ನವದೆಹಲಿ: ಇಸ್ಲಾಮ್ ಧರ್ಮದ ನಂಬಿಕೆ ಮತ್ತು ವಿವಾಹಿತ ಮುಸ್ಲಿಂ ಮಹಿಳೆಯರನ್ನು ಅವಹೇಳನಕಾರಿಯಾಗಿ ತೋರಿಸಲಾಗಿದೆ ಎಂಬ ಆರೋಪಗಳ ಮೇಲೆ ಸುಪ್ರೀಂ ಕೋರ್ಟ್ ನಾಳೆ ಅಂದರೆ ಜೂನ್ 14 ರಂದು ಬಿಡುಗಡೆಯಾಗಬೇಕಿದ್ದ ಅನ್ನು ಕಪೂರ್ ಅವರ ಚಲನಚಿತ್ರ 'ಹಮಾರೆ ಬಾರಹ್' ಬಿಡುಗಡೆಗೆ ತಡೆ ನೀಡಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ರಜಾಕಾಲದ ನ್ಯಾಯಪೀಠವು ಅರ್ಜಿದಾರ ಅಜರ್ ಬಾಷಾ ತಾಂಬೋಲಿ ಪರ ವಕೀಲ ಫೌಜಿಯಾ ಶಕೀಲ್ ಅವರು ಸಲ್ಲಿಸಿದ್ದ ವಿವರಣೆಗಳನ್ನು ಮತ್ತು ವಾದಗಳನ್ನು ಗಮನಿಸಿ ಅರ್ಜಿಯ ಕುರಿತು ತ್ವರಿತ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಬಾಂಬೆ ಹೈಕೋರ್ಟ್‌ಗೆ ಸೂಚಿಸಿತು.
ನಾವು ಬೆಳಗ್ಗೆ ಚಿತ್ರದ ಟ್ರೇಲರ್ ನ್ನು ನೋಡಿದ್ದೇವೆ. ಟ್ರೇಲರ್‌ನಲ್ಲಿ ಎಲ್ಲಾ ಆಕ್ಷೇಪಾರ್ಹ ಸಂಭಾಷಣೆಗಳಿವೆ ಎಂದು ನ್ಯಾಯಪೀಠವು ಚಿತ್ರದ ಬಿಡುಗಡೆಗೆ ತಡೆ ನೀಡಿತು. ಬಾಂಬೆ ಹೈಕೋರ್ಟ್‌ನಿಂದ ಅರ್ಜಿ ಇತ್ಯರ್ಥವಾಗುವವರೆಗೆ ಚಿತ್ರದ ಪ್ರದರ್ಶನಕ್ಕೆ ತಡೆ ನೀಡಲಾಗಿದೆ.
ಸಮಿತಿಯನ್ನು ಆಯ್ಕೆ ಮಾಡಲು ಸೆಂಟ್ರಲ್ ಬೋರ್ಡ್ ಆಫ್ ಫ್ಲಿಮ್ ಸರ್ಟಿಫಿಕೇಶನ್ (CBFC) ಗೆ ನಿರ್ದೇಶನ ಸೇರಿದಂತೆ ಎಲ್ಲಾ ಆಕ್ಷೇಪಣೆಗಳನ್ನು ಕಕ್ಷಿದಾರರು ಉಚ್ಚ ನ್ಯಾಯಾಲಯದ ಮುಂದೆ ಪ್ರಸ್ತಾಪಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕಳೆದ ವಾರ ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಚಿತ್ರ ಬಿಡುಗಡೆಗೆ ತಡೆ ನೀಡಿತ್ತು.