತೆರೆಗೆ ಬರಲು ಸಜ್ಜಾಗಿದೆ.
ನಟನ ಪಾತ್ರ "ನಮ್ಮೆಲ್ಲರ ಪ್ರತಿಬಿಂಬ"ವಾಗಿರುತ್ತದೆ ಎಂದು ನಿರ್ದೇಶಕ ಕುಲದೀಪ್ ಕಾರಿಯಪ್ಪ ಅವರು ಹೇಳಿದ್ದಾರೆ. ನಮ್ಮೆಲ್ಲರ ಒಳಗಿರುವ ಒಬ್ಬ ಮನುಷ್ಯನ ಕಥೆ ಹಾಗೂ ಭಾವನೆಗಳನ್ನು ಹೇಳುತ್ತದೆ. ಜೀವನದಲ್ಲಿ ನಮ್ಮ ಅಸ್ತ್ವಿತ್ವದ ಬಗ್ಗೆಯೇ ನಮಗೆ ಕಾಡುವ ಪ್ರಶ್ನೆಗಳು, ಪ್ರೀತಿ, ಆತ್ಮಾವಲೋಕನ ಹಾಗೂ ಬಾಂಧವ್ಯಗಳ ಸುತ್ತ ಈ ಸಿನಿಮಾ ಕಥೆ ಸಾಗುತ್ತದೆ ಎಂದು ತಿಳಿಸಿದ್ದಾರೆ.
ಚಿತ್ರದಲ್ಲಿ ನಾನು ಅದು ಮತ್ತು ಸರೋಜ ಖ್ಯಾತಿಯ ಅಪೂರ್ವ ಭಾರಧ್ವಾಜ್ ನಟಿಸಿದ್ದು, ಚಿತ್ರಕ್ಕ ಆಶ್ವಿನ್ ಕೆನೆಡಿ ಛಾಯಾಗ್ರಾಹಣ, ಮಯೂರೆಶ್ ಅಧಿಕಾರಿ ಹೃದಯಸ್ಪರ್ಶಿ ಸಂಗೀತವನ್ನು ಸಂಯೋಜಿಸಿದ್ದಾರೆ. ಮನು ಶೆಡಗಾರ್ ಸಂಕಲನ ಚಿತ್ರಕ್ಕಿದೆ.
ಕುಲದೀಪ್ ಕಾರಿಯಪ್ಪ ಅವರು ಬರೆದ ಕಥೆ ಮತ್ತು ಚಿತ್ರಕಥೆಗೆ ಅವರೊಂದಿಗೆ ಸಾಯಿ ಶ್ರೀನಿಧಿ, ಪ್ರಜ್ವಲ್ ರಾಜ್, ಮತ್ತು ಸುನಿಲ್ ವೆಂಕಟೇಶ್ ಸಂಭಾಷಣೆ ಬರೆದಿದ್ದಾರೆ.
ಖ್ಯಾತ ಲೇಖಕ ಹಾಗು ಸಾಹಿತಿ ಜಯಂತ್ ಕಾಯ್ಕಿಣಿ ಎರಡು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಒಂದು ಹಾಡಿಗೆ ಲೈಲಾ ಪದ ಪೊಣಿಸಿದ್ದಾರೆ. ಸಾಧು ಕೋಕಿಲ, ಅನನ್ಯಾ ಭಟ್ ಮತ್ತು ಕೀರ್ತನ್ ಹೊಳ್ಳಾ ಹಾಗೂ ಅಮೇರಿಕಾದ ಗಾಯಕ ಜೋರ್ಡನ್ ರಾಬರ್ಟ್ ಕಿರ್ಕ್ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಚಿತ್ರ ಜನವರಿ 31, 2025ಕ್ಕೆ ಬಿಡುಗಡೆಯಾಗೆ ಸಜ್ಜಾಗಿದೆ.