ಬೆಂಗಳೂರು: ನಟ-ನಿರ್ದೇಶಕ ರಿಷಬ್ ಶೆಟ್ಟಿ ನಿರ್ಮಾಣದ ಪ್ರಶಸ್ತಿ ವಿಜೇತ ಚಿತ್ರ ''ಶಿವಮ್ಮ'' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಚಿತ್ರ ಇದೇ ಜೂನ್ 14ರಂದು ತೆರೆ ಕಾಣುತ್ತಿದೆ.
ಜಯಶಂಖರ್ ಆರ್ಯರ್ ನಿರ್ದೇಶನದ ‘ಶಿವಮ್ಮ’ ಸಿನಿಮಾ ಜೂನ್ 14ಕ್ಕೆ ತೆರೆಗೆ ಬರ್ತಿದೆ. ಸದ್ಯ ಟ್ರೈಲರ್ ಬಿಡುಗಡೆ ಆಗಿದ್ದು, ಯರೆಹಂಚಿನಾಳ ಎನ್ನುವ ಊರಿನಲ್ಲಿ ನಡೆಯುವ ಕಥೆ ಚಿತ್ರದಲ್ಲಿದೆ.
ಯರೆಹಂಚಿನಾಳದ ಸರ್ಕಾರಿ ಶಾಲೆಯಲ್ಲಿ ಸಹಾಯಕಿಯಾಗಿ ಕೆಲಸ ಮಾಡಿಕೊಂಡಿದ್ದ ಶಿವಮ್ಮ ಕುಟುಂಬ ಪೋಷಣೆಗಾಗಿ ಊರೆಲ್ಲಾ ಸಾಲ ಮಾಡುತ್ತಾಳೆ. ಶಿವಮ್ಮ, ಕೊನೆಗೆ ಶಾಲಾ ಶಿಕ್ಷಕರ ಬಳಿಯೂ ಸಾಲ ಮಾಡಿ ಸಮಸ್ಯೆ ಎದುರಿಸುತ್ತಾಳೆ. ಬಳಿಕ ನೆಟ್ವರ್ಕ್ ಮಾರ್ಕೆಟಿಂಗ್ ವ್ಯಾಪಾರ ಮಾಡಲು ಹೋಗಿ ಸಮಸ್ಯೆ ಎದುರಿಸುತ್ತಾಳೆ ಎನ್ನುವ ಕಥೆಯನ್ನು ಎಳೆ ಎಳೆಯಾಗಿ ಹೇಳಲಾಗಿದೆ.
ಈ ಚಿತ್ರವನ್ನು ಜೈ ಶಂಕರ್ ಆರ್ಯರ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಶರಣಮ್ಮ ಚಟ್ಟಿ, ಚೆನ್ನಮ್ಮ ಅಬ್ಬಿಗೆರೆ, ಶಿವು ಅಬ್ಬಿಗೆರೆ, ಶ್ರುತಿ ಕೊಂಡೇನಹಳ್ಳಿ ಸೇರಿದಂತೆ ಅನೇಕ ಕಲಾವಿದರು ತಾರಾ ಬಳಗದಲ್ಲಿ ಇದ್ದಾರೆ.
ಹಲವು ಸಿನಿಮೋತ್ಸವಗಳಲ್ಲಿ ಪ್ರದರ್ಶನ
ಶಿವಮ್ಮ ಚಿತ್ರ ಈಗಾಗಲೇ ಹಲವು ಸಿನಿಮೋತ್ಸವಗಳಲ್ಲಿ ಪ್ರದರ್ಶನ ಕಂಡಿದ್ದು, ಚೀನಾದಲ್ಲಿ ನಡೆದ ‘ಹೈನಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’, ಇರಾನ್ನಲ್ಲಿ ನಡೆದ ‘ಫಜರ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’, ಸ್ವೀಡನ್ನ ‘ಗೋಥೆಂಬರ್ಗ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’, ಮ್ಯುನಿಚ್ನ ‘ಮುಂಚಿಯನ್ ಸಿನಿಮೋತ್ಸವ, ರಷ್ಯಾದ ‘ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಜೆರ್ಕಾಲೋ’, ಸ್ಪೇನ್ನ ‘ಇಮ್ಯಾಜಿನ್ ಇಂಡಿಯಾ’, ಕೆನಡಾದ ‘ಅಲ್ಬರ್ಟಾ ಭಾರತೀಯ ಚಲನಚಿತ್ರೋತ್ಸವ’, ಮೆಲ್ಬೋರ್ನ್ನ ‘ಇಂಡಿಯನ್ ಪಿಲ್ಮ್ ಫೆಸ್ಟಿವಲ್’, ಸ್ವಿಟ್ಜರ್ಲ್ಯಾಂಡ್ನ ‘ಬ್ಲಾಕ್ ಮೂವಿ ಫಿಲ್ಮ್ ಫೆಸ್ಟಿವಲ್’ ಮೊದಲಾದ ಕಡೆಗಳಲ್ಲಿ ಈ ಸಿನಿಮಾ ಪ್ರದರ್ಶನ ಕಂಡಿದೆ.
ಹಲವು ಪ್ರಶಸ್ತಿಗಳಿಗೆ ಭಾಜನವಾಗಿರುವ ಚಿತ್ರ
ಫ್ರಾನ್ಸ್‌ನ ನಾಂಟೆಸ್‌ನಲ್ಲಿ ನೆಡೆದ ಫೆಸ್ಟಿವಲ್ 3 ಕಾಂಟಿನೆಂಟ್‌ನಲ್ಲಿ ‘ಯುವ ತೀರ್ಪುಗಾರರ ಅವಾರ್ಡ್’ ಪಡೆದುಕೊಂಡಿತ್ತು. ಈ ಹಿಂದೆ ಅಷ್ಟೇ ಈ ಸಿನಿಮಾಗೆ 27ನೇ ಬೂಸಾನ್ ಅಂತಾರಾಷ್ಟ್ರೀಯ ಪ್ರಶಸ್ತಿ (Busan International Film Festival) ಲಭಿಸಿತ್ತು. ಏಷ್ಯಾದ ಅತಿದೊಡ್ಡ ಫಿಲ್ಮ್ಸ್ ಉತ್ಸವದಲ್ಲಿ ಒಟ್ಟು 10 ಚಲನಚಿತ್ರಗಳು ಉನ್ನತ-ಪ್ರೊಫೈಲ್ ನ್ಯೂ ಕರೆಂಟ್ಸ್ ಪ್ರಶಸ್ತಿಗಾಗಿ ಸ್ಪರ್ಧಿಸಿದ್ದವು.
ಚಿತ್ರಕಥೆ
ಸರ್ಕಾರಿ ಶಾಲೆಯಲ್ಲಿ ಅಡುಗೆ ಕೆಲಸ ಮಾಡುವ 46 ವರ್ಷದ ಶಿವಮ್ಮ ಎನ್ನುವ ಮಹಿಳೆ ತನ್ನ ಪಾರ್ಶ್ವವಾಯು ಪೀಡಿತ ಪತಿಯನ್ನು ಸಾಕಿಕೊಂಡು, ತನ್ನ ಮಕ್ಕಳ ಭವಿಷ್ಯಕ್ಕಾಗಿ ನೆಟ್ವರ್ಕ್ ಮಾರ್ಕೆಟಿಂಗ್ ವ್ಯಾಪಾರವನ್ನು ಭರವಸೆಯಿಂದ ಪಾಲಿಸುವ ಹೋರಾಟದ ಕಥೆಯನ್ನು ಸಿನಿಮಾ ಮಾಡಿದ್ದಾರೆ ನಿರ್ದೇಶಕರು. ಆದಷ್ಟು ನೈಜವಾಗಿಯೇ ಇಡೀ ಸಿನಿಮಾವನ್ನು ಕಟ್ಟಿರುವುದು ಮತ್ತೊಂದು ವಿಶೇಷ.