ಮಂಡ್ಯ: ಖ್ಯಾತ ಸಂಗೀತ ನಿರ್ದೇಶಕ, ನಾದಬ್ರಹ್ಮ ಹಂಸಲೇಖ ಅವರಿಗೆ ಭಾನುವಾರ ಸಕ್ಕರೆ ನಾಡು ಮಂಡ್ಯದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇಂದು ನಗರದ ರೈತ ಸಭಾಂಗಣದಲ್ಲಿ ಕರ್ನಾಟಕ ಸಂಘ, ಎಂಎಲ್ ಶ್ರೀಕಂಠೇಗೌಡ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ರಾಜ್ಯಮಟ್ಟದ ಪ್ರಶಸ್ತಿಯನ್ನು ಹಂಸಲೇಖ ಅವರಿಗೆ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿದ ಬಳಿಕ ನಟ ದರ್ಶನ್ ಪ್ರಕರಣದಿಂದ ಸ್ಯಾಂಡಲ್‌ವುಡ್‌ಗೆ ಕಳಂಕ ವಿಚಾರವಾಗಿ ಮಾತನಾಡಿದ ಹಂಸಲೇಖ ಅವರು, ಅತ್ಯುನ್ನತ ಸ್ಥಾನಕ್ಕೆ ಏರಿದವನು ಮತ್ತೆ ಕೆಳಗೆ ಬೀಳೋದು ಬೇಡ. ಕೇರಳ ಚಿತ್ರೋದ್ಯಮ ಹೀಗೇ ಆಗಿತ್ತು. ಅದೀಗ ಉತ್ತುಂಗದಲ್ಲಿದೆ. ಕೆಳಗೆ ಬಿದ್ದು ಮತ್ತೆ ಮೇಲೆ ಎದ್ದಿದೆ. ನಮ್ಮದು ಚಂದನವನ ಕಣಯ್ಯ. ಒಂದು ಮಳೆಗೆ ಮರ ಒಣಗಿದರೇನಂತೆ. ಇನ್ನೊಂದು ಮಳೆಗೆ ಕಾಡು ಬೆಳೆದೇ ಬೆಳೆಯುತ್ತೆ ಎಂದರು.
ಸಿನಿಮಾ ಕಲಾವಿದರಾದವರು ಸಣ್ಣದಾಗಿ ಯೋಚನೆ ಮಾಡಬೇಕು. ಸಿಟ್ಟನ್ನ ಸ್ಕ್ರಿಪ್ಟ್ ಮಾಡಬೇಕು, ದ್ವೇಷವನ್ನ ಕ್ಯಾರೆಕ್ಟರ್ ಮಾಡಬೇಕು. ನಾವು ಆ ರೀತಿ ಸಿನಿಮಾದಲ್ಲಿ ತೋರಿಸಬೇಕು ಅಷ್ಟೇ. ನಿಜ ಜೀವನದಲ್ಲಿ ಸ್ಕ್ರಿಪ್ಟನ್ನ ತರಬಾರದು. ನಿಜ ಜೀವನದಲ್ಲಿ ಕ್ಯಾರೆಕ್ಟರ್ ಆಗಬಾರದು. ಇದು ಕಲಾವಿದರ ಕರ್ತವ್ಯ ಎಂದು ದರ್ಶನ್‌ಗೆ ಹಂಸಲೇಖ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಎನ್.ಚೆಲುವರಾಯಸ್ವಾಮಿ, ಬೆಂಗಳೂರು ದಕ್ಷಿಣ ವಲಯದ ಐ ಜಿ ರವಿಕಾಂತೇಗೌಡ, ಮಾಜಿ ಸಚಿವ ಸಿ ಎಸ್ ಪುಟ್ಟರಾಜು ಹಾಗೂ ಇತರೆ ಗಣ್ಯರು ಭಾಗಿಯಾಗಿದ್ದರು.