ಬೆಂಗಳೂರು: ಕನ್ನಡದ ನಟ ದರ್ಶನ್ ಇದೀಗ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಜೈಲು ಸೇರಿದ್ದಾರೆ. ಇದೀಗ ಅವರನ್ನು ನಟ ವಿನೋದ್ ಪ್ರಭಾಕರ್ ಭೇಟಿಯಾಗಿ ಬಂದಿದ್ದಾರೆ.
ಭೇಟಿಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಿನೋದ್ ಪ್ರಭಾಕರ್ ಕಾನೂನಿಗಿಂತ ಯಾರು ದೊಡ್ಡವರಿಲ್ಲ, ನ್ಯಾಯ ಸಿಗಬೇಕು ಎಂದಿದ್ದಾರೆ. ರೇಣುಕಾಸ್ವಾಮಿ ಆತ್ಮಕ್ಕೆ ಶಾಂತಿ ಸಿಗಬೇಕು. ಅವರ ಕುಟುಂಬಕ್ಕೆ ಭಗವಂತ ಧೈರ್ಯ ಕೊಡಲಿ ಅಂತ ಕೇಳಿಕೊಳ್ಳುತ್ತೇನೆ. ಹೀಗೆಲ್ಲಾ ಆಗಬಾರದಿತ್ತು. ನಿಮಗೆಲ್ಲಾ ಎಷ್ಟು ತಿಳಿದಿದೆಯೋ ನನಗೂ ಅಷ್ಟೇ ತಿಳಿದಿರೋದು. ನಾನು ದರ್ಶನ್ ಸರ್ ಅವರನ್ನು ಮೀಟ್ ಮಾಡದೇ 4 ತಿಂಗಳು ಆಗಿತ್ತು. ಅವರ ಹುಟ್ಟುಹಬ್ಬಕ್ಕೆ ಮೀಟ್ ಆಗಿದ್ದು ಆ ನಂತರ ಸುದ್ದಿ ನೋಡಿ ತಿಳಿಯಿತು ಎಂದು ದರ್ಶನ್ ಆಪ್ತ ನಟ ವಿನೋದ್ ಪ್ರಭಾಕರ್ ಮಾತನಾಡಿದ್ದಾರೆ.
ಅನ್ನಪೂರ್ಣೇಶ್ವರಿ ಠಾಣೆಯಲ್ಲಿದ್ದಾಗ ಭೇಟಿ ಮಾಡಲು ಪ್ರಯತ್ನಿಸಿದೆ ಆದರೆ ಅಂದು ಆಗಲಿಲ್ಲ. ಇದೀಗ ಅವರನ್ನು ಭೇಟಿಯಾದೆ. ಅಲ್ಲಿ ಏನೂ ಮಾತನಾಡಲು ಸಾಧ್ಯವಾಗಲಿಲ್ಲ. ಹ್ಯಾಂಡ್ ಶೇಕ್ ಮಾಡಿದ್ವಿ. ಟೈಗರ್ ಅಂದ್ರು ಬಾಸ್ ಅಂತ ಕರೆದೆ ಅಷ್ಟೇ ಅಲ್ಲಿ ಮಾತನಾಡಿದ್ದು ಎಂದು ವಿನೋದ್ ತಿಳಿಸಿದರು. ಚಿತ್ರದುರ್ಗದ ಅಭಿಮಾನಿ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಅರೆಸ್ಟ್ ಆಗಿರುವ ನಟ ದರ್ಶನ್ ಮತ್ತು ಗ್ಯಾಂಗ್ ಇದೀಗ ಅಕ್ಷರಶಃ ವಿಲವಿಲ ಎನ್ನುತ್ತಿದ್ದಾರೆ. ಈ ಪ್ರಕರಣ ರಾಜ್ಯ ಮಟ್ಟದಲ್ಲಿ ಹೊರ ರಾಜ್ಯದಲ್ಲೂ ಸಾಕಷ್ಟು ಸದ್ದು ಮಾಡುತ್ತಿದ್ದು, ದಾಸ ಕೊನೆಗೂ ಜೈಲು ಸೇರುವಂತಾಗಿದ್ದು, ದರ್ಶನ್ ಅವರಿಂದ ಸಾಕಷ್ಟು ಅಂತರ ಪಡೆದುಕೊಂಡಿದ್ದ ಸ್ನೇಹಿತರು ಇದೀಗ ದರ್ಶನ್ ಭೇಟಿಗೆ ಮುಂದಾಗಿದ್ದಾರೆ.