ಡಾಲಿ ಧನಂಜಯ ನಟನೆಯ, ಪರಮ್ ನಿರ್ದೇಶನದ ಕೋಟಿ ಚಿತ್ರದ ಮೊದಲ ಹಾಡು 'ಮಾತು ಸೋತು' ಮೇ 13 ರಂದು ಬಿಡುಗಡೆಯಾಗಲಿದೆ. ಹಾಡನ್ನು ವಾಸುಕಿ ವೈಭವ್ ಸಂಯೋಜಿಸಿದ್ದು, ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದಾರೆ ಮತ್ತು ಅರ್ಮಾನ್ ಮಲಿಕ್ ಹಾಡಿಗೆ ಧ್ವನಿ ನೀಡಿದ್ದಾರೆ. ಸಾರಿಗಮ ಚಿತ್ರದ ಹಾಡುಗಳ ಹಕ್ಕನ್ನು ಪಡೆದುಕೊಂಡಿದೆ ಮತ್ತು ಲಿರಿಕಲ್ ವಿಡಿಯೋ ಮೇ 13 ರಂದು ಸಂಜೆ 5 ಗಂಟೆಗೆ ಸಾರಿಗಮ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರೀಮಿಯರ್ ಆಗಲಿದೆ.
ಡಾಲಿ ಧನಂಜಯ್ ಜೊತೆಗೆ ಮೋಕ್ಷ ಕುಶಾಲ್ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದ ಪಾತ್ರವರ್ಗದಲ್ಲಿ ರಂಗಾಯಣ ರಘು, ರಮೇಶ್ ಇಂದಿರಾ, ತಾರಾ, ಪೃಥ್ವಿ ಶಾಮನೂರು, ಸರ್ದಾರ್ ಸತ್ಯ ಮತ್ತು ತನುಜಾ ವೆಂಕಟೇಶ್ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಕೋಟಿ ಚಿತ್ರ ಒಟ್ಟು ಐದು ಸುಮಧುರ ಹಾಡುಗಳನ್ನು ಒಳಗೊಂಡಿದೆ. ಚಿತ್ರಕ್ಕೆ ಯೋಗರಾಜ್ ಭಟ್ ಜೊತೆಗೆ ಸಾಹಿತ್ಯ ಬರೆದಿರುವ ವಾಸುಕಿ ವೈಭವ್ ಅವರೇ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ನೋಬಿನ್ ಪಾಲ್ (777 ಚಾರ್ಲಿ) ಅವರ ಹಿನ್ನೆಲೆ ಸಂಗೀತ, ಪ್ರತೀಕ್ ಶೆಟ್ಟಿ (ಕಾಂತಾರ) ಅವರ ಸಂಕಲನವಿದೆ. ಅರುಣ್ ಬ್ರಹ್ಮನ್ ಚಿತ್ರದ ಛಾಯಾಗ್ರಹಣವನ್ನು ನಿಭಾಯಿಸಿದ್ದಾರೆ.
ವರ್ಷಗಳ ಕಾಲ ಕಲರ್ಸ್ ಕನ್ನಡದ ಜವಾಬ್ದಾರಿ ಹೊತ್ತಿದ್ದ ಪರಮ್ ಬರೆದು ನಿರ್ದೇಶಿಸಿದ ಕೋಟಿಯನ್ನು ಜಿಯೋ ಸ್ಟುಡಿಯೋಸ್ ನಿರ್ಮಿಸಿದೆ ಮತ್ತು ಜೂನ್ 14 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.