ಬೆಂಗಳೂರು: ಡಿಸೆಂಬರ್ 25ರಂದು ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿರುವ ಮ್ಯಾಕ್ಸ್ ಚಿತ್ರಕ್ಕೆ ಖ್ಯಾತ ಚಿತ್ರ ನಿರ್ದೇಶಕ ಎಸ್ ಎಸ್ ರಾಜಮೌಳಿ ಶುಭ ಕೋರಿದ್ದು, ನಾಳೆ ನರ್ತಕಿಯಲ್ಲಿ ನಟ ಕಿಚ್ಚಾ ಸುದೀಪ್ ಚಿತ್ರ ವೀಕ್ಷಣೆಗೆ ಆಗಮಿಸಲಿದ್ದಾರೆ ಎನ್ನಲಾಗಿದೆ.
ಹೌದು.. ಡಿಸೆಂಬರ್ ನಲ್ಲಿ ಬಿಡುಗಡೆಯಾದ ಉಪೇಂದ್ರ ಅಭಿನಯದ ಯುಐ ಮತ್ತು ಸುದೀಪ್ ಅಭಿನಯದ ಮ್ಯಾಕ್ಸ್ ಚಿತ್ರಗಳೆರಡೂ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಗಳಿಕೆ ಮಾಡುತ್ತಿದ್ದು, ಪ್ರಮುಖವಾಗಿ ಸುದೀಪ್ ಅಭಿನಯದ ಮ್ಯಾಕ್ಸ್ ಚಿತ್ರದ ಗಳಿಕೆ ಯುಐಗಿಂತ ಮುಂದಿದೆ ಎನ್ನಲಾಗಿದೆ.
ಇದೇ ಸಂದರ್ಭದಲ್ಲಿ ತೆರೆಕಂಡಿದ್ದ ಹಿಂದಿಯ ಬೇಬಿ ಜಾನ್ ಮೊದಲ ವಾರ ಉತ್ತಮ ಗಳಿಕೆ ಕಂಡರೂ ಮ್ಯಾಕ್ಸ್ ಮುಂದೆ ಮಂಕಾಗಿದೆ. ‘ಮ್ಯಾಕ್ಸ್’ ಸಿನಿಮಾ ಭಾನುವಾರ ಭರ್ಜರಿ ಗಳಿಕೆ ಮಾಡಿದ್ದು, ಕೇವಲ ಐದು ದಿನಕ್ಕೆ ಸುಮಾರು 28 ಕೋಟಿ ರೂಪಾಯಿ ಗಳಿಕೆ ಮಾಡಿದೆ.
ಶುಭ ಕೋರಿದ ರಾಜಮೌಳಿ
ಇನ್ನು ಮ್ಯಾಕ್ಸ್ ಚಿತ್ರದ ಯಶಸ್ವೀ ಪ್ರದರ್ಶನದ ವಿಚಾರವಾಗಿ ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಟ್ವೀಟ್ ಮಾಡಿದ್ದು, 'MaxTheMovie ಚಿತ್ರದ ಬ್ಲಾಕ್ ಬಸ್ಟರ್ ಯಶಸ್ಸಿಗೆ ಕಿಚ್ಚ ಸುದೀಪ್ ಮತ್ತು ತಂಡಕ್ಕೆ ಅಭಿನಂದನೆಗಳು. ನಿಮ್ಮ ತಾರಾಪಟ್ಟದೊಂದಿಗೆ ಮಾಸ್ ಯಾವಾಗಲೂ ಮೇಲುಗೈ ಸಾಧಿಸುತ್ತದೆ. ಇನ್ನೂ ಸಿನಿಮಾ ನೋಡಲು ನನಗೆ ಸಮಯ ಸಿಕ್ಕಿಲ್ಲ, ಆದರೆ ನಾನು ಶೀಘ್ರದಲ್ಲೇ ನೋಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ನರ್ತಕಿಗೆ ಕಿಚ್ಚಾ ಸುದೀಪ್
ಇನ್ನು ಮ್ಯಾಕ್ಸ್ ಚಿತ್ರದ ಯಶಸ್ವೀ ಪ್ರದರ್ಶನದ ಬೆನ್ನಲ್ಲೇ ನಟ ಕಿಚ್ಚಾ ಸುದೀಪ್ ಅಭಿಮಾನಿಗಳೊಂದಿಗೆ ಚಿತ್ರ ವೀಕ್ಷಿಸಲು ಮುಂದಾಗಿದ್ದಾರೆ. ಅದರಂತೆ ನಾಳೆ ನರ್ತಕಿ ಚಿತ್ರ ಮಂದಿರಕ್ಕೆ ಕಿಚ್ಚಾ ಸುದೀಪ್ ಅಗಮಿಸುವುದಾಗಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸುದೀಪ್, '#MaxTheMovie ತಂಡದೊಂದಿಗೆ ಬೆಳಿಗ್ಗೆ ಥಿಯೇಟರ್‌ನಲ್ಲಿ ನಿಮ್ಮೆಲ್ಲರ ಜೊತೆ ಸೇರಲು ಸಂತೋಷವಾಗುತ್ತಿದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಮೊದಲ ಪ್ರತಿಯ ನಂತರ ನಾನು ಇನ್ನೂ ಚಿತ್ರದ ಪೂರ್ಣ ಆವೃತ್ತಿಯನ್ನು ನೋಡಿಲ್ಲ. ನಿಮ್ಮೆಲ್ಲರ ನಡುವೆ ವೀಕ್ಷಿಸಲು ಉತ್ಸುಕನಾಗಿದ್ದೇನೆ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.
ಅಂದಹಾಗೆ ನಾಳೆ ಬೆಳಗ್ಗೆ 10 ಗಂಟೆಗೆ ನಟ ಕಿಚ್ಚಾ ಸುದೀಪ್ ನರ್ತಕಿ ಚಿತ್ರ ಮಂದಿರಕ್ಕೆ ಆಗಮಿಸಲಿದ್ದಾರೆ ಪೋಸ್ಟ್ ಮಾಡಲಾಗಿದೆ.