ಬೆಂಗಳೂರು: ಟಾಲಿವುಡ್ ನಟ ಅಲ್ಲು ಅರ್ಜುನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಪುಷ್ಪ –2’ The ruler ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. 2024 ರ ಡಿಸೆಂಬರ್ 6ರಂದು ಎಲ್ಲಾ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಪುಷ್ಪ-2 ಸಿನಿಮಾದ ಬಿಡುಗಡೆಯನ್ನು ಐದು ತಿಂಗಳು ಮುಂದೂಡಲಾಗಿದೆ. ಪುಷ್ಪ 2 ಸಿನಿಮಾವನ್ನು ಆಗಸ್ಟ್ 5ರ ಬದಲಾಗಿ ಇದೇ ವರ್ಷದ ಡಿಸೆಂಬರ್ 6ರಂದು ಬಿಡುಗಡೆ ಮಾಡಲು ಚಿತ್ರತಂಡವು ತೀರ್ಮಾನಿಸಿದೆ. ಈ ಕುರಿತು ಅಲ್ಲು ಅರ್ಜುನ್ ಅವರೇ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಇದರಿಂದಾಗಿ ಅಲ್ಲು ಅರ್ಜುನ್ ಅಭಿಮಾನಿಗಳಿಗೆ ತುಸು ಬೇಸರ ಉಂಟಾದಂತಾಗಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ಮೈತ್ರಿ ಮೂವೀಸ್ ನಿರ್ಮಾಣ ಸಂಸ್ಥೆ, ‘ನಾವು ನಿಮಗೆ (ಪ್ರೇಕ್ಷಕರಿಗೆ) ಅತ್ಯುತ್ತಮವಾದದ್ದನ್ನು ನೀಡಲು ಉದ್ದೇಶಿಸಿದ್ದೇವೆ. ದೊಡ್ಡ ಪರದೆಯ ಮೇಲೆ ಸ್ಮರಣೀಯ ಅನುಭವವನ್ನು ಪಡೆಯಲು ಕಾಯುವಿಕೆ ಹೆಚ್ಚಾಗುತ್ತಿದೆ. ಪುಷ್ಪ–ದಿ ರೂಲ್ 2024ರ ಡಿಸೆಂಬರ್ 6ರಂದು ವಿಶ್ವದಾದ್ಯಂತ ತೆರೆ ಕಾಣಲಿದೆ’ ಎಂದು ತಿಳಿಸಿದೆ.
ಅಲ್ಲು ಅರ್ಜುನ್ ವಿಧಾನಸಭೆ ಚುನಾವಣೆ ವೇಳೆ ನಂದಿಯಾಲ ವಿಧಾನಸಭೆ ಕ್ಷೇತ್ರದಲ್ಲಿ ವೈಎಸ್‌ಆರ್‌ಸಿಪಿ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದರು. ಇದರಿಂದಾಗಿ ಮೆಗಾ ಸ್ಟಾರ್ ಕುಟುಂಬದ ಪವನ್ ಕಲ್ಯಾಣ್ ಅವರ ಅಭಿಮಾನಿಗಳ ಆಕ್ರೋಶಕ್ಕೆ ಅಲ್ಲು ಅರ್ಜುನ್ ಗುರಿಯಾಗಿದ್ದಾರೆ. ಅಲ್ಲದೆ, ಪುಷ್ಟ 2 ಸಿನಿಮಾವನ್ನು ನಾವು ವೀಕ್ಷಿಸುವುದಿಲ್ಲ, ಬಾಯ್ಕಾಟ್ ಮಾಡುತ್ತೇವೆ ಎಂಬುದಾಗಿ ಪವರ್ ಸ್ಟಾರ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗಾಗಿಯೇ, ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ ಎಂದು ತಿಳಿದುಬಂದಿದೆ.
ಮತ್ತೊಂದಿಷ್ಟು ಮೂಲಗಳ ಪ್ರಕಾರ, ನಿರ್ದೇಶಕ ಸುಕುಮಾರ್ ಇನ್ನೂ ಚಿತ್ರದ ಶೂಟಿಂಗ್ ಮತ್ತು ಪೋಸ್ಟ್ ಪ್ರೊಡಕ್ಷನ್ ಹಂತದ ಕೆಲಸಗಳಲ್ಲಿ ನಿರತರಾಗಿರುವುದರಿಂದ ಸಿನಿಮಾ ಬಿಡುಗಡೆಯ ದಿನಾಂಕವನ್ನು ಮುಂದೂಡಲಾಗಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಒಂದು ತಿಂಗಳ ಶೂಟಿಂಗ್ ಬಾಕಿಯಿದ್ದು ಜುಲೈ ವೇಳೆಗೆ ಚಿತ್ರೀಕರಣ ಪೂರ್ಣಗೊಳಿಸುವ ಗುರಿಯನ್ನು ಸುಕುಮಾರ್ ಹೊಂದಿದ್ದಾರೆ ಎನ್ನಲಾಗಿದೆ.