ನವದೆಹಲಿ: ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಪುಷ್ಪ 2' ಬಾಕ್ಸ್ ಆಫೀಸ್‌ನಲ್ಲಿ ಓಟ ಮುಂದುವರಿಸಿದೆ. ಬಿಡುಗಡೆಯಾಗಿ ಮೂರು ವಾರವಾಗಿದ್ದರೂ ಹಣ ಗಳಿಕೆಯಲ್ಲಿ ಮುನ್ನುಗ್ಗುತ್ತಲೇ ಇದೆ. ವರ್ಷಾಂತ್ಯವಾಗಿರುವುದರಿಂದ ಮತ್ತಷ್ಟು ಸದ್ದು ಮಾಡುವ ಸಾಧ್ಯತೆ ಇದೆ ಎಂದು ಸಿನಿಮಾ ವಿಶ್ಲೇಷಕರು ಊಹಿಸಿದ್ದಾರೆ.
ಹೊಸ ಚಿತ್ರಗಳ ಬಿಡುಗಡೆಯ ನಡುವೆಯೂ 'ಪುಷ್ಪ 2' ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಕರೆತರುವಲ್ಲಿ ಯಶಸ್ವಿಯಾಗಿದೆ. ಇತರ ಸಿನಿಮಾಗಳಿಂದ ಪುಷ್ಪ 2 ಸಿನಿಮಾದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಖ್ಯಾತ ಸಿನಿಮಾ ವಿಮರ್ಶಕ ತರಣ್ ಆದರ್ಶ್ ಹೇಳಿದ್ದಾರೆ.
ಬಿಡುಗಡೆಯಾದ ಮೂರನೇ ಸೋಮವಾರದಂದು, ಪುಷ್ಪ 2 ಎಲ್ಲ ಭಾಷೆಗಳಲ್ಲಿ 12.25 ಕೋಟಿ ರೂ.ಗಳನ್ನು ಗಳಿಸಿದೆ. ಈ ಮೂಲಕ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ಒಟ್ಟು 1,062.6 ಕೋಟಿ ರೂ. ಗಳಿಸಿದೆ. ಹಿಂದಿ ಭಾಷೆಯಲ್ಲಿಯೇ ಚಿತ್ರವು 689.4 ಕೋಟಿ ರೂ. ಸಂಗ್ರಹ ಮಾಡಿದೆ ಎಂದಿದ್ದಾರೆ.
'ಪುಷ್ಪ 2' ಅನ್ನು ತಡೆಯಲು ಸಾಧ್ಯವಿಲ್ಲ. ಅದು ತಡೆಯಲಾಗದ ಶಕ್ತಿ. ಪುಷ್ಪ 2 ಸಿನಿಮಾ ಮೂರನೇ ವಾರಾಂತ್ಯಕ್ಕೆ 50 ಕೋಟಿ ರೂ.ಗೂ ಅಧಿಕ ಸಂಗ್ರಹಿಸಿದೆ. ಇತರ ಹೊಸ ಚಿತ್ರಗಳ ಬಿಡುಗಡೆಯ ಹೊರತಾಗಿಯೂ ಪುಷ್ಪ ಪ್ರೇಕ್ಷಕರ ಜನಪ್ರಿಯ ಆಯ್ಕೆಯಾಗಿ ಮುಂದುವರಿದಿದೆ. ಸತತ ಮೂರು ವಾರಾಂತ್ಯದಲ್ಲಿಯೂ ಅಗ್ರಸ್ಥಾನ ಕಾಯ್ದುಕೊಂಡಿದೆ. ಕ್ರಿಸ್‌ಮಸ್ ಮತ್ತು ಹೊಸ ವರ್ಷದ ರಜಾದಿನಗಳು ಚಿತ್ರದ ಓಟಕ್ಕೆ ಮತ್ತಷ್ಟು ಸಹಕಾರಿಯಾಗಲಿದೆ ಎಂದು ತರಣ್ ಆದರ್ಶ್ ಬರೆದುಕೊಂಡಿದ್ದಾರೆ.
'ಪುಷ್ಪ 2' ಸಿನಿಮಾ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿದ್ದರೂ, ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಸಂಗ್ರಹ ಕಾಣುತ್ತಿದೆ.
ಪುಷ್ಪ 2 ಚಿತ್ರಕ್ಕೆ ಸುಕುಮಾರ್ ಆ್ಯಕ್ಷನ್ ಕಟ್ ಹೇಳಿದ್ದು, ಮೈತ್ರಿ ಮೂವೀ ಮೇಕರ್ಸ್‌ನ ನವೀನ್ ಯೆರ್ನೇನಿ ಮತ್ತು ವೈ ರವಿಶಂಕರ್ ಅವರು ಸುಕುಮಾರ್ ರೈಟಿಂಗ್ಸ್ ಸಹಯೋಗದೊಂದಿಗೆ ನಿರ್ಮಿಸಿದ್ದಾರೆ.
ಚಿತ್ರದಲ್ಲಿ ಅಲ್ಲು ಅರ್ಜುನ್, ಫಹಾದ್ ಫಾಸಿಲ್, ರಶ್ಮಿಕಾ ಮಂದಣ್ಣ, ಧನಂಜಯ್, ರಾವ್ ರಮೇಶ್, ಸುನಿಲ್, ಅನಸೂಯಾ ಭಾರದ್ವಾಜ್ ಮತ್ತು ಅಜಯ್ ಘೋಷ್ ನಟಿಸಿದ್ದಾರೆ.