ಕೊಚ್ಚಿ: ಕೇರಳದ ಕೊಚ್ಚಿಯಲ್ಲಿ ನಡೆದ ಐಟಿ ಉದ್ಯೋಗಿ ಅಪಹರಣ ಪ್ರಕರಣದಲ್ಲಿ ಮಲಯಾಳಂ ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿರುವ ನಟಿ ಲಕ್ಷ್ಮಿ ಮೆನನ್ ಅವರ ಹೆಸರು ಆರೋಪಿಗಳ ಪಟ್ಟಿಯಲ್ಲಿದೆ ಎಂದು ವರದಿಯಾಗಿದೆ.
ಹೌದು, ಸುಂದರ ಪಾಂಡಿಯನ್, ರೆಕ್ಕಾ, ವೇದಾಲಂ, ಕೊಂಬಾನ್ ಮುಂತಾದ ಸಿನಿಮಾಗಳ ಮೂಲಕ ಫೇಮಸ್ ಆಗಿರುವ ನಟಿ ಲಕ್ಷ್ಮಿ ಮೆನನ್ ಮೇಲೆ ಗಂಭೀರ ಆರೋಪವೊಂದು ಕೇಳಿಬಂದಿದೆ. ಕಳೆದ ಆಗಸ್ಟ್ 24 ರಂದು ಕೊಚ್ಚಿಯ ಐಷಾರಾಮಿ ಬಾರ್‌ನಲ್ಲಿ ನಡೆದ ಗಲಾಟೆಯಲ್ಲಿ ಲಕ್ಷ್ಮಿ ಮೆನನ್ ಹೆಸರು ತಳುಕು ಹಾಕಿಕೊಂಡಿದೆ.
ಲಕ್ಷ್ಮಿ ಮತ್ತು ಅವರ ಸ್ನೇಹಿತರು ಹಾಗೂ ಮತ್ತೊಂದು ಗುಂಪಿನ ನಡುವೆ ಹೊಡೆದಾಟ ನಡೆದಿದೆ. ಲಕ್ಷ್ಮಿ ಮೆನನ್ ಮತ್ತು ಫ್ರೆಂಡ್ಸ್ ಈ ವೇಳೆ ಎದುರಾಳಿ ಗುಂಪಿನ ಯುವಕನನ್ನು (ಐಟಿ ಉದ್ಯೋಗಿ) ಕಾರಿನಲ್ಲಿ ಅಪಹರಿಸಿ, ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆಯ ಸಂಬಂಧ ದೂರು ದಾಖಲಾಗಿದ್ದು, ಲಕ್ಷ್ಮಿ ಮೆನನ್ ಅವರು ನಾಪತ್ತೆಯಾಗಿದ್ದರೆ ಎಂದು ಹೇಳಲಾಗುತ್ತಿದೆ.
ಲಕ್ಷ್ಮಿ ಮೆನನ್ ಅವರು ಆಗಸ್ಟ್ 24 ರಂದು ಕೊಚ್ಚಿಯ ಬ್ಯಾನರ್ಜಿ ರಸ್ತೆಯಲ್ಲಿರುವ ಐಷಾರಾಮಿ ಬಾರ್‌ಗೆ ಭೇಟಿ ನೀಡಿದ್ದರು. ಈ ವೇಳೆ ಲಕ್ಷ್ಮಿ ಸ್ನೇಹಿತರು ಮತ್ತು ಇತರ ಗುಂಪಿನ ಯುವಕರ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ. ಈ ಗಲಾಟೆ ರಾತ್ರಿ 11 ರಿಂದ 12 ಗಂಟೆಯವರೆಗೆ ನಡೆದಿದ್ದು, ಗಲಾಟೆಯ ನಂತರ ಲಕ್ಷ್ಮಿ ಮೆನನ್ ಸ್ನೇಹಿತರಾದ ಮಿಥುನ್ ಮತ್ತು ಅನೀಸ್ ಎಂಬುವವರು ಐಟಿ ಕಂಪನಿಯ ಯುವಕನನ್ನು ಬಲವಂತವಾಗಿ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ. ಆ ಯುವಕನ ಮೇಲೆ ಕಾರಿನಲ್ಲಿ ಹಲ್ಲೆ ಮಾಡಿ, ನಂತರ ರಸ್ತೆಬದಿಯಲ್ಲಿ ಬಿಟ್ಟು ಹೋಗಿದ್ದಾರೆ ಎಂದು ಆರೋಪಿಸಲಾಗಿದೆ. ಬಳಿಕ ಐಟಿ ಉದ್ಯೋಗಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.