ಮಾರ್ಕ್ ಸಿನಿಮಾ ಬಿಡುಗಡೆ ಹೊತ್ತಿನಲ್ಲಿ ನಟ ಕಿಚ್ಚ ಸುದೀಪ್ ಅವರು ಸಂದರ್ಶನವೊಂದರಲ್ಲಿ ಹೇಳಿರುವ ಮಾತು ಸಾಕಷ್ಟು ಸುದ್ದಿಯಾಗುತ್ತಿದೆ. ಅದು ಕನ್ನಡದ ನಟರು ಬೇರೆ ಭಾಷೆಗಳಲ್ಲಿ ಮಾಡಲು ಅತಿಥಿ ಪಾತ್ರಗಳ ಬಗ್ಗೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಟ ಕಿಚ್ಚ ಸುದೀಪ್ ಮಾತನಾಡುತ್ತಾ, ನಾವು ಕನ್ನಡದ ನಟರು ಬೇರೆ ಭಾಷೆಗಳಲ್ಲಿ ಅತಿಥಿ ಪಾತ್ರಗಳನ್ನು ಮಾಡುತ್ತಿದ್ದೇವೆ ಆದರೆ ಬೇರೆ ಭಾಷೆಗಳ ಕಲಾವಿದರು ನಮ್ಮ ಕನ್ನಡ ಚಿತ್ರಗಳಲ್ಲಿ ನಟಿಸುತ್ತಿಲ್ಲ. ನಾನು ಕೆಲವು ಕಲಾವಿದರನ್ನು ವೈಯಕ್ತಿಕವಾಗಿ ಈ ಹಿಂದೆ ಅತಿಥಿ ಪಾತ್ರಗಳಲ್ಲಿ ನಟಿಸಲು ಮನವಿ ಮಾಡಿಕೊಂಡಿದ್ದೆ. ಆದರೆ ಅದು ಆಗಲಿಲ್ಲ. ಅತಿಥಿ ಪಾತ್ರಗಳನ್ನು ಮಾಡುವ ಪ್ರವೃತ್ತಿ ಎರಡೂ ಕಡೆಯಿಂದ ಆಗಬೇಕು. ಈಗ ಹಾಗೆ ಆಗುತ್ತಿದೆ ಎಂದು ನನಗೆ ಅನಿಸುತ್ತಿಲ್ಲ ಎಂದಿದ್ದಾರೆ.
ಇತ್ತೀಚೆಗೆ ನಟ ಶಿವರಾಜ್‌ಕುಮಾರ್ ರಜನಿಕಾಂತ್ ಅವರ ಜೈಲರ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ನಟ ಉಪೇಂದ್ರ, ದುನಿಯಾ ವಿಜಯ್ ಹೀಗೆ ಅನೇಕ ನಟರು ನೆರೆ ರಾಜ್ಯಗಳಿಗೆ ಹೋಗಿ ಅಲ್ಲಿನ ಚಿತ್ರಗಳಲ್ಲಿ ನಟಿಸಿ ಬರುತ್ತಿದ್ದಾರೆ.
ಬೇರೆ ಭಾಷೆಯ ಚಿತ್ರಗಳನ್ನು ಕೇವಲ ಹಣಕ್ಕಾಗಿ ಮಾಡಿದ್ದಲ್ಲ
ನಾನು ಬೇರೆ ಭಾಷೆಯ ಸಿನಿಮಾಗಳನ್ನು ಮಾಡಿದ್ದು ಹಣಕ್ಕಾಗಿ ಅಲ್ಲ, ಸ್ನೇಹಕ್ಕಾಗಿ. ಸಲ್ಮಾನ್ ಖಾನ್ ಅವರು ವೈಯಕ್ತಿಕವಾಗಿ ನನ್ನಲ್ಲಿ ಕೇಳಿಕೊಂಡಾಗ ನಾನು ಅದಕ್ಕೆ ಯಾವುದೇ ಸಂಭಾವನೆ ಪಡೆಯದೆ ದಬಾಂಗ್ 3 ಚಿತ್ರದಲ್ಲಿ ನಟಿಸಿದೆ. ದಳಪತಿ ವಿಜಯ್ ಅವರ ಕಾರಣ ನಾನು ಪುಲಿ ಸಿನಿಮಾದಲ್ಲಿ ನಟಿಸಿದೆ. ಅವರು ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡುವುದಿಲ್ಲ, ನನಗೆ ಅದು ಇಷ್ಟ. ನನ್ನನ್ನು ನಾನಿ ಚಿತ್ರದ ಕಥೆ ಬಹಳ ಪ್ರಭಾವಗೊಳಿಸಿತು ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ಕೆಲವು ನಟರಿಗೆ ವಯಸ್ಸಿನ ಹಂಗು ಇಲ್ಲ
ಭಾರತೀಯ ಚಿತ್ರರಂಗದಲ್ಲಿ ರಜನಿಕಾಂತ್, ಕಮಲ್ ಹಾಸನ್, ಅಮಿತಾಬ್ ಬಚ್ಚನ್ ಮೊದಲಾದ ನಟರಿಗೆ ವಯಸ್ಸಿನ ಹಂಗೇ ಇಲ್ಲ, ಈ ಇಳಿ ವಯಸ್ಸಿನಲ್ಲಿಯೂ ನಟಿಸುತ್ತಾರೆ, ಅವರ ಚಿತ್ರಗಳು ಹಿಟ್ ಆಗುತ್ತವೆ. ಚಿತ್ರ ಜಗತ್ತಿನಲ್ಲಿ ಕೆಲವೇ ಕೆಲವು ಜನರು ಮಾತ್ರ ತಮ್ಮ ಜೀವನದುದ್ದಕ್ಕೂ ನಟಿಸಬಲ್ಲರು ಮತ್ತು ಅಭಿಮಾನಿಗಳು ಅವರನ್ನು ನೋಡುತ್ತಲೇ ಇರುತ್ತಾರೆ ಮತ್ತು ಸ್ವೀಕರಿಸುತ್ತಲೇ ಇರುತ್ತಾರೆ. ಇನ್ನು ಹಲವರು ಮರೆಯಾಗುತ್ತಾರೆ ಎಂದರು.
ನನ್ನ ನೆಚ್ಚಿನ ಕ್ರೀಡಾಪಟು ವಿರಾಟ್ ಕೊಹ್ಲಿ. ಅವರ ಪಾತ್ರ ಮತ್ತು ಆಕ್ರಮಣಶೀಲತೆ ಅವರನ್ನು ವ್ಯಾಖ್ಯಾನಿಸುತ್ತದೆ. ಆ ಗುಣ ಇರಬೇಕು. ಆತ್ಮವಿಶ್ವಾಸದ ವ್ಯಕ್ತಿ ಮಾತ್ರ ಹಾಗೆ ವರ್ತಿಸಲು ಸಾಧ್ಯ ಎಂದರು.
ಇನ್ನು ತಾವು ಒಬ್ಬ ಉದ್ಯಮಿಯ ಮಗನಾಗಿದ್ದರೂ ತಂದೆಯ ಪ್ರಭಾವವಿಲ್ಲದೇ ಜೀವನದಲ್ಲಿ ಇಲ್ಲಿಯವರೆಗೆ ಬಂದಿದ್ದೇನೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. 10 ನೇ ತರಗತಿಯಿಂದ, ನಾನು ಅಪ್ಪನಲ್ಲಿ ಹಣ ಕೇಳುವುದನ್ನು ನಿಲ್ಲಿಸಿದೆ. ವಾರಾಂತ್ಯದಲ್ಲಿ ಸೇಲ್ಸ್ ಮ್ಯಾನ್ ಆಗಿ, ಗೋದಾಮಿನಲ್ಲಿ ಮತ್ತು ಕ್ರಿಕೆಟ್ ಆಡುವ ಮೂಲಕ ಹಣ ಸಂಪಾದಿಸಿ ನನ್ನ ಖರ್ಚನ್ನು ನಾನೇ ಭರಿಸುತ್ತಿದ್ದೆ ಎಂದು ಕೂಡ ಕಿಚ್ಚ ಸುದೀಪ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.