ನವದೆಹಲಿ: ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿರುವ ನಟಿ ರಶ್ಮಿಕಾ ಮಂದಣ್ಣ ಇದೀಗ ಬಿಡುವು ಮಾಡಿಕೊಂಡು ತಮ್ಮ ಗೆಳತಿಯರ ಜೊತೆಗೆ ಶ್ರೀಲಂಕಾಕ್ಕೆ ತೆರಳಿದ್ದಾರೆ. ಪ್ರವಾಸದ ಫೋಟೊಗಳು ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಮತ್ತೊಂದು ವಿಚಾರದ ಚರ್ಚೆಗೆ ಗ್ರಾಸವಾಗಿವೆ.
ನಟ ವಿಜಯ್ ದೇವರಕೊಂಡ ಅವರೊಂದಿಗೆ ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ರಶ್ಮಿಕಾ ಮಂದಣ್ಣ ಅವರು ಶೀಘ್ರದಲ್ಲೇ ಅವರೊಂದಿಗೆ ಹಸೆಮಣೆ ಏರಲಿದ್ದು, ಅದಕ್ಕೂ ಮುನ್ನ ಬ್ಯಾಚುಲರ್ ಪಾರ್ಟಿ ಟ್ರಿಪ್ ಇದಾಗಿದೆ ಎಂದು ಹಲವಾರು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಮಂಗಳವಾರ ಸಂಜೆ ರಶ್ಮಿಕಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪ್ರವಾಸದ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ಅವರು ಮತ್ತು ಅವರ ಸ್ನೇಹಿತರು ಶ್ರೀಲಂಕಾದ ಒಂದು ಸುಂದರ ಪರಿಸರದಲ್ಲಿ ಎಂಜಾಯ್ ಮಾಡುತ್ತಿರುವ ಫೋಟೊಗಳಿವೆ.
ಚಿತ್ರಗಳ ಜೊತೆಗೆ ರಶ್ಮಿಕಾ, 'ಇತ್ತೀಚೆಗೆ ನನಗೆ 2 ದಿನಗಳ ರಜೆ ಸಿಕ್ಕಿತು ಮತ್ತು ನನ್ನ ಗೆಳತಿಯರೊಂದಿಗೆ ಸಮಯ ಕಳೆಯಲು ನನಗೆ ಈ ಅವಕಾಶ ಸಿಕ್ಕಿತು ಮತ್ತು ನಾವು ಶ್ರೀಲಂಕಾದ ಈ ಸುಂದರ ಸ್ಥಳಕ್ಕೆ ಹೋಗಿದ್ದೆವು... ಹುಡುಗಿಯರ ಪ್ರವಾಸಗಳು - ಎಷ್ಟೇ ಚಿಕ್ಕದಾದರೂ ಅದು ಅತ್ಯುತ್ತಮವಾಗಿರುತ್ತದೆ!! ನನ್ನ ಹುಡುಗಿಯರು ಅತ್ಯುತ್ತಮ! ಕೆಲವರು ಕಾಣೆಯಾಗಿದ್ದಾರೆ ಆದರೆ, ಅವರು ಅತ್ಯುತ್ತಮ!!' ಎಂದು ಬರೆದಿದ್ದಾರೆ.
ರಶ್ಮಿಕಾ ಈ ಪ್ರವಾಸವನ್ನು ಸ್ನೇಹಿತರೊಂದಿಗೆ ಒಂದು ಸಣ್ಣ ವಿರಾಮ ಎಂದು ಸ್ಪಷ್ಟವಾಗಿ ಹೇಳಿದರೂ, ಅಭಿಮಾನಿಗಳು ಬೇರೆಯದ್ದನ್ನೇ ಊಹಿಸಿದ್ದಾರೆ. ಇದು ಬ್ಯಾಚುಲರ್ ಪಾರ್ಟಿಯ ಟ್ರಿಪ್ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ಹಲವರು ನೇರವಾಗಿ, 'ಬ್ಯಾಚುಲರ್ ಪಾರ್ಟಿ?' ಎಂದು ಕೇಳಿದ್ದರೆ, ಇನ್ನು ಕೆಲವರು 'ಮದುವೆಗೆ ಮುನ್ನ, ಬ್ಯಾಚುಲರ್ ಪಾರ್ಟಿ' ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವು ಅಭಿಮಾನಿಗಳು 'ವಿಜಯ್ ಕೆ ಸಾಥ್ ಶಾದಿ ಕಬ್ ಹೈ? (ವಿಜಯ್ ಅವರೊಂದಿಗೆ ಮದುವೆ ಯಾವಾಗ)' ಎಂದು ಕೇಳಿದ್ದಾರೆ.
'ಸುಳ್ಳು ಹೇಳಬೇಡಿ, ಇದು ನಿಮ್ಮ ಬ್ಯಾಚುಲರ್ ಪಾರ್ಟಿನಾ' ಎಂದು ಒಬ್ಬ ಅಭಿಮಾನಿ ಕೇಳಿದರೆ, ಮತ್ತೊಬ್ಬರು, 'ಮದುವೆಗೆ ಮೊದಲು ಹುಡುಗಿಯರೊಂದಿಗೆ ಒಂದು ಒಳ್ಳೆಯ ಪ್ರವಾಸ' ಎಂದಿದ್ದಾರೆ.
ಹಲವು ವರದಿಗಳ ಪ್ರಕಾರ, ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಫೆಬ್ರುವರಿ 26, 2026 ರಂದು ವಿವಾಹವಾಗಲಿದ್ದಾರೆ. ವಿವಾಹಕ್ಕೆ ಉದಯಪುರವನ್ನು ಆಯ್ಕೆ ಮಾಡಲಾಗಿದೆ. ಅವರು ಅಕ್ಟೋಬರ್ 3, 2025 ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಇಬ್ಬರ ಆಪ್ತ ಮೂಲಗಳು ತಿಳಿಸಿವೆ.