ಹೈದರಾಬಾದ್: ಟಾಲಿವುಡ್ ನಟ ನಾಗಚೈತನ್ಯ ಮತ್ತು ಸಮಂತಾ ದಾಂಪತ್ಯ ಮುರಿದುಬೀಳಲು ಬಿಆರ್‌ಎಸ್ ಮುಖಂಡ ಕೆಟಿಆರ್ ಅವರೇ ಕಾರಣ ಎಂದು ಸಚಿವೆ ಕೊಂಡಾ ಸುರೇಖಾ ಸ್ಫೋಟಕ ಆರೋಪ ಮಾಡಿದ್ದಾರೆ.
ಸಮಂತಾ ರುತ್ ಪ್ರಭು, ನಾಗಾರ್ಜುನ ಮತ್ತು ನಾಗ ಚೈತನ್ಯ ಅವರ ಬಗ್ಗೆ ತೀರಾ ಅಸಭ್ಯ ರೀತಿಯಲ್ಲಿ ಅವರು ಮಾತನಾಡಿದ್ದಾರೆ. ಸಾರ್ವಜನಿಕವಾಗಿ ಕೊಂಡ ಸುರೇಖಾ ಆಡಿರುವ ಮಾತುಗಳಿಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಕೆ.ಟಿ. ರಾಮ ರಾವ್ ಅವರನ್ನು ವಿರೋಧಿಸುವ ಭರದಲ್ಲಿ ಸುರೇಖಾ ಅವರು ಇಲ್ಲಸಲ್ಲದ ವಿಚಾರಗಳನ್ನು ಎಳೆದು ತಂದಿದ್ದಾರೆ. ನಾಗ ಚೈತನ್ಯ ಮತ್ತು ಸಮಂತಾ ವಿಚ್ಛೇದನ ಪಡೆಯಲು ಕೆ.ಟಿ. ರಾಮ ರಾವ್ ಕಾರಣ ಎಂದು ಸುರೇಖಾ ಹೇಳಿದ್ದಾರೆ.
ಕೆಟಿಆರ್ ಬಳಿ ಹೋಗ್ಲಿಲ್ಲ ಅಂದ್ರೆ ಮನೆಯಲ್ಲಿ ಇರುವಂತಿಲ್ಲ ಎಂದು ಸಮಂತಾಗೆ ನಟ ನಾಗಾರ್ಜುನ ಬೆದರಿಕೆ ಹಾಕಿದ್ದರು ಎಂದೂ ಆಪಾದಿಸಿದ್ದಾರೆ. ‘ಎನ್ ಕನ್ವೆನ್ಷನ್ ಕಟ್ಟಡ ಒಡೆಯಬಾರದು ಎಂದರೆ ಸಮಂತಾಳನ್ನು ನನ್ನ ಬಳಿ ಕಳಿಸಿ ಎಂದು ನಾಗಾರ್ಜುನಗೆ ಕೆ.ಟಿ. ರಾಮ ರಾವ್ ಹೇಳಿದ್ದರು. ಕೆ.ಟಿ. ರಾಮ ರಾವ್ ಬಳಿ ಹೋಗು ಎಂದು ಸಮಂತಾಗೆ ನಾಗಾರ್ಜನ ಒತ್ತಾಯ ಮಾಡಿದರು. ಆದರೆ ಸಮಂತಾ ಒಪ್ಪಿಕೊಳ್ಳಲಿಲ್ಲ. ಒಪ್ಪದಿದ್ದರೆ ಮನೆ ಬಿಟ್ಟುಹೋಗು ಎಂದು ನಾಗಾರ್ಜುನ ಹೇಳಿದರು. ಅದಕ್ಕಾಗಿ ನಾಗ ಚೈತನ್ಯಗೆ ಸಮಂತಾ ಡಿವೋರ್ಸ್ ನೀಡಿದರು’ ಎಂದು ಕೊಂಡ ಸುರೇಖಾ ಹೇಳಿದ್ದಾರೆ. ಅಷ್ಟೇ ಅಲ್ಲ, ರಕುಲ್ ಪ್ರೀತ್ ಸಿಂಗ್ ಸೇರಿ ನಟಿಯರು ಬೇಗ ಮದ್ವೆ ಮಾಡಿಕೊಂಡು ಫೀಲ್ಡ್ ತೊರೆಯಲು ಕೂಡ ಕೆಟಿಆರ್ ಕೊಟ್ಟ ಟಾರ್ಚರ್ ಕೂಡ ಕಾರಣ ಎಂದು ಕೊಂಡಾ ಸುರೇಖಾ ಹೇಳಿರುವ ಆಡಿಯೋ ವೈರಲ್ ಆಗಿದೆ.
ಇದಕ್ಕೆ ನಟ ನಾಗಾರ್ಜುನ, ನಟಿ ಸಮಂತಾ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.ಕೊಂಡ ಸುರೇಖಾ ಹೇಳಿದ ಈ ಮಾತಿನಿಂದ ನಾಗಾರ್ಜುನ ಅವರು ಗರಂ ಆಗಿದ್ದಾರೆ. ‘ಗೌರವಾನ್ವಿತ ಸಚಿವೆ ಕೊಂಡ ಸುರೇಖಾ ಅವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ನಿಮ್ಮ ವಿರೋಧಿಗಳನ್ನು ಟೀಕಿಸಲು, ರಾಜಕೀಯದಿಂದ ದೂರ ಇರುವ ಸಿನಿಮಾ ತಾರೆಯರನ್ನು ಬಳಸಿಕೊಳ್ಳಬೇಡಿ. ಇನ್ನೊಬ್ಬರ ಖಾಸಗಿತನವನ್ನು ಗೌರವಿಸಿ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವ ಮಹಿಳೆಯಾಗಿ ನಮ್ಮ ಕುಟುಂಬದ ಮೇಲೆ ನೀವು ಮಾಡಿದ ಆರೋಪಗಳು ಸಂಪೂರ್ಣ ತಪ್ಪು. ಕೂಡಲೇ ನಿಮ್ಮ ಹೇಳಿಕೆ ವಾಪಸ್ಸು ಪಡೆದುಕೊಳ್ಳಿ ಎಂದು ಮನವಿ ಮಾಡುತ್ತೇನೆ’ ಎಂದು ನಾಗಾರ್ಜುನ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಕೊಂಡಾ ಸುರೇಖಾ ಅವರ ಹೇಳಿಕೆಗೆ ನಟಿ ಸಮಂತಾ ರುತ್ ಪ್ರಭು ಕೂಡ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಮತ್ತೊಬ್ಬರ ವೈಯಕ್ತಿಕ ವಿಚಾರಗಳನ್ನು ಗೌರವಿಸಿ, ರಾಜಕೀಯ ಜಗಳಗಳಿಂದ ನನ್ನ ಹೆಸರನ್ನು ದೂರವಿಡಿ ಎಂದು ಹೇಳಿದ್ದಾರೆ. ನನ್ನ ವಿಚ್ಛೇದನವು ವೈಯಕ್ತಿಕ ವಿಷಯವಾಗಿದೆ, ಆ ವಿಷಯವನ್ನು ಊಹಾಪೋಹಗಳಿಂದ ದೂರವಿರಿಸಲು ನಾನು ವಿನಂತಿಸುತ್ತೇನೆ. ವಿಚ್ಛೇದನವು ಪರಸ್ಪರ ಒಪ್ಪಿಗೆ ಮತ್ತು ಸೌಹಾರ್ದಯುತವಾಗಿತ್ತು, ಯಾವುದೇ ರಾಜಕೀಯ ಪಿತೂರಿ ಇಲ್ಲ ಎಂದು ಸಮಂತಾ ಇನ್ಸ್ ಸ್ಟಾಗ್ರಾಂ ನಲ್ಲಿ ಬರೆದುಕೊಂಡಿದ್ದಾರೆ.