ಏ.18 ರಂದು ಬಿಡುಗಡೆಯಾದ ರವಿ ಬಸ್ರೂರ್ ನಿರ್ದೇಶನದ ಡಾ. ಶಿವರಾಜ್ ಕುಮಾರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ 'ವೀರ ಚಂದ್ರಹಾಸ' ಸಿನಿಮಾಕ್ಕೆ ಪ್ರೇಕ್ಷಕ ಮಹಾಪ್ರಭು ಫಿದಾ ಆಗಿದ್ದು, ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಸಿನಿಮಾ ಇತಿಹಾಸದಲ್ಲಿಯೇ ಇದು ಮೊದಲ ಪ್ರಯತ್ನವಾಗಿದೆ. ಸಮಕಾಲೀನ ಚಲನಚಿತ್ರ ನಿರ್ಮಾಣ ತಂತ್ರಗಳೊಂದಿಗೆ ಸಾಂಪ್ರದಾಯಿಕ ಯಕ್ಷಗಾನದ ಕಲಾ ಪ್ರಕಾರವನ್ನು ಅನನ್ಯವಾಗಿ ಸಂಯೋಜಿರುವ ವೀರ ಚಂದ್ರಹಾಸ’ ಕನ್ನಡ ಚಿತ್ರರಂಗದಲ್ಲಿ ಒಂದು ಅತ್ಯುತ್ತಮ ಸಿನಿಮಾ ಹೆಗ್ಗಳಿಕೆಗೆ ಪಾತ್ರವಾಗಿದೆ.
ಅಭಿಮಾನಿಗಳು ಮತ್ತು ವಿಮರ್ಶಕರು ಆನ್ ಲೈನ್ ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಥಿಯೇಟರ್ ಗೆ ಬಂದು ಪ್ರೋತ್ಸಾಹಿಸಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಫೋಸ್ಟ್ ಮಾಡುತ್ತಿದ್ದಾರೆ.
ಸಂಗೀತದ ಮೂಲಕ ದೇಶಾದ್ಯಂತ ಮನೆಮಾತಾಗಿರುವ ರವಿ ಬಸ್ರೂರು ನಿರ್ದೇಶನದ ವೀರ ಚಂದ್ರಹಾಸ, ಪೌರಾಣಿಕ ಕುಂತಲ ಸಾಮ್ರಾಜ್ಯದ ಐತಿಹಾಸಿಕ ಕಥೆಯಾಗಿದೆ. ಈ ಚಿತ್ರವು ಮಹಾಭಾರತ ಯುಗದ ಹಿಂದಿನದು ಎಂದು ನಂಬಲಾದ ಚಂದ್ರಹಾಸನ ಕುರಿತು ಹೇಳುತ್ತದೆ. ಸಾಂಪ್ರದಾಯಿಕ ಯಕ್ಷಗಾನ ಪ್ರದರ್ಶನದೊಂದಿಗೆ ಐತಿಹಾಸಿಕ ಕಥೆಯಾಗಿದ್ದು, ಸಾಂಪ್ರದಾಯಿಕ ಕಲಾ ಪ್ರಕಾರಗಳನ್ನು ನವೀನ ಚಲನಚಿತ್ರ ನಿರ್ಮಾಣ ತಂತ್ರಗಳೊಂದಿಗೆ ವಿಲೀನಗೊಳಿಸಲಾಗಿದೆ.
ಸಿನಿ ಎಕ್ಸ್ ಪ್ರೆಸ್ ಜೊತೆಗಿನ ವಿಶೇಷ ಸಂವಾದದಲ್ಲಿ ಮಾತನಾಡಿದ ರವಿ ಬಸ್ರೂರು, ಈ ಚಿತ್ರದ ಮೂಲಕ ಕರ್ನಾಟಕದ ಪ್ರಮುಖ ಕಲೆಯಾದ ಯಕ್ಷಗಾನವನ್ನು ಜಾಗತಿಕ ಪ್ರೇಕ್ಷಕರಿಗೆ ತಲುಪಿಸುವ 12 ವರ್ಷಗಳ ಸುದೀರ್ಘ ಕನಸನ್ನು ನನಸು ಮಾಡಿಕೊಳ್ಳುವ ತವಕದಲ್ಲಿರುವುದಾಗಿ ತಿಳಿಸಿದರು. ಈ ಚಿತ್ರಕ್ಕೆ ಎದುರಾದ ಅನೇಕ ಸವಾಲುಗಳನ್ನು ಜಯಿಸಿದ್ದು, ನಿಜವಾಗಿಯೂ ವಿಶೇಷವಾದದ್ದ ಚಿತ್ರ ಮಾಡಿರುವುದಾಗಿ ತಿಳಿಸಿದರು.
ವೀರ ಚಂದ್ರಹಾಸ ಚಿತ್ರದಲ್ಲಿ ನಾಯಕ ನಟರಾದ ಶಿಥಿಲ್ ಶೆಟ್ಟಿ, ನಾಗಶ್ರೀ ಜಿ ಎಸ್, ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ, ಉದಯ್ ಕಡಬಾಳ್, ರವೀಂದ್ರ ದೇವಾಡಿಗ, ನಾಗರಾಜ್ ಸರ್ವೆಗಾರ್, ಗುಣಶ್ರೀ ಎಂ ನಾಯಕ್, ಶ್ರೀಧರ್ ಕಾಸರಕೋಡು, ಶ್ವೇತಾ ಅರೆಹೊಳೆ, ಪ್ರಜ್ವಲ್ ಕಿನ್ನಾಳ್ ಸೇರಿದಂತೆ ಪ್ರತಿಭಾವಂತ ಕಲಾವಿದರ ದಂಡೇ ಇದೆ. ಈ ಚಿತ್ರದಲ್ಲಿ ಸುಮಾರು 450 ಯಕ್ಷಗಾನ ಕಲಾವಿದರು ಕಾಣಿಸಿಕೊಂಡಿದ್ದಾರೆ.