ನಟ ವಿಶಾಲ್ ಅವರಿಗಿಂದು ಡಬಲ್ ಧಮಾಕ. ನಟ ಇಂದು 47ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ನಟಿ ಸಾಯಿ ಧನ್ಶಿಕಾ ಅವರೊಂದಿಗೆ ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದಾರೆ. ಆಪ್ತ ಸ್ನೇಹಿತರು ಮತ್ತು ಕುಟುಂಬದ ಸಮ್ಮುಖದಲ್ಲಿ ಇಬ್ಬರು ಉಂಗುರ ಬದಲಿಸಿಕೊಂಡಿದ್ದಾರೆ.
ಮೇ ತಿಂಗಳಲ್ಲಿ, ನಟಿ ಸಾಯಿ ಧನ್ಶಿಕಾ ಅವರ ಯೋಗಿ ಡಾ ಚಿತ್ರದ ಪತ್ರಿಕಾಗೋಷ್ಠಿಗೆ ಅತಿಥಿಾಗಿ ಆಗಮಿಸಿದ್ದ ನಟ ವಿಶಾಲ್, ತಾವು ಬಹಳ ದಿನಗಳಿಂದ ಸಂಬಂಧದಲ್ಲಿದ್ದು, ಶೀಘ್ರದಲ್ಲೇ ಆ ಬಗ್ಗೆ ಮಾಹಿತಿ ನೀಡುವುದಾಗಿ ಘೋಷಿಸಿದ್ದರು. ಆರಂಭದಲ್ಲಿ ವಿಶಾಲ್ ಅವರ ಜನ್ಮದಿನವಾದ ಆಗಸ್ಟ್ 29 ರಂದು ವಿವಾಹವಾಗಲು ಯೋಜಿಸಲಾಗಿತ್ತು. ಆದರೆ, ನಾಡಿಗರ್ ಸಂಗಮ್ ಕಟ್ಟಡದ ಅಪೂರ್ಣತೆಯಿಂದಾಗಿ ಮದುವೆಯನ್ನು ಮುಂದೂಡಲಾಗಿದೆ ಎಂದು ಘೋಷಿಸಿದರು. ನಾಡಿಗರ್ ಸಂಗಮ್‌ನ ಪ್ರಧಾನ ಕಾರ್ಯದರ್ಶಿ ವಿಶಾಲ್, ಹೊಸ ಕಟ್ಟಡ ಉದ್ಘಾಟನೆಯ ನಂತರವೇ ಮದುವೆಯಾಗಲು ಬಯಸುವುದಾಗಿ ಹೇಳಿದ್ದಾರೆ.
ನಟ ಇಂದು ಬೆಳಿಗ್ಗೆ 11 ಗಂಟೆಗೆ ಇನ್ನೂ ನಿರ್ಮಾಣ ಹಂತದಲ್ಲಿರುವ ನಾಡಿಗರ್ ಸಂಗಮ್ ಕಟ್ಟಡಕ್ಕೆ ಭೇಟಿ ನೀಡಿದರು.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ವಿಶಾಲ್, 'ನನ್ನ ಹುಟ್ಟುಹಬ್ಬದಂದು ನನಗೆ ಶುಭ ಹಾರೈಸಿ ಆಶೀರ್ವದಿಸಿದ್ದಕ್ಕಾಗಿ ವಿಶ್ವದ ಮೂಲೆ ಮೂಲೆಯಿಂದ ಬಂದ ನಿಮ್ಮೆಲ್ಲರಿಗೂ ಪ್ರಿಯರಿಗೆ ನ್ಯವಾದಗಳು. ಇಂದು ಸಾಯಿ ಧನ್ಶಿಕಾ ಅವರೊಂದಿಗೆ ನಡೆದ ನನ್ನ ನಿಶ್ಚಿತಾರ್ಥದ ಶುಭ ಸುದ್ದಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಸಂತೋಷವಾಗಿದೆ. ಸಕಾರಾತ್ಮಕ ಮತ್ತು ಆಶೀರ್ವಾದದ ಭಾವನೆ ಇದೆ. ಎಂದಿನಂತೆ ನಿಮ್ಮ ಆಶೀರ್ವಾದ ಮತ್ತು ಉತ್ತಮ ಭಾವನೆಗಳನ್ನು ಬಯಸುತ್ತೇನೆ' ಎಂದು ಬರೆದಿದ್ದಾರೆ. ನಿಶ್ಚಿತಾರ್ಥದ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಸಾಯಿ ಧನ್ಶಿಕಾ, 'ನನಗೆ ವಿಶಾಲ್ ಕಳೆದ 15 ವರ್ಷಗಳಿಂದ ಗೊತ್ತು. ಈ ಹಿಂದೆ ನಾವು ಭೇಟಿಯಾದಾಗಲೆಲ್ಲ ಅವರು ನನ್ನನ್ನು ಗೌರವದಿಂದ ನಡೆಸಿಕೊಳ್ಳುತ್ತಿದ್ದರು. ನಾನು ತೀವ್ರ ತೊಂದರೆಯಲ್ಲಿದ್ದಾಗ, ಅವರು ನನ್ನ ಮನೆಗೆ ಭೇಟಿ ನೀಡಿ ನನಗಾಗಿ ಧ್ವನಿ ಎತ್ತಿದರು. ಯಾವುದೇ ನಾಯಕ ನನ್ನ ಮನೆಗೆ ಭೇಟಿ ನೀಡಿಲ್ಲ. ಅದು ಅವರ ಅವರ ಉತ್ತಮ ಗುಣವಾಗಿತ್ತು. ಅವರ ನಡೆಯು ಸಂತೋಷಕರವಾಗಿತ್ತು' ಎಂದರು.
ಅದೇ ಕಾರ್ಯಕ್ರಮದಲ್ಲಿ, ಧನ್ಶಿಕಾರನ್ನು ತನ್ನ ಬಾಳ ಸಂಗಾತಿಯಾಗಿ ಪಡೆದದ್ದು ಎಷ್ಟು ಅದೃಷ್ಟ ಎಂದು ವಿಶಾಲ್ ಒತ್ತಿ ಹೇಳಿದರು. 'ಆಕೆ ಅದ್ಭುತ ವ್ಯಕ್ತಿ. ದೇವರು ಕೊನೆಯವರೆಗೂ ಅತ್ಯುತ್ತಮವಾದದ್ದನ್ನು ಉಳಿಸುತ್ತಾನೆ ಎಂದು ಹೇಳುತ್ತಾರೆ ಮತ್ತು ಅವನು ನನಗಾಗಿ ಧನ್ಶಿಕಾರನ್ನು ಉಳಿಸಿದನು ಎಂದು ನಾನು ನಂಬುತ್ತೇನೆ. ನಾವು ಸಕಾರಾತ್ಮಕ ಮತ್ತು ಸುಂದರವಾದ ಜೀವನವನ್ನು ನಡೆಸಲಿದ್ದೇವೆ' ಎಂದರು.
ಸಾಯಿ ಧನ್ಶಿಕಾ ಇನ್ನೂ 'ಯೋಗಿ ಡಾ' ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಮತ್ತೊಂದೆಡೆ, ವಿಶಾಲ್ ತಮ್ಮ 35ನೇ ಚಿತ್ರ 'ಮಗುದಂ' ನಲ್ಲಿ ಕೆಲಸ ಮಾಡುತ್ತಿದ್ದಾರೆ. ವಿಶಾಲ್ ಮತ್ತು ಸಾಯಿ ಧನ್ಶಿಕಾ ಅವರ ವಿವಾಹ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ.