ಹೈದರಾಬಾದ್: ಟಾಲಿವುಡ್ ನಲ್ಲಿ ಪೈರಸಿ ಹಾವಳಿ ಮಿತಿ ಮೀರಿದ್ದು, ಈ ಬಾರಿ ನಟ ವಿಜಯ್ ದೇವರಕೊಂಡ ಅಭಿನಯದ ಕಿಂಗ್ಡಮ್ ಚಿತ್ರಕ್ಕೆ ಪೈರಸಿ ವೆಬ್ ಸೈಟ್ ವೊಂದು ಎಚ್ಚರಿಕೆ ನೀಡಿ ಇಡೀ ಚಿತ್ರವನ್ನು ಲೀಕ್ ಮಾಡಿದೆ.
ಅಚ್ಚರಿಯಾದರೂ ಸತ್ಯ.. ಕಾಲಿವುಡ್ ನಲ್ಲಿ ತಮಿಳ್ ರಾಕರ್ಸ್, ಟಾಲಿವುಡ್ ನಲ್ಲಿ Ibomma ಎಂಬ ವೆಬ್ ಸೈಟ್ ಗಳು ಬಿಡುಗಡೆಯಾಗುವ ಹೊಸ ಹೊಸ ಚಿತ್ರಗಳನ್ನು ಪೈರಸಿ ಮಾಡಿ ತಮ್ಮ ತಮ್ಮ ವೆಬ್ ಸೈಟ್ ಗಳಲ್ಲಿ ಅಪ್ಲೋಡ್ ಮಾಡುತ್ತಿವೆ. ಈ ಬಾರಿ ಇದರ ಆಘಾತ ಟಾಲಿವುಡ್ ನಿರ್ಮಾಪಕರಿಗೆ ತಟ್ಟಿದ್ದು, ಪ್ರಮುಖವಾಗಿ ನಟ ವಿಜಯ್ ದೇವರಕೊಂಡ ಅಭಿನಯದ ಕಿಂಗ್ಡಮ್ ಚಿತ್ರವನ್ನು ಅಪ್ಲೋಡ್ ಮಾಡಲಾಗಿದೆ.
ನಟ ವಿಜಯ್ ದೇವರಕೊಂಡ ಅಭಿನಯದ ಬಹು ನಿರೀಕ್ಷಿತ ಚಿತ್ರ ಕಿಂಗ್ಡಮ್ ಶುಕ್ರವಾರ ದೇಶಾದ್ಯಂತ ತೆರೆಗೆ ಅಪ್ಪಳಿಸಿದ್ದು, ಮಿಶ್ರ ಪ್ರತಿಕ್ರಿಯೆ ಹೊರತಾಗಿಯೂ ಉತ್ತಮ ಕಲೆಕ್ಷನ್ ಗಳಿಸುತ್ತಿದೆ. ಇದರ ನಡುವೆಯೇ ಕಿಂಗ್ಡಮ್ ಚಿತ್ರಕ್ಕೆ ಐಬೊಮ್ಮಾ ಆಘಾತ ನೀಡಿದ್ದು, ಇಡೀ ಚಿತ್ರವನ್ನು ಆನ್ಲೈನ್ ನಲ್ಲಿ ಸೋರಿಕೆ ಮಾಡಿದೆ.
ಆ್ಯಂಟಿ ಪೈರಸಿ ತಂಡ ರಚನೆ
ವಿಜಯ್ ದೇವರಕೊಂಡ ಅಭಿನಯದ ಕಿಂಗ್ಡಮ್ ಚಿತ್ರವನ್ನು ನಾಗವಂಶಿ ನಿರ್ಮಾಣ ಮಾಡಿದ್ದಾರೆ. ಈ ಚಿತ್ರವನ್ನು ಪೈರಸಿಯಿಂದ ರಕ್ಷಿಸಲು ಚಿತ್ರತಂಡ ಸಾಕಷ್ಟು ಕಸರತ್ತು ನಡೆಸಿತ್ತು. ಇದಕ್ಕಾಗಿ ಆ್ಯಂಟಿ ಪೈರಸಿ ಟೀಂ ಅನ್ನು ರಚನೆ ಮಾಡಿದ್ದರು. ಆದರೆ ಚಿತ್ರತಂಡದ ಈ ಕಾರ್ಯಾಚರಣೆ ವಿರುದ್ಧ ಐಬೊಮ್ಮ ವೆಬ್ ಸೈಟ್ ಅಸಮಾಧಾನ ವ್ಯಕ್ತಪಡಿಸಿತ್ತು.
ಎಚ್ಚರಿಕೆ ನೀಡಿ ಇಡೀ ಚಿತ್ರ ಸೋರಿಕೆ ಮಾಡಿದ IBomma
ಇನ್ನು ಕಿಂಗ್ಡಮ್ ಚಿತ್ರದ ಆ್ಯಂಟಿ ಪೈರಸಿ ಕಾರ್ಯಾಚರಣೆಯನ್ನು ಬಹಿರಂಗವಾಗಿಯೇ ಟೀಕಿಸಿದ್ದ IBomma ತಂಡ ಚಿತ್ರತಂಡದ ಕಾರ್ಯಾಚರಣೆಗೆ ಆಕ್ರೋಶ ವ್ಯಕ್ತಪಡಿಸಿತ್ತು. ನೀವು ನಮ್ಮ ಮೇಲೆ ಫೋಕಸ್ ಮಾಡಿದ್ರೆ.. ನಾವು ನಿಮ್ಮ ಮೇಲೆ ಫೋಕಸ್ ಮಾಡ್ತೀವಿ.. ನಮಗೆ ನಟ ವಿಜಯ್ ದೇವರಕೊಂಡ ಅಥವಾ ಚಿತ್ರ ತಂಡದ ಮೇಲೆ ಕೋಪವಿಲ್ಲ. ಆದರೆ ಪೈರಸಿ ತಡೆಗೆ ಚಿತ್ರತಂಡ ಕೆಲ ಏಜೆನ್ಸಿಗಳಿಗೆ ಹಣ ನೀಡುತ್ತಿದ್ದು, ಅಚ್ಚರಿ ಎಂದರೆ ಈ ಏಜೆನ್ಸಿಗಳೇ ಪೈರಸಿ ಮಾಡುತ್ತಿವೆ.
ಈ ಏಜೆನ್ಸಿಗಳಿಂದಲೇ ಪೈರಸಿ ಜಾಲ ವಿಸ್ತರಿಸುತ್ತಿದೆ. ನೀವು ಪೈರಸಿ ತಡೆಗೆ ಅವರಿಗೆ ಹಣ ನೀಡುತ್ತಿದ್ದೀರಿ.. ಆದರೆ ಅವರು ನಿಮ್ಮಂದ ಹಣ ಪಡೆದು ನಮ್ಮ ಹೆಸರಲ್ಲಿ ಫೇಕ್ ವೆಬ್ ಸೈಟ್ ಗಳನ್ನು ತೆರೆದು ಅಲ್ಲಿ ಸಿನಿಮಾಗಳನ್ನು ಪೈರಸಿ ಮಾಡುತ್ತಿದ್ದಾರೆ. ಈ ಹಿಂದೆಯೂ ಕೂಡ ನಮ್ಮ ಐಬೊಮ್ಮ ಹೆಸರಿನ ಫೇಕ್ ವೆಬ್ಸೈಟ್ ನಲ್ಲಿ ವಿಜಯ್ ದೇವರಕೊಂಡ ಅವರ ಖುಷಿ ಚಿತ್ರವನ್ನು ಪೈರಸಿ ಮಾಡಿದ್ದರು ಎಂದು ಆರೋಪಿಸಿದೆ.
ಅಂತೆಯೇ ಮುಂದಿನ 24 ಗಂಟೆಗಳ ಒಳಗೆ ನಕಲಿ ವೆಬ್ ಸೈಟ್ ಗಳ ವಿರುದ್ಧ ಕ್ರಮ ಕೈಗೊಳ್ಳಿ...ಇಲ್ಲವೆಂದಲ್ಲಿ ನಮ್ಮ ಕೆಲಸ ನಾವು ಮಾಡುತ್ತೇವೆ. ಎಲ್ಲಾ ವೆಬ್‌ಸೈಟ್‌ಗಳ ಮೇಲೆ ಕೇಂದ್ರೀಕರಿಸುವ ಬದಲು ಆಯ್ದ ವೆಬ್‌ಸೈಟ್‌ಗಳ ಮೇಲೆ ಮಾತ್ರ ಏಕೆ ಗಮನ ಕೇಂದ್ರೀಕರಿಸಲಾಗುತ್ತಿದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ನಿಮಗೆ ಮೆದುಳು ಇಲ್ಲ, ಇದ್ದರೆ ಅದನ್ನು ಸ್ವಲ್ಪ ಬಳಸಿ" ಎಂದು ಬಹಿರಂಗ ಎಚ್ಚರಿಕೆ ನೀಡಿದೆ. ಆದರೆ ಈ ಹೇಳಿಕೆಯನ್ನು ಸ್ವತಃ ಐಬೊಮ್ಮ ವೆಬ್ ಸೈಟ್ ಮಾಡಿದೆಯೇ ಅಥವ ಅವರ ಹೆಸರನ್ನಲ್ಲಿ ನಕಲಿ ವೆಬ್ ಸೈಟ್ ಮಾಡಿದೆಯೇ ಎಂಬುದು ತಿಳಿದುಬಂದಿಲ್ಲ.