ಅಕ್ಷಯ ತೃತೀಯದ ದಿನದಂದು ದರ್ಶನ್ ನಟನೆಯ ಡೆವಿಲ್- ದಿ ಹೀರೋ ಸಿನಿಮಾ ತಂಡ ತೆರೆಮರೆಯ ವಿಡಿಯೋವನ್ನು ಬಿಡುಗಡೆ ಮಾಡಿದ್ದು ಸಿನಿ ಪ್ರಿಯರಲ್ಲಿ ಉತ್ಸಾಹವನ್ನು ಹೆಚ್ಚಿಸಿದೆ. ಈ ವೀಡಿಯೋದಲ್ಲಿ ಆಕ್ಷನ್ ದೃಶ್ಯಗಳಿದ್ದು, ವೀಕ್ಷಕರ ನಿರೀಕ್ಷೆ ಕುತೂಹಲಗಳನ್ನು ಹೆಚ್ಚಿಸಿದೆ.
ಪ್ರಕಾಶ್ ವೀರ್ ನಿರ್ದೇಶನದಲ್ಲಿ ಇದೇ ಮೊದಲ ಬಾರಿಗೆ ಸಂಗೀತ ನಿರ್ದೇಶಕ ಅಂಜನೀಶ್ ಲೋಕನಾಥ್ ತೊಡಗಿಸಿಕೊಂಡಿದ್ದು, ಸಿನಿಮಾಟೋಗ್ರಾಫರ್ ಆಗಿ ಸುಧಾಕರ್ ಎಸ್ ರಾಜ್ ಇದ್ದಾರೆ.
ಈ ಹಿಂದೆ ಬಿಡುಗಡೆಯಾಗಿದ್ದ ಟೀಸರ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಪ್ಪು ಹಾಗೂ ಕೆಂಪು ಬಣ್ಣದ ಸೂಟ್ ನಲ್ಲಿ ಕಾಣಿಸಿಕೊಂಡಿದ್ದರು. ದರ್ಶನ್ ಅವರ ಈ ಲುಕ್ ಈ ವರೆಗಿನ ಅವರ ಚಿತ್ರಗಳಲ್ಲೇ ಅತ್ಯಂತ ವಿಶಿಷ್ಟವಾಗಿದೆ.
ಇದೇ ವೇಳೆ, ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ಕೈ ಮುರಿದುಕೊಂಡಿದ್ದ ದರ್ಶನ್ ಈಗ ಚೇತರಿಸಿಕೊಂಡಿದ್ದಾರೆ. ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಚಿತ್ರೀಕರಣ ಮೇ.15 ರಿಂದ ಮತ್ತೆ ಆರಂಭವಾಗಲಿದೆ.
ಮಾಧ್ಯಮದೊಂದಿಗಿನ ಇತ್ತೀಚಿನ ಸಂವಾದದಲ್ಲಿ, ದರ್ಶನ್ ಅವರು 'ಡೆವಿಲ್' ಚಿತ್ರವನ್ನು ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿದ್ದರೂ, ಅದು ಕೆಲವು ತಿಂಗಳು ವಿಳಂಬವಾಗಬಹುದು ಎಂಬ ಮಾಹಿತಿ ಬಹಿರಂಗಪಡಿಸಿದ್ದರು.
ಬಾಲಿವುಡ್ ನಟ ಮಹೇಶ್ ಮಂಜ್ರೇಕರ್ ಈಗಾಗಲೇ ಸಿನಿಮಾ ತಂಡದಲ್ಲಿದ್ದು, ನಾಯಕಿಗಾಗಿ ಚಿತ್ರದ ಹುಡುಕಾಟ ಇನ್ನೂ ನಡೆಯುತ್ತಿದೆ.ೆ