ಸ್ಯಾಂಡಲ್ ವುಡ್ ನಲ್ಲಿ ಕೆಲ ದಿನಗಳಿಂದ 'ಸ್ಟಾರ್ ವಾರ್' ಜೋರಾಗಿ ನಡೆಯುತ್ತಿದೆ. ಹುಬ್ಬಳ್ಳಿಯ ಮಾರ್ಕ್ ಈವೆಂಟ್ ನಲ್ಲಿ ಸುದೀಪ್ ನೀಡಿದ ಹೇಳಿಕೆಯಿಂದ ಶುರುವಾದ ಫ್ಯಾನ್ಸ್ ವಾರ್ , ದರ್ಶನ್ ಪತ್ನಿ ವಿಜಯಲಕ್ಷ್ಮಿ ಹೇಳಿಕೆಯೊಂದಿಗೆ ತಾರಕಕ್ಕೇರಿತ್ತು.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಅಭಿಮಾನಿಗಳ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಆರೋಪ, ಪ್ರತ್ಯಾರೋಪ, ಅಶ್ಲೀಲ, ಅಸಹ್ಯ ಕಮೆಂಟ್ ಗಳು ಅತಿರೇಕ ಅನಿಸುವಷ್ಟರ ಮಟ್ಟಿಗೆ ಹೆಚ್ಚಾಗಿತ್ತು. ಅಶ್ಲೀಲವಾಗಿ ಕಾಮೆಂಟ್ ಮಾಡಿದ್ದಕ್ಕೆ ವಿಜಯಲಕ್ಷ್ಮಿ ಅವರು ಪೊಲೀಸರಿಗೆ ದೂರು ಸಹ ನೀಡಿದ್ದರು. ಕೆಟ್ಟ ಕಾಮೆಂಟ್‌ಗಳ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದ ದರ್ಶನ್ ಪತ್ನಿ,"ಕ್ಲಾಸ್ ಫ್ಯಾನ್ಸ್‌ಗೆ ಇದು ಎಚ್ಚರಿಕೆಯ ಸಂದೇಶ" ಎಂದು ಪೋಸ್ಟ್ ಹಂಚಿಕೊಂಡಿದ್ದರು.
ಈ ಬಗ್ಗೆ ಸುದೀಪ್ ಪ್ರತಿಕ್ರಿಯಿಸಿದ್ದು, 'ನೀವು ಕಪಾಳಕ್ಕೆ ಹೊಡೆದರೆ ನಾವು ಹೊಡೆಸಿಕೊಳ್ಳುವವರಲ್ಲ. ಪ್ರೀತಿಯಿಂದ ತಾಯಿ ಹೊಡೆಯುವ ಏಟುಗಳು ಬೇರೆ, ಪಕ್ಕದ ಮನೆಯವರು ಹೊಡೆಯುವ ಏಟುಗಳು ಬೇರೆಯೇ ಆಗುತ್ತೆ' ಎಂದು ತಿರುಗೇಟು ನೀಡಿದ್ದಾರೆ.
ಜಗಳ ಮಾಡೋಕೆ ಇಂಡಸ್ಟ್ರಿಗೆ ಬಂದಿಲ್ಲ
ಇತ್ತೀಚಿಗೆ ಬಿಡುಗಡೆಯಾದ ಮಾರ್ಕ್ ಸಿನಿಮಾ ಚಿತ್ರಮಂದಿರಗಳಲ್ಲಿ ಅದ್ಬುತ ಪ್ರದರ್ಶನ ಕಾಣುತ್ತಿದ್ದು ಸಿನಿಮಾ ಯಶಸ್ಸಿನ ಬಗ್ಗೆ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿದರು.ಈ ವೇಳೆ ಮಾತನಾಡಿದ ಸುದೀಪ್, ಜಗಳ ಮಾಡೋಕೆ ಇಂಡಸ್ಟ್ರಿಗೆ ಬಂದಿಲ್ಲ. ಎಲ್ಲರನ್ನೂ ನಗಿಸೋಕೆ, ಎಂಟರ್ಟೈನ್ ಮೆಂಟ್ ಮಾಡಲು ಬಂದಿದ್ದೇನೆ. ಈ ಯುದ್ಧ ಮಾಡಿ ನನಗೆ ಗೊತ್ತಿಲ್ಲ ಎಂದರು.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟ್‌ಗಳ ಬಗ್ಗೆ ಮಾತನಾಡಿದ ಅವರು, ಇವುಗಳನ್ನು ಯಾರಾದರೂ ಫೇಕ್ ಐಡಿ ಮೂಲಕ ಮಾಡಿರಬಹುದು. ಇಂತಹ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯ ನನಗೆ ಕಾಣುತ್ತಿಲ್ಲ ಎಂದು ಹೇಳಿದರು.
ವಿಜಯಲಕ್ಷ್ಮಿ ಅವರು ಯಾರಿಗೆ ದೂರು ನೀಡಿದ್ದಾರೆ, ಯಾರ ಬಗ್ಗೆ ಆರೋಪ ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ.ಅವರು ಯಾರಿಗೆ ಹೇಳಿದ್ದಾರೆ, ಯಾರ ಹೆಸರನ್ನು ಉಲ್ಲೇಖಿಸಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ಹೇಳಿದರೆ ಚಂದ. ಅದನ್ನು ಕೇಳಿ, ಅದರ ಬಗ್ಗೆ ಮಾತನಾಡಲು ನಾನು ಸಿದ್ಧನಿದ್ದೇನೆ ಎಂದು ಹೇಳಿದರು.
ಇಷ್ಟು ವರ್ಷದ ಸುದೀಪ್ ಬೇರೆ. ಈಗಿನ ಸುದೀಪ್ ಬೇರೆ. ಪೈರಸಿ ಮೊದಲೇ ಇತ್ತು. ಈಗ ಸವಾಲಾಗಿ ಮಾಡ್ತಿದ್ದಾರೆ. ಕಳೆದ ಎರಡು ದಿನದಲ್ಲಿ 4 ಸಾವಿರ ಲಿಂಕ್ ಡಿಲೀಟ್ ಮಾಡಿಸಿದ್ದೇವೆ. ಕಳೆದ ಬಾರಿ ಕೆಲವರನ್ನು ಹಿಡಿದು ಬಿಟ್ಟಿದ್ವಿ, ಈ ಬಾರಿ ಬಿಡೋದಿಲ್ಲ, ಪೈರಸಿ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕಿತ್ತೋಗಿರೋ ಕಾಮೆಂಟ್ಸ್ ಬಗ್ಗೆ ತಲೆಕಿಡಿಸಿಕೊಳ್ಳಲ್ಲ: ಮಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ಸ್ ಕುರಿತು ಮಾತನಾಡಿದ ಸುದೀಪ್, ಕಿತ್ತೋಗಿರೋ ಕಾಮೆಂಟ್ಸ್ ಬಗ್ಗೆ ನಾನು ತಲೆಕಿಡಿಸಿಕೊಳ್ಳುವುದಿಲ್ಲ. ಆ ಬಗ್ಗೆ ಮಾತನಾಡಿ ನನ್ನ ಟೈಮ್ ಯಾಕೆ ವೆಸ್ಟ್ ಮಾಡ್ಲಿ. ನನ್ನ ಮಗಳು ನನಗಿಂತ ಸ್ಟ್ರಾಂಗ್ ಇದ್ದಾಳೆ. ಅವಳು ಫೇಸ್ ಮಾಡ್ತಾಳೆ. ನಾನು ಫೇಸ್ ಮಾಡಿರೋದಕ್ಕಿಂತ ಅವಳು ಹತ್ತರಷ್ಟು ಫೇಸ್ ಮಾಡ್ತಾಳೆ. ಕೆಟ್ಟದಾಗಿ ಕಮೆಂಟ್ ಮಾಡೋರೊ ವೆಸ್ಟ್ ನನ್ಮಕ್ಕಳು ಎಂದರು.