'ಮಲಯಾಳಂ ಸಿನಿಮಾಗಳ ತಾಯಿ' ಕವಿಯೂರ್ ಪೊನ್ನಮ್ಮ ನಿಧನ
ವಯೋಸಹಜ ಕಾಯಿಲೆ ಮತ್ತು ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಕವಿಯೂರ್ ಪೊನ್ನಮ್ಮ ಅವರು ಕಳೆದ ವಾರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಕೊಚ್ಚಿ: 'ಮಲಯಾಳಂ ಸಿನಿಮಾಗಳ ತಾಯಿ' ಎಂದೇ ಖ್ಯಾತಿ ಪಡೆದಿದ್ದ ಹಿರಿಯ ನಟಿ ಕವಿಯೂರ್ ಪೊನ್ನಮ್ಮ(79) ಅವರು ಶುಕ್ರವಾರ ಕೊಚ್ಚಿಯಲ್ಲಿ ನಿಧನರಾಗಿದ್ದಾರೆ.
ವಯೋಸಹಜ ಕಾಯಿಲೆ ಮತ್ತು ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಕವಿಯೂರ್ ಪೊನ್ನಮ್ಮ ಅವರು ಕಳೆದ ವಾರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
1945 ರಲ್ಲಿ ಪತ್ತನಂತಿಟ್ಟದ ಕವಿಯೂರ್ ಎಂಬ ಹಳ್ಳಿಯಲ್ಲಿ ಜನಿಸಿದ ಪೊನ್ನಮ್ಮ ಅವರು ತರಬೇತಿ ಪಡೆದ ಗಾಯಕಿಯಾಗಿ ತಮ್ಮ ಕಲಾ ಪಯಣವನ್ನುಆರಂಭಿಸಿದರು. ನಂತರ ರಂಗಭೂಮಿಯಲ್ಲಿ ನಟಿಸುವ ಮೂಲಕ ನಟನಾ ವೃತ್ತಿಜೀವನಕ್ಕೆ ಕಾಲಿಟ್ಟರು. ಕಳೆದ 60 ವರ್ಷಗಳಿಂದ 700ಕ್ಕೂ ಹೆಚ್ಚು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಕವಿಯೂರ್ ಪೊನ್ನಮ್ಮ ಅವರು ಮಲಯಾಳಂ ಚಿತ್ರ, 1964 ರಲ್ಲಿ ಸಸಿ ಕುಮಾರ್ ನಿರ್ದೇಶಿಸಿದ ಕುಟುಂಬಿನಿಯಲ್ಲಿ ತಾಯಿಯ ಪಾತ್ರ ಮಾಡಿದ್ದರು. ಈ ಪಾತ್ರವು ಅವರ ಆರು ದಶಕಗಳ ವೃತ್ತಿಜೀವನದ ನಿರ್ಣಾಯಕ ಪಾತ್ರವಾಗಿದೆ.
ನಂತರ ಅಮ್ಮ ಅಮ್ಮಯ್ಯಮ್ಮ(1998) ಚಿತ್ರದಲ್ಲಿ ಶಾರದ ಟೀಚರ್, ನಂದನಂ(2002) ನಲ್ಲಿ ಉಣ್ಣಿ ಅಮ್ಮ ಮತ್ತು ಬಾಬಾ ಕಲ್ಯಾಣಿ(2006)ಯಲ್ಲಿ ಮೀನಾಕ್ಷಿಯಮ್ಮ ಮುಂತಾದ ಅಪ್ರತಿಮ ಪಾತ್ರಗಳ ಮೂಲಕ ಪೊನ್ನಮ್ಮ ತಾಯಂದಿರ ನಿಸ್ವಾರ್ಥ ಪ್ರೀತಿ ಮತ್ತು ಕ್ಷಮೆಯನ್ನು ಪ್ರದರ್ಶಿಸಿದರು.
ಕವಿಯೂರ್ ಪೊನ್ನಮ್ಮ ಅವರು ನಾಲ್ಕು ಬಾರಿ ಕೇರಳ ರಾಜ್ಯ ಪ್ರಶಸ್ತಿಯನ್ನೂ ಪಡೆದಿದ್ದಾರೆ.