'ನಮ್ಮ ಮಕ್ಕಳಿಗೆ ವಿಷ ನೀಡುತ್ತಿದ್ದೀರಿ': ಬಣ್ಣ ಕಳೆದುಕೊಂಡ ನೀರಿನ ಬಾಟಲಿ ಪ್ರದರ್ಶಿಸಿದ ಜೆಡಿಎಸ್ ಶಾಸಕ; ರಣಾಂಗಣವಾದ ಸದನ!

ಇದು ಡಿ.ಕೆ.ಶಿವಕುಮಾರ್‌ ಅವರು ಬೆಂಗಳೂರಿಗೆ ನೀಡುತ್ತಿರುವ ಕಾವೇರಿ ನೀರು. ಇದು ನೀವು ಕೋಲಾರ ಜನರಿಗೆ ಪೂರೈಸುತ್ತಿರುವ ಕೆ.ಸಿ. ವ್ಯಾಲಿ ಕೊಳಚೆ ನೀರು ಎಂದು ಸಣ್ಣ ನೀರಾವರಿ ಸಚಿವ ಎನ್‌.ಎಸ್.ಬೋಸರಾಜ್ ಅವರಿಗೆ ತೋರಿಸಿದರು.
 Samruddhi Manjunath
ಸಮೃದ್ಧಿ ಮಂಜುನಾಥ್
Updated on

ಬೆಂಗಳೂರು: ಕೆ.ಸಿ.ವ್ಯಾಲಿಯ ಕೊಳಚೆ ನೀರು 3ನೇ ಹಂತದ ಶುದ್ಧೀಕರಣ ಮಾಡದೆ ಕೋಲಾರ ಕೆರೆಗಳಿಗೆ ಪೂರೈಸಿ ವಿಷ ಉಣಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ ಜೆಡಿಎಸ್ ಸದಸ್ಯ ಸಮೃದ್ಧಿ ಮಂಜುನಾಥ್‌ ಬಣ್ಣ ಕಳೆದುಕೊಂಡ ನೀರಿನ ಬಾಟಲ್‌ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್‌ ಸದಸ್ಯರ ನಡುವೆ ವಾಗ್ವಾದಕ್ಕೆ ಕಾರಣವಾಯಿತು.

ಮುಳಬಾಗಿಲು ಜೆಡಿಎಸ್ ಶಾಸಕಿ ಸಮೃದ್ಧಿ ಮಂಜುನಾಥ್ ಮಂಗಳವಾರ ಬಣ್ಣ ಕಳೆದುಕೊಂಡ ನೀರನ್ನು ಹೊಂದಿರುವ ಬಾಟಲಿಯನ್ನು ಪ್ರದರ್ಶಿಸಿದರು, ಇದು ಬೆಂಗಳೂರಿನ ಕೊಳಚೆ ನೀರನ್ನು ಸಂಸ್ಕರಿಸಿ ಕೋಲಾರ ಮತ್ತು ಚಿಕ್ಕಬಳ್ಳಾಪುರದ ಟ್ಯಾಂಕ್‌ಗಳನ್ನು ತುಂಬಿಸುವ ಕೋರಮಂಗಲ-ಚಲ್ಲಘಟ್ಟ (ಕೆಸಿ) ವ್ಯಾಲಿ ಯೋಜನೆಯ ಕುರಿತು ಚರ್ಚೆಗೆ ನಾಂದಿ ಹಾಡಿತು.

ಪ್ರಶ್ನೋತ್ತರ ವೇಳೆಯಲ್ಲಿ ಕೈಯಲ್ಲಿ ಎರಡು ಬಾಟಲ್‌ ಪ್ರದರ್ಶಿಸಿ, ಇದು ಡಿ.ಕೆ.ಶಿವಕುಮಾರ್‌ ಅವರು ಬೆಂಗಳೂರಿಗೆ ನೀಡುತ್ತಿರುವ ಕಾವೇರಿ ನೀರು. ಇದು ನೀವು ಕೋಲಾರ ಜನರಿಗೆ ಪೂರೈಸುತ್ತಿರುವ ಕೆ.ಸಿ. ವ್ಯಾಲಿ ಕೊಳಚೆ ನೀರು ಎಂದು ಸಣ್ಣ ನೀರಾವರಿ ಸಚಿವ ಎನ್‌.ಎಸ್.ಬೋಸರಾಜ್ ಅವರಿಗೆ ತೋರಿಸಿದರು.

ನಿಮಗೆ ಕೈ ಮುಗಿದು ಕೇಳುತ್ತಿದ್ದೇವೆ. ನಮಗೆ ನೀವು ಭದ್ರಾ ನೀರು ಅಥವಾ ಕಾವೇರಿ ನೀರು ನೀಡುತ್ತಿಲ್ಲ, ಕೊಳಚೆ ನೀರು ನೀಡುತ್ತಿದ್ದೀರಿ. ಇದನ್ನು ಮೂರನೇ ಹಂತದ ಶುದ್ಧೀಕರಣ ಮಾಡಿಕೊಡಿ. ಇಲ್ಲದಿದ್ದರೆ ನಮ್ಮ ಪೀಳಿಗೆಗೆ ವಿಷ ಕೊಟ್ಟಂತಾಗುತ್ತಿದೆ. ಕೋಲಾರ-ಚಿಕ್ಕಬಳ್ಳಾಪುರದಿಂದ ಕಾಂಗ್ರೆಸ್‌ಗೆ ಎಂಟು ಶಾಸಕರನ್ನು ಕೊಟ್ಟಿದ್ದಾರೆ. ನೀವು ಆ ಜನರಿಗೆ ಮೋಸ ಮಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

 Samruddhi Manjunath
ವಿಧಾನಪರಿಷತ್: ಹಾಸನ ಜಿಲ್ಲೆ ಕೌಶಿಕ ಗ್ರಾಮದ ಕೊಳವೆ ಬಾವಿ ನೀರು ಪರೀಕ್ಷೆಗೆ ಖಂಡ್ರೆ ಸೂಚನೆ

ಈ ವೇಳೆ ಸಣ್ಣ ನೀರಾವರಿ ಸಚಿವ ಬೋಸುರಾಜು, ಈ ಭಾಗದ ಅಂತರ್ಜಲ 1,200 ಅಡಿಗಿಂತ ಕೆಳಕ್ಕೆ ಕುಸಿದಾಗ ಅನಿವಾರ್ಯವಾಗಿ ಯೋಜನೆ ಮಾಡಿದೆವು. ಈಗ 250-300 ಅಡಿಗೆ ನೀರು ಸಿಗುತ್ತಿದೆ. ಐಐಎಸ್ಸಿಯಿಂದ ಪರೀಕ್ಷೆ ನಡೆಸುತ್ತಿದ್ದು, ಈ ನೀರಿನಿಂದ ಆದ ಹಾನಿ ನಮಗೆ ತಿಳಿದುಬಂದಿಲ್ಲ. ಹೀಗಾಗಿ 3ನೇ ಹಂತದ ಶುದ್ಧೀಕರಣ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಹೇಳಿದರು. ಮಾತು ಮುಂದುವರೆಸಿ, ‘ಸಮೃದ್ಧಿ ಮಂಜುನಾಥ್‌ ಎರಡು ಬಾಟಲ್‌ನಲ್ಲಿ ನೀರು ತಂದಿದ್ದಾರೆ. ಆ ನೀರು ಯಾವುದು? ಈ ನೀರು ಯಾವುದು? ಎಂಬುದು ಗೊತ್ತಿಲ್ಲ’ ಎಂದರು.

ಇದಕ್ಕೆ ಕೆರಳಿದ ಸಮೃದ್ಧಿ ಮಂಜುನಾಥ್ ಸದನದ ಬಾವಿಗಿಳಿಯಲು ಯತ್ನಿಸಿದರು. ಸಚಿವರಿಗೆ ಇಂತಹ ತಾತ್ಸಾರ ಮನೋಭಾವ ಬೇಡ. ಮುಂದಿನ ಪೀಳಿಗೆಗೆ ವಿಷ ನೀಡುತ್ತಿದ್ದೀರಿ. ಕೇಳಿದರೆ ನೀರು ಯಾವುದೋ ಎನ್ನುತ್ತೀರಿ. ನಾನು ಸದದನದ ಸದಸ್ಯನಾಗಿ ಸುಳ್ಳು ಹೇಳುತ್ತೇವೆಯೇ ಎಂದು ಪ್ರಶ್ನಿಸಿದರು.

ಸಚಿವ ಕೃಷ್ಣಬೈರೇಗೌಡ ಮಾತನಾಡಿ, ವೈಜ್ಞಾನಿಕ ಕ್ರಮಗಳ ಅನುಸಾರ ನೀರು ಶುದ್ಧೀಕರಿಸಲಾಗುತ್ತಿದೆ. ರಾಜಕೀಯ ಕಾರಣಗಳಿಗಾಗಿ ಉತ್ತಮ ಕೆಲಸಕ್ಕೆ ಅನಗತ್ಯವಾಗಿ ಮಸಿ ಬಳಿಯುವುದು ಸರಿಯಲ್ಲ. 2006ರಲ್ಲಿ ಭದ್ರಾದಿಂದ ನೀರು ತರುತ್ತೇವೆ ಎಂದು ಗುದ್ದಲಿ ಪೂಜೆ ಮಾಡಿದವರು ಏನೂ ಮಾಡಿಲ್ಲ. ಈಗ ಅಲ್ಲಿನ ಅಂತರ್ಜಲ ಸಮಸ್ಯೆ ಬಗೆಹರಿದಿದೆ. ಇದನ್ನು ವಿವಾದ ಮಾಡುವುದು ಬೇಡ. ಒಂದು ವೇಳೆ ಸಮಸ್ಯೆಯಿದ್ದರೆ ವೈಜ್ಞಾನಿಕ ಸಂಸ್ಥೆಯ ವರದಿ ನೀಡಲಿ. ಅದನ್ನು ಪಾಲಿಸಲು ಸರ್ಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.

ಕೆ.ಸಿ. ವ್ಯಾಲಿ-ಎಚ್ಎನ್ ವ್ಯಾಲಿ ನೀರಿನಿಂದ ತುಂಬಿದ ಕೆರೆಗಳ ವೀಕ್ಷಣೆಗೆ ವಿಶ್ವ ಬ್ಯಾಂಕ್ ಹಾಗೂ ವಿಶ್ವಸಂಸ್ಥೆ ಅಧ್ಯಕ್ಷರು ಸ್ಥಳಕ್ಕೆ ಬಂದು ಹೊಗಳಿ ಹೋಗಿದ್ದಾರೆ. ಕೇಂದ್ರ ಸರ್ಕಾರದ ಸಂಸದೀಯ ಸಮಿತಿ ಸ್ಥಳಕ್ಕೆ ಆಗಮಿಸಿ ಕೆರೆ ನೋಡಿ ಪ್ರಶಂಸಿ ದೇಶದೆಲ್ಲೆಡೆ ಅಳವಡಿಸಿಕೊಳ್ಳಲು ಶಿಫಾರಸು ಮಾಡಿದ್ದಾರೆ. ಬಸವರಾಜ ಬೊಮ್ಮಾಯಿ ಅವರು ಇದನ್ನು ಅನುಕರಣೆ ಮಾಡಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ವಿನಾಃ ಕಾರಣ ಎಲ್ಲೋ ಒಂದು ಬೆಳೆಗೆ ಹುಳ ಬಿತ್ತು ಎಂದ ತಕ್ಷಣ ಅದಕ್ಕೆ ಕೆ.ಸಿ. ವ್ಯಾಲಿ ಎಚ್.ಎನ್ ವ್ಯಾಲಿ ನೀರಿನ ಗುಣಮಟ್ಟವೇ ಕಾರಣ ಎಂದರೆ ಹೇಗೆ? ನಾವು ಎಲ್ಲಾ ವೈಜ್ಞಾನಿಕ ಮಾನದಂಡಗಳನ್ನು ಪಾಲಿಸಿ ನೀರು ಪೂರೈಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com