ಹೈದರಾಬಾದ್: ಹೆಣ್ಣುಮಕ್ಕಳ ಸೌಂದರ್ಯ ದೇಹ ಮುಚ್ಚುವ ಸಂಪೂರ್ಣ ಉಡುಗೆ ಅಥವಾ ಸೀರೆಯಲ್ಲಿರುತ್ತದೆಯೋ ಹೊರತು ದೇಹದ ಅಂಗಾಂಗ ಪ್ರದರ್ಶಿಸುವುದರಲ್ಲಿ ಅಲ್ಲ ಎಂದು ಬಿಗ್ ಬಾಸ್ ಮಾಜಿ ಸ್ಪರ್ಧಿ ಹಾಗೂ ಖ್ಯಾತ ನಟರೊಬ್ಬರು ಹೇಳಿದ್ದಾರೆ.
ಹೌದು.. ತೆಲುಗಿನ ಖ್ಯಾತ ನಟ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿ ಶಿವಾಜಿ ಇಂತಹ ಶಾಂಕಿಂಗ್ ಹೇಳಿಕೆ ನೀಡಿದ್ದು, ಚಿತ್ರವೊಂದರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಟ ಶಿವಾಜಿ ದೇಹ ತೋರಿಸುವ ಬಟ್ಟೆಗಳನ್ನು ಧರಿಸದಂತೆ ನಟಿಯರಿಗೆ ಕಿವಿಮಾತು ಹೇಳಿದ್ದಾರೆ. ನಟಿಯರು ಅಂಗಾಂಗ ಪ್ರದರ್ಶನ ಮಾಡುವಂತಹ ಬಟ್ಟೆ ಧರಿಸುವ ಬಗ್ಗೆ ನಟ ಶಿವಾಜಿ ತಮ್ಮ ಕಟು ಪದಗಳಿಂದ ಟೀಕಿಸಿದ್ದಾರೆ.
ನಟ ಶಿವಾಜಿ ತಮ್ಮ ನೂತನ ಚಿತ್ರ ದಂಡೋರಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತೆಲುಗಿನ ನಟಿಯರಿಗೆ ಕೆಲ ಕಿವಿಮಾತುಗಳನ್ನು ಹೇಳಿದರು.
"ಎಲ್ಲಾ ನಾಯಕಿಯರು ದೇಹದ ಭಾಗಗಳನ್ನು ಕಾಣುವಂತೆ ಉಡುಪುಗಳನ್ನು ಧರಿಸಬೇಡಿ ಎಂದು ನಾನು ವಿನಂತಿಸುತ್ತೇನೆ. ದಯವಿಟ್ಟು ಸೀರೆ ಅಥವಾ ದೇಹವನ್ನು ಸಂಪೂರ್ಣವಾಗಿ ಮುಚ್ಚುವ ಉಡುಪುಗಳನ್ನು ಧರಿಸಿ. ಸೌಂದರ್ಯವು ಸಂಪೂರ್ಣ ಉಡುಗೆ ಅಥವಾ ಸೀರೆಯಲ್ಲಿದೆ, ಪ್ರದರ್ಶಿಸುವುದರಲ್ಲಿ ಅಲ್ಲ ಎಂದಿದ್ದಾರೆ.
"ಜನರು ಬಹಿರಂಗವಾಗಿ ಏನನ್ನೂ ಹೇಳದಿರಬಹುದು. ಏಕೆಂದರೆ ಅದು ನಿಮ್ಮ ಸ್ವಾತಂತ್ರ್ಯ ಎಂದು ಅವರು ಭಾವಿಸುತ್ತಾರೆ, ಆದರೆ ಒಳಗೆ ಅವರಿಗೆ ಅದು ಇಷ್ಟವಾಗದಿರಬಹುದು. ಮಹಿಳೆ ಪ್ರಕೃತಿಯಂತೆ. ಪ್ರಕೃತಿ ಸುಂದರವಾಗಿದ್ದಾಗ, ನಾವು ಅದನ್ನು ಗೌರವಿಸುತ್ತೇವೆ. ಮಹಿಳೆ ನನ್ನ ತಾಯಿಯಂತೆ, ಅವರನ್ನು ನಾನು ನನ್ನ ಹೃದಯಕ್ಕೆ ಹತ್ತಿರವಾಗಿರಿಸುತ್ತೇನೆ" ಎಂದು ಅವರು ಹೇಳಿದರು.
'ಹೀರೊಯಿನ್ಸ್ ಹೀಗೆ ಕೆಟ್ಟದಾಗಿ ಬಟ್ಟೆ ಹಾಕಿಕೊಂಡು ಹೋದ್ರೆ ದರಿದ್ರ ಅನುಭವಿಸಬೇಕಾಗುತ್ತದೆ. ನಟಿಯರು ಯಾರು ನನ್ನ ಮಾತನ್ನು ಕೆಟ್ಟದಾಗಿ ಭಾವಿಸಬೇಡಿ. ನೀವು ಕೇಳಿದ್ರೂ ತಿರುಗೇಟು ಕೊಡ್ತೀನಿ. ನಿಮ್ಮ ಅಂದ ಸೀರೆಯಲ್ಲಿ, ಮೈತುಂಬಾ ತೊಡವ ಬಟ್ಟೆಯಲ್ಲಿರುತ್ತೆ.
ಅಂಗಾಂಗ ಪ್ರದರ್ಶನದಲ್ಲಿ ಏನೂ ಇರಲ್ಲ. ಇಂತಹ ಬಟ್ಟೆ ಹಾಕಿಕೊಂಡಾಗ ಕೆಲವರು ನಗುತ್ತಾ ಚೆನ್ನಾಗಿದೆ ಅನ್ನಬಹುದು. ಮನಸ್ಸಿನಲ್ಲಿ ಥೂ ಇಂದೆಂಥಾ ಬಟ್ಟೆ ಹಾಕ್ಕೊಂಡಿದ್ದೀಯಾ? ಚೆನ್ನಾಗಿರೋ ಬಟ್ಟೆ ಹಾಕಿಕೊಳ್ಳಬಹುದಿಲ್ಲಾ, ಅಂತ ಹೇಳಬೇಕು ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾರೆ, ಆದ್ರೆ ಹೇಳೋಕ್ಕಾಗಲ್ಲ ಎಂದು ನಟ ಶಿವಾಜಿ ಹೇಳಿದ್ದಾರೆ.
ಅಂತೆಯೇ 'ಲೆಜೆಂಡ್ ನಟಿಯರಾದ ಸಾವಿತ್ರಿ ಮತ್ತು ಸೌಂದರ್ಯ ಮತ್ತು ಉದಯೋನ್ಮುಖ ತಾರೆ ರಶ್ಮಿಕಾ ಮಂದಣ್ಣ ಅವರ ಆಕರ್ಷಕ ಉಡುಗೆ ತೊಡುಗೆಯನ್ನು ಉದಾಹರಣೆಯಾಗಿ ಉಲ್ಲೇಖಿಸಿದ ಶಿವಾಜಿ, "ಅವರು ತಮ್ಮ ಉಡುಪಿನ ಮೂಲಕ ಪ್ರಭಾವ ಬೀರಿದರು, ಅದಕ್ಕಾಗಿಯೇ ನಾನು ಅವರನ್ನು ಹೆಸರಿಸಬಲ್ಲೆ. ಸ್ವಾತಂತ್ರ್ಯ ಅಮೂಲ್ಯ - ಅದನ್ನು ಕಳೆದುಕೊಳ್ಳಬೇಡಿ. ನಿಮ್ಮ ನಡವಳಿಕೆಯ ಆಧಾರದ ಮೇಲೆ ಜನರು ನಿಮ್ಮನ್ನು ಗೌರವಿಸುತ್ತಾರೆ. ಗ್ಲಾಮರ್ ಮಿತಿಗಳನ್ನು ಹೊಂದಿರಬೇಕು; ಅದು ಒಂದು ನಿರ್ದಿಷ್ಟ ಗೆರೆಯನ್ನು ದಾಟಬಾರದು" ಎಂದು ನಟ ಶಿವಾಜಿ ಹೇಳಿದ್ದಾರೆ.
ನಟಿ ಇಂದ್ರಜಾ ಕೂಡ ಇದೇ ರೀತಿಯ ಹೇಳಿಕೆ
ಇತ್ತೀಚೆಗೆ ಹಿರಿಯ ನಟಿ ಇಂದ್ರಜಾ ಕೂಡ ಇದೇ ವಿಚಾರದ ಬಗ್ಗೆ ಮಾತನಾಡಿದ್ದರು. ಎಲ್ಲಿ ಯಾವ ಬಟ್ಟೆ ತೊಡಬೇಕು ಎನ್ನುವ ಪರಿಜ್ಞಾನ ಇರಬೇಕು. ಒಂದು ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಬಟ್ಟೆ ಹಾಕಿಕೊಂಡು ಬಂದರೆ ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡುತ್ತಾರೆ. ಅದನ್ನು ಎದುರಿಸುವ ಧೈರ್ಯ ಇರುವವರು ಹೇಗೆ ಬೇಕಾದರೂ ಬಟ್ಟೆ ಹಾಕಿ. ನಿಮ್ಮ ಇಷ್ಟದಂತೆ ನೀವು ಬಟ್ಟೆ ಹಾಕಿದ್ರೆ, ಕಾಮೆಂಟ್ ಮಾಡುವುದು ಅವರಿಷ್ಟ, ಅದನ್ನು ತಪ್ಪು ಎನ್ನಲು ಸಾಧ್ಯವಿಲ್ಲ ಎಂದು ಇಂದ್ರಜಾ ಹೇಳಿದ್ದರು.