ನನಗೆ ಸ್ಮಶಾನ ಅಂದ್ರೆ ಭಯ ಆಗುತ್ತಿತ್ತು. ಆದರೆ ಭೈರಾದೇವಿಯ ಸಿನಿಮಾ ನಂತರ, ನಾನು ದೆವ್ವಗಳ ಬಗ್ಗೆ ಇದ್ದ ಭಯ ಹೋಗಿದೆ. ರಾತ್ರಿ ಹೊತ್ತು ಒಬ್ಬಳೇ ಸ್ಮಶಾನಕ್ಕೆ ಹೋಗಿ ಬರುವ ಧೈರ್ಯ ಬಂದಿದೆ ಎಂದು ಶ್ರೀಜೈ ನಿರ್ದೇಶನದ ಹಾರರ್ ಸಿನಿಮಾ ಭೈರಾದೇವಿ ನಾಯಕ ನಟಿ ರಾಧಿಕಾ ಕುಮಾರಸ್ವಾಮಿ ಹೇಳಿದ್ದಾರೆ.
ರಾಧಿಕಾ ಕುಮಾರಸ್ವಾಮಿ ಅಭಿನಯದ ಮುಂದಿನ ಬಹುನಿರೀಕ್ಷಿತ ಚಿತ್ರ ''ಭೈರಾದೇವಿ'' ಬಿಡುಗಡೆಗೆ ಕ್ಷಣಗಣನೆ ಶುರುವಾಗಿದ್ದು, ಚಿತ್ರದಲ್ಲಿ ರಮೇಶ್ ಅರವಿಂದ್, ಅನು ಪ್ರಭಾಕರ್, ಶಿವರಾಮ್ ಮತ್ತು ರಾಗಾಯಣ ರಘು ಕೂಡ ನಟಿಸಿದ್ದಾರೆ.
ರಾಧಿಕಾ ತಮ್ಮ ಬ್ಯಾನರ್, ಶಮಿಕಾ ಎಂಟರ್‌ಪ್ರೈಸಸ್ ಅಡಿಯಲ್ಲಿ ನಿರ್ಮಿಸಿದ ಈ ಚಿತ್ರದ ಬಗ್ಗೆ ಮಾತನಾಡಿದ್ದು, 'ಭೈರಾದೇವಿ'ಯಲ್ಲಿ ತೋರಿಸಲಾದ ಪ್ರತಿಯೊಂದು ಆಚರಣೆ ಮತ್ತು ಮಂತ್ರ ವಾಸ್ತವದಲ್ಲಿ ಬೇರೂರಿದೆ ಎಂದರು.
"ಚಿತ್ರೀಕರಣದ ಮೊದಲು, ನನಗೆ ದೆವ್ವಗಳ ಬಗ್ಗೆ ಭಯ ಇತ್ತು. ಮನೆಯಲ್ಲಿರುವ ಒಂದು ರೂಮ್ನಿಂದ ಮತ್ತೊಂದು ರೂಮ್ಗೆ ಹೋಗಲು ಸಹ ಭಯ ಪಡುತ್ತಿದ್ದೆ. ರಾತ್ರಿ ಹೊತ್ತು ಸ್ಮಶಾನ ಅಂದ್ರೆ ಭಯ ಆಗುತ್ತಿತ್ತು. ಈಗ ಭೈರಾದೇವಿ ಸಿನಿಮಾ ಮಾಡಿದ ಬಳಿಕ ದೆವ್ವದ ಬಗ್ಗೆ ಇದ್ದ ಭಯ ಹೋಗಿದೆ ಎಂದಿದ್ದಾರೆ.
ಸ್ಮಶಾನದಲ್ಲಿ ಶೂಟಿಂಗ್ ಮಾಡುವ ವಿಚಾರ ಬಂದಾಗ ನನಗೆ ತುಂಬಾ ಭಯವಾಗಿತ್ತು. ನಾವು ಸ್ಮಶಾನದ ಸೆಟ್ ಹಾಕುವಂತೆ ಸಲಹೆ ನೀಡಿದ್ದೆವು. ಆದರೆ ನಿರ್ದೇಶಕರು ನಿಜವಾದ ಸ್ಮಶಾನದಲ್ಲೇ ಚಿತ್ರೀಕರಣ ಮಾಡಬೇಕು ಎಂದರು. ಇನ್ನೂ ಶೂಟಿಂಗ್ ಟೈಮಲ್ಲಿ ಕಾಳಿ ಪಾತ್ರಕ್ಕೆ ಮೇಕಪ್ ಮಾಡಿಕೊಳ್ಳುವುದಕ್ಕೆ 4 ಗಂಟೆ ಹಿಡಿಯುತ್ತಿತ್ತು ಎಂದು ಹೇಳಿದ್ದಾರೆ.
ಒಮ್ಮೆ ಈ ಮೇಕಪ್ ಹಾಕಿ ಶೂಟಿಂಗ್ ಮಾಡಬೇಕು ಅನ್ನುವಷ್ಟರಲ್ಲಿ ನನಗೆ ತಲೆ ಎತ್ತುವುದಕ್ಕೆ ಆಗುತ್ತಿರಲಿಲ್ಲ. ಆಗ ನನ್ನ ಅಣ್ಣ ಹಾಗೂ ಡೈರೆಕ್ಟರ್ ಬಂದು ಪೂಜೆ ಮಾಡಿ ನಿಂಬೆ ಹಣ್ಣು ತುಳಿದ ಬಳಿಕ ನನಗೆ ತಲೆ ಎತ್ತಲು ಆಯಿತು ಎಂದು ಶೂಟಿಂಗ್ ಕ್ಷಣಗಳನ್ನು ಹಂಚಿಕೊಂಡರು.
"ಭೈರಾದೇವಿ ನನ್ನ ವೃತ್ತಿಜೀವನದ ಅತ್ಯುತ್ತಮ ಚಿತ್ರಗಳಲ್ಲಿ ಒಂದಾಗುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ರಾಧಿಕಾ ಕುಮಾರಸ್ವಾಮಿ ಅವರು ವಿಶ್ವಾಸದಿಂದ ಹೇಳಿದ್ದಾರೆ.