ಎಂಟು ವರ್ಷಗಳ ನಂತರ ರಚಿತಾ ರಾಮ್, ರಾಜ್‌ಗುರು ನಿರ್ದೇಶನದ ಚಿತ್ರಕ್ಕಾಗಿ ಧ್ರುವ ಸರ್ಜಾ ಜೊತೆ ಮತ್ತೆ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ. ಕಳೆದ ತಿಂಗಳು ನಡೆದ ಮುಹೂರ್ತದ ಸಮಯದಲ್ಲಿ ರಚಿತಾ ಸ್ವತಃ ಹಾಜರಿದ್ದರು. ಕ್ರಿಮಿನಲ್ ಎಂದು ಹೆಸರಿಸಲಾದ ಈ ಚಿತ್ರವನ್ನು ಗೋಲ್ಡ್‌ಮೈನ್ಸ್ ಟೆಲಿಫಿಲ್ಮ್ಸ್‌ನ ಮನೀಶ್ ಶಾ ನಿರ್ಮಿಸಿದ್ದಾರೆ. ಈ ತಿಂಗಳಲ್ಲಿ ಚಿತ್ರೀಕರಣ ಪ್ರಾರಂಭಿಸಲು ಚಿತ್ರತಂಡ ತಯಾರಿ ನಡೆಸುತ್ತಿದ್ದರೆ, ಇದೀಗ ದಕ್ಷಿಣ ಭಾರತದ ಖ್ಯಾತ ನಟಿ ಐಶ್ವರ್ಯಾ ರಾಜೇಶ್ ಚಿತ್ರದ ತಾರಾಗಣಕ್ಕೆ ಸೇರಿದ್ದಾರೆ.
ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸಿ ಹೆಸರುವಾಸಿಯಾಗಿರುವ ಐಶ್ವರ್ಯಾ, ಆರಂಭದಲ್ಲಿ ಧನಂಜಯ್ ಮತ್ತು ಶಿವರಾಜ್‌ಕುಮಾರ್ ನಟನೆಯ ರೋಹಿತ್ ಪದಕಿ ನಿರ್ದೇಶನದ ಉತ್ತರಾಖಂಡ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಾರೆಂದು ನಿರೀಕ್ಷಿಸಲಾಗಿತ್ತು. ಆದಾಗ್ಯೂ, ಆ ಯೋಜನೆ ಈಗ ವಿಳಂಬವಾಗಿದೆ. ಇದೀಗ ಕ್ರಿಮಿನಲ್ ಚಿತ್ರವೇ ಅವರ ಚೊಚ್ಚಲ ಕನ್ನಡ ಚಿತ್ರವಾಗಲಿದೆ ಎನ್ನಲಾಗಿದೆ.
ಗ್ರಾಮೀಣ ಹಿನ್ನೆಲೆಯಲ್ಲಿ ಹೆಣೆಯಲಾದ ಕ್ರಿಮಿನಲ್ ಚಿತ್ರವು ಡ್ರಾಮಾ ಮತ್ತು ಹೈ-ಆಕ್ಟೇನ್ ಆ್ಯಕ್ಷನ್ ಅನ್ನು ಸಂಯೋಜಿಸುತ್ತದೆ. ನೈಜ ಘಟನೆಗಳಿಂದ ಪ್ರೇರಿತವಾಗಿದೆ. ಇತ್ತೀಚೆಗಷ್ಟೇ ಶೀರ್ಷಿಕೆ ಟೀಸರ್ ಬಿಡುಗಡೆಯಾಗಿದೆ. ಕೆರೆಬೇಟೆ ಮೂಲಕ ನಿರ್ದೇಶನಕ್ಕೆ ಪದಾರ್ಪಣೆ ಮಾಡಿದ ರಾಜಗುರು, ತಮ್ಮ ಎರಡನೇ ಚಿತ್ರ ನಿರ್ದೇಶನಕ್ಕೆ ಮರಳಿದ್ದಾರೆ.
ಕನ್ನಡದ ಜೊತೆಗೆ, 'ಕ್ರಿಮಿನಲ್' ಚಿತ್ರವು ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿಯೂ ಬಿಡುಗಡೆಯಾಗಲಿದೆ. ಈ ಚಿತ್ರಕ್ಕೆ ಚಂದನ್ ಶೆಟ್ಟಿ ಸಂಗೀತ, ರವಿವರ್ಮ ಛಾಯಾಗ್ರಹಣ ಮತ್ತು ವಿಕ್ರಮ್ ಮೋರ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಚಿತ್ರತಂಡ ಉಳಿದ ಪಾತ್ರವರ್ಗವನ್ನು ಕ್ರಮೇಣ ಬಹಿರಂಗಪಡಿಸುತ್ತಿದ್ದರೂ, ಐಶ್ವರ್ಯಾ ರಾಜೇಶ್ ಸೇರ್ಪಡೆಯ ಬಗ್ಗೆ ಅಧಿಕೃತ ಘೋಷಣೆ ಶೀಘ್ರದಲ್ಲೇ ಹೊರಬೀಳುವ ನಿರೀಕ್ಷೆಯಿದೆ.