ಬೆಂಗಳೂರು: ಭಾನುವಾರ ಸಾವನ್ನಪ್ಪಿದ ನಿರ್ದೇಶಕ ಗುರು ಪ್ರಸಾದ್ ಸಾಲದ ಶೂಲಕ್ಕೆ ಬಲಿಯಾಗಿದ್ದಾರೆ ಎಂಬ ವದಂತಿ ಕೇಳಿಬರುತ್ತಿದೆ.
ಹೌದು.. ಇಂದು ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಬಳಿಯ ತಮ್ಮ ಅಪಾರ್ಟ್ಮೆಂಟ್ ನಲ್ಲಿ ನಿರ್ದೇಶಕ ಗುರು ಪ್ರಸಾದ್ ಆತ್ಮಹತ್ಯೆಗೆ ಶರಣಾಗಿದ್ದು, ಅವರ ಸಾವಿಗೆ ಸಾಲ ಕಾರಣ ಎಂದು ಹೇಳಲಾಗಿದೆ. ಈ ಹಿಂದೆ ನಿರ್ದೇಶಕ ಗುರು ಪ್ರಸಾದ್ ರಂಗನಾಯಕ ಚಿತ್ರ ನಿರ್ದೇಶಿಸಿದ್ದರು.
ಈ ಚಿತ್ರ ಹೀನಾಯವಾಗಿ ಸೋತಿತ್ತು. ಇದರ ಬೆನ್ನಲ್ಲೇ ಗುರು ಪ್ರಸಾದ್ ಸಾಕಷ್ಟು ಸಾಲ ಮಾಡಿಕೊಂಡಿದ್ದರು ಎಂದು ಹೇಳಲಾಗಿದೆ.
ಸಾಲ ಮಾಡಿಕೊಂಡಿದ್ದ ಗುರುಪ್ರಸಾದ್?
‘ರಂಗನಾಯಕ’ ಸಿನಿಮಾದ ಫ್ಲಾಪ್ ಬಳಿಕ ಗುರುಪ್ರಸಾದ್ ಸಾಲದ ಶೂಲಕ್ಕೆ ಸಿಲುಕಿದ್ದರು. ಮಾತ್ರವಲ್ಲದೆ ಕೆಲ ತಿಂಗಳ ಹಿಂದೆ ಗುರುಪ್ರಸಾದ್ ಎರಡನೇ ಮದುವೆ ಸಹ ಆಗಿದ್ದರು. ಇತ್ತೀಚಿನ ದಿನಗಳಲ್ಲಿ ನಿರ್ದೇಶಕ ಗುರುಪ್ರಸಾದ್ ಸಾಕಷ್ಟು ಆರ್ಥಿಕ ಮುಗ್ಗಟ್ಟಿಗೆ ತುತ್ತಾಗಿದ್ದರು. ಅವರ ಬಳಿ ಕೆಲಸ ಮಾಡುತ್ತಿದ್ದವರಿಂದಲೇ ಗುರುಪ್ರಸಾದ್ ಹಣ ಪಡೆದುಕೊಂಡು ವಾಪಸ್ ನೀಡಿರಲಿಲ್ಲ ಎಂಬ ಆರೋಪಗಳೂ ಕೇಳಿಬಂದಿತ್ತು.
ಸಿನಿಮಾ ಹಿನ್ನಲೆ
ಕನ್ನಡ ಚಿತ್ರರಂಗದ ಜನಪ್ರಿಯ ನಿರ್ದೇಶಕರಲ್ಲಿ ಒಬ್ಬರಾಗಿದ್ದ ಗುರುಪ್ರಸಾದ್ ‘ಮಠ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ತಾವು ನಿರ್ದೇಶಿಸಿದ್ದ ಮೊದಲ ಚಿತ್ರಕ್ಕೆ ಗುರುಪ್ರಸಾದ್ ರಾಜ್ಯ ಪ್ರಶಸ್ತಿ ಪಡೆದಿದ್ದರು. ಬಳಿಕ ಅವರು ನಿರ್ದೇಶಿಸಿದ್ದ ‘ಎದ್ದೇಳು ಮಂಜುನಾಥ’ ಚಿತ್ರ ಕೂಡ ದೊಡ್ಡ ಹಿಟ್ ಆಗಿತ್ತು. ಬಳಿಕ ಡಾಲಿ ಧನಂಜಯ್ ಜೊತೆ ‘ಡೈರೆಕ್ಟರ್ಸ್ ಸ್ಪೆಷಲ್’ ಸಿನಿಮಾ ಮಾಡಿದರು. ಇದೂ ಕೂಡ ಪ್ರೇಕ್ಷಕರ ಮನ್ನಣೆ ಪಡೆಯಿತಾದರೂ ಗಳಿಕೆಯಲ್ಲಿ ಕೊಂಚ ಹಿಂದೆ ಬಿದ್ದಿತು.
ಬಳಿಕ 2017 ರಲ್ಲಿ ‘ಎರಡನೇ ಸಲ’ ಸಿನಿಮಾ ನಿರ್ದೇಶಿಸಿ ಗುರು ಪ್ರಸಾದ್ ಕೈ ಸುಟ್ಟುಕೊಂಡರು. ಈ ಚಿತ್ರದ ಬಳಿಕ ನಿರ್ದೇಶನದಿಂದ ದೂರ ಉಳಿದಿದ್ದ ಗುರು ಪ್ರಸಾದ್ ಇದೇ ವರ್ಷದಲ್ಲಿ ಜಗ್ಗೇಶ್ ಅವರೊಟ್ಟಿಗೆ ‘ರಂಗನಾಯಕ’ ಸಿನಿಮಾ ಮಾಡಿದರು. ಸಿನಿಮಾ ಚಿತ್ರಮಂದಿರದಲ್ಲಿ ಅಟ್ಟರ್ ಫ್ಲಾಪ್ ಆಯ್ತು. ‘ರಂಗನಾಯಕ’ ಸಿನಿಮಾದ ಸೋಲಿನಿಂದ ವಿಚಲಿತರಾಗಿದ್ದ ಗುರುಪ್ರಸಾದ್ ಸಾಕಷ್ಟು ಸಾಲಗಳಿಗೆ ಸಿಲುಕಿಕೊಂಡಿದ್ದರು. ಕೊನೆಗೆ ಈಗ ನಿಧನ ಹೊಂದಿದ್ದಾರೆ.