ದಿಯಾ ಚಿತ್ರದಲ್ಲಿನ ತಮ್ಮ ಅದ್ವಿತೀಯ ಅಭಿನಯಕ್ಕೆ ಹೆಸರಾದ ನಟ ಪೃಥ್ವಿ ಅಂಬಾರ್ ಇದೀಗ ನಿರ್ದೇಶನದತ್ತ ಹೊರಳಿದ್ದಾರೆ. ಅವರು ತುಳು ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದಾರೆ. 'ಚಿತ್ರ ನಿರ್ದೇಶನ ಮಾಡಬೇಕೆನ್ನುವ ಆಸೆ ಯಾವಾಗಲೂ ನನ್ನ ಮನಸ್ಸಿನಲ್ಲಿ ಉಳಿದುಕೊಂಡಿತ್ತು. ಚಿತ್ರವು ಫೆಬ್ರುವರಿಯಲ್ಲಿ ಸೆಟ್ಟೇರಲಿದೆ' ಎನ್ನುತ್ತಾರೆ ಪೃಥ್ವಿ. ಸದ್ಯ ಲೈಫ್ ಈಸ್ ಬ್ಯೂಟಿಫುಲ್ ಮತ್ತು ಭುವನಂ ಗಗನಂ ಸಿನಿಮಾಗಳ ಬಿಡುಗಡೆಗೆ ಎದುರು ನೋಡುತ್ತಿರುವ ನಟ, ಚೌಕಿದಾರ್ ಮತ್ತು ನಾಗತಿಹಳ್ಳಿ ಚಂದ್ರಶೇಖರ್ ಅವರ ಮುಂಬರುವ ಯೋಜನೆಯ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ.
ತುಳು ಸಿನಿಮಾ ಮೂಲಕವೇ ನಾನು ನನ್ನ ನಟನೆಯನ್ನು ಆರಂಭಿಸಿದೆ. ಅಲ್ಲಿಯೇ ನನ್ನ ನಿರ್ದೇಶನದ ಪಯಣವನ್ನು ಆರಂಭಿಸಬೇಕು ಎನಿಸಿತು. ಚಿತ್ರವು ಕನ್ನಡಕ್ಕೂ ಡಬ್ ಆಗಿ ಬಿಡುಗಡೆಯಾಗಲಿದೆ. ನಿರ್ದೇಶನದೊಂದಿಗೆ ನಾನು ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ನಾನು ತುಳು ಚಿತ್ರರಂಗದ ನಟರನ್ನೇ ಆಯ್ಕೆ ಮಾಡುತ್ತಿದ್ದೇನೆ. ಇಡೀ ಚಿತ್ರವನ್ನು ಮಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗುವುದು, ಆ ಪ್ರದೇಶದ ಸಾರವನ್ನು ಸೆರೆಹಿಡಿಯಲಾಗುತ್ತದೆ ಎಂದು ಹೇಳುತ್ತಾರೆ ಪೃಥ್ವಿ. ಚಿತ್ರವು ಸದ್ಯ ಪ್ರಿ-ಪ್ರೊಡಕ್ಷನ್ ಹಂತದಲ್ಲಿದ್ದು, ಪೃಥ್ವಿ ತಂಡ ಕಟ್ಟುತ್ತಿದ್ದಾರೆ.
ತಮ್ಮ ನಿರ್ದೇಶನದ ಕನಸಿನ ಬಗ್ಗೆ ಮಾತನಾಡುತ್ತಾ, ನಟಿಸುವ ಅವಕಾಶ ಆಕಸ್ಮಿಕವಾಗಿ ಸಿಕ್ಕಿತು. ನಟನೆಯ ಬಗ್ಗೆ ನಾನು ಯೋಚಿಸಿರಲೇ ಇಲ್ಲ. ಆದರೂ, ಅದು ತಾನಾಗೇ ಒಲಿದು ಬಂತು. ಆದರೆ ನಿರ್ದೇಶನ ಮಾಡಬೇಕೆನ್ನುವುದು ಮಾತ್ರ ನನ್ನ ಮನಸ್ಸಿನಲ್ಲಿತ್ತು. ಮುಂದಿನ ದಿನಗಳಲ್ಲಿ ನಾನು ನಂಬುವ ರೀತಿಯ ಚಲನಚಿತ್ರಗಳನ್ನು ಮಾಡಲು ನಾನು ಬಯಸುತ್ತೇನೆ. ನನ್ನ ಚೊಚ್ಚಲ ನಿರ್ದೇಶನದ ಚಿತ್ರದ ಬಗೆಗಿನ ಹೆಚ್ಚಿನ ಮಾಹಿತಿಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸುತ್ತೇನೆ ಎಂದು ಅವರು ಹೇಳುತ್ತಾರೆ.