ಮುಂಬೈ: ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ಖಳನಾಯಕ ಪಾತ್ರಕ್ಕಾಗಿ ಮೊದಲ ಬಾರಿಗೆ ಬರೊಬ್ಬರಿ 200 ಕೋಟಿ ರೂ. ಸಂಭಾವನೆ ಪಡೆಯುವ ಮೂಲಕ ಕನ್ನಡದ ಸ್ಟಾರ್ ಇದೀಗ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ನಟರ ಪಾತ್ರಕ್ಕಿಂತ ವಿಲನ್ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಬಂದಿದೆ. ಅಷ್ಟೇ ಅಲ್ಲ, ನಾಯಕರ ಸಂಭಾವನೆಯೂ ಹೆಚ್ಚಾಗಿರುವುದರಿಂದ ಖಳನಾಯಕರ ಸಂಭಾವನೆಯೂ ಹೆಚ್ಚಿದೆ. ಈಗ ಹೈ-ಬಜೆಟ್ ಚಿತ್ರಗಳಲ್ಲಿ ಮುಖ್ಯವಾಹಿನಿಯ ಹೀರೋಗಳು ವಿಲನ್ ಆಗುವ ಸಂಖ್ಯೆ ಹೆಚ್ಚುತ್ತಿದೆ. ಅವರಲ್ಲಿ ಕನ್ನಡದ ನಟರೊಬ್ಬರು ಚಿತ್ರವೊಂದಕ್ಕೆ 200 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ.
ಚಿತ್ರರಂಗದಲ್ಲಿ ಸಾಮಾನ್ಯವಾಗಿ ಬಿ-ಟೌನ್ ಮಂದಿಯೇ ಅತಿಹೆಚ್ಚು ಸಂಭಾವನೆ ಪಡೆದುಕೊಳ್ಳುತ್ತಿದ್ದರು. ಬಳಿಕ ದಕ್ಷಿಣದ ಸ್ಟಾರ್ ಗಳಾದ ರಜನಿಕಾಂತ್, ಕಮಲ್ ಹಾಸನ್ ಮತ್ತು ಪ್ರಭಾಸ್ ಸೇರಿದಂತೆ ಹಲವು ನಟರು ದುಪಟ್ಟು ಸಂಭಾವನೆ ಪಡೆಯುತ್ತಿರುವುದು ವರದಿಯಾಗಿದೆ. ಇದೀಗ ಬಾಲಿವುಡ್ ನ್ ಶಾರುಖ್ ಖಾನ್, ಸಲ್ಮಾನ್, ರಣಬೀರ್ ಕಪೂರ್ ಸೇರಿದಂತೆ ದಕ್ಷಿಣ ನಟರ ಸಂಭಾವನೆಯನ್ನು ಮೀರಿಸಿ ನಮ್ಮ ಕನ್ನಡ ನಟ ಇತಿಹಾಸ ಬರೆದಿದ್ದಾರೆ.
ಅವರು ಬೇರೆ ಯಾರು ಅಲ್ಲ, ನಮ್ಮ ಚಿತ್ರರಂಗದ ಖ್ಯಾತಿಯನ್ನು ವಿಶ್ವಾದ್ಯಂತ ಪಸರಿಸಿದ ಕೆಜಿಎಫ್ ಖ್ಯಾತಿ ರಾಕಿಂಗ್ ಸ್ಟಾರ್ ಯಶ್. ಬಾಲಿವುಡ್ ನ ನಿತೇಶ್ ತಿವಾರಿ ನಿರ್ದೇಶದಲ್ಲಿ ಮೂಡಿ ಬರುತ್ತಿರುವ ರಾಮಾಯಣದಲ್ಲಿ ಚಿತ್ರದಲ್ಲಿ ಯಶ್ ರಾವಣ ಪಾತ್ರ ನಿರ್ವಹಿಸುತ್ತಿದ್ದು, ಈ ಪಾತ್ರಕ್ಕೆ ಬರೊಬ್ಬರಿ 200 ಕೋಟಿ ರೂ. ಸಂಭಾವನೆ(ವಿತರಣೆಯ ಪಾಲು ಮತ್ತು ಸಿನಿಮಾದ ಶುಲ್ಕ) ಇದೆ ಎಂದು ವರದಿಯಾಗಿದೆ. ಅಲ್ಲದೇ, ಈ ಚಿತ್ರದಲ್ಲಿನ ರಾಮನ ಪಾತ್ರಧಾರಿ ರಣಬೀರ್ ಕಪೂರ್ ಗಿಂತ ದುಪಟ್ಟು ಎಂದು ಹೇಳಲಾಗುತ್ತಿದೆ.