ನವದೆಹಲಿ: ಮನೆಯ ತುಂಬ ಹೆಣ್ಣು ಮಕ್ಕಳೇ ತುಂಬಿದ್ದು, ನಮ್ಮ ವಂಶವನ್ನು ಉದ್ಧಾರ ಮಾಡಲು ಮನೆಗೊಬ್ಬ ಮೊಮ್ಮಗ ಬೇಕಿತ್ತು ಎಂದಿರುವ ಮೆಗಾಸ್ಟಾರ್ ಚಿರಂಜೀವಿ ಹೇಳಿಕೆ ಇದೀಗ ವಿವಾದ ಸೃಷ್ಟಿಸಿದೆ.
ಇತ್ತೀಚೆಗೆ ನಡೆದ ಬ್ರಹ್ಮ ಆನಂದಂ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ನಟ ಚಿರಂಜೀವಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ್ದ ಅವರು, ನನ್ನ ಮನೆಯಲ್ಲಿ ಹೆಣ್ಣು ಮಕ್ಕಳೇ ತುಂಬಿದ್ದಾರೆ. ಹೀಗಾಗಿ ನನಗೆ ಮನೆಯಲ್ಲಿರುವಂತೆ ಭಾಸವಾಗುವುದಿಲ್ಲ. ಬದಲಿಗೆ ಮಹಿಳಾ ಹಾಸ್ಟೆಲ್‌ನಲ್ಲಿ ವಾಸಿಸುತ್ತಿರುವಂತೆ ಮತ್ತು ನಾನು ವಾರ್ಡನ್ ಆಗಿರುವಂತೆ ಭಾಸವಾಗುತ್ತದೆ. ನಮ್ಮ ಕುಟುಂಬದ ವಂಶವನ್ನು ಮುಂದುವರಿಸಲು ಮೊಮ್ಮಗನು ಬೇಕೆಂದು ನಾನು ಬಯಸುತ್ತೇನೆ ಎಂದಿದ್ದಾರೆ.
'ಮನೆಯಲ್ಲಿ ಇರುವಾಗ ಮೊಮ್ಮಕ್ಕಳು ಸುತ್ತುವರೆದಿರುವಂತೆ ಭಾಸವಾಗುವುದಿಲ್ಲ. ನನ್ನ ಸುತ್ತಲೂ ಹೆಂಗಸರೇ ಸುತ್ತುವರೆದಿರುವುದರಿಂದ ನಾನು ಲೇಡೀಸ್ ಹಾಸ್ಟೆಲ್ ವಾರ್ಡನ್ ಎಂದು ಅನಿಸುತ್ತದೆ. ನಮ್ಮ ವಂಶವು ಮುಂದುವರಿಯಲು ಈ ಬಾರಿಯಾದರೂ (ರಾಮ್) ಚರಣ್‌ಗೆ ಗಂಡು ಮಗುವಾಗಲಿ ಎಂದು ನಾನು ಹಾರೈಸುತ್ತಲೇ ಇದ್ದೇನೆ, ಆದರೆ ಅವನಿಗೂ ಹೆಣ್ಣು ಮಗುವಾಯಿತು' ಎಂದಿದ್ದಾರೆ.
ನನ್ನ ಮಗ ರಾಮ್ ಚರಣ್‌ಗೆ ಮತ್ತೊಂದು ಹೆಣ್ಣು ಮಗು ಹುಟ್ಟಬಹುದು ಎಂಬ ಭಯವಿದೆ. ಅವನಿಗೆ ಮತ್ತೆ ಹೆಣ್ಣು ಮಗುವಾದರೆ ಎಂದು ನಾನು ಹೆದರುತ್ತೇನೆ ಎಂದು ಚಿರಂಜೀವಿ ತಿಳಿಸಿದ್ದಾರೆ.
ರಾಮ್ ಚರಣ್ ಮತ್ತು ಪತ್ನಿ ಉಪಾಸನಾ ದಂಪತಿಗೆ 2023ರ ಜೂನ್‌ನಲ್ಲಿ ಕ್ಲಿನ್ ಕಾರಾ ಎಂಬ ಹೆಣ್ಣು ಮಗು ಜನಿಸಿತು.
ರಾಮ್ ಚರಣ್ ಹೊರತಾಗಿ, ಚಿರಂಜೀವಿ ಅವರಿಗೆ ಶ್ರೀಜಾ ಕೊನಿಡೇಲಾ ಮತ್ತು ಸುಶ್ಮಿತಾ ಕೊನಿಡೇಲಾ ಎಂಬ ಇಬ್ಬರು ಪುತ್ರಿಯರಿದ್ದಾರೆ. ಶ್ರೀಜಾಗೆ ನವೀಕ್ಷಾ ಮತ್ತು ನಿವೃತ್ತಿ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಸುಶ್ಮಿತಾಗೆ ಸಮರ ಮತ್ತು ಸಂಹಿತಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ರಾಮ್ ಚರಣ್ ಅವರಿಗೆ ಗಂಡು ಮಗು ಆಗಬೇಕು ಎನ್ನುವ ಚಿರಂಜೀವಿ ಅವರ ಹೇಳಿಕೆಗೆ ಇದೀಗ ಸಾಮಾಜಿಕ ಮಾಧ್ಯಮ ಬಳಕೆದಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
'2025ನೇ ವರ್ಷವಾದರೂ ದುರದೃಷ್ಟವಶಾತ್ ಇನ್ನೂ ಪ್ರಚಲಿತದಲ್ಲಿರುವ ಸಮಸ್ಯೆಯನ್ನು ಈ ಪೋಸ್ಟ್ ಎತ್ತಿ ತೋರಿಸುತ್ತದೆ. ಚಿರಂಜೀವಿಯವರಂತ ನಟ ಕೂಡ ಹಳೆಯ ಲಿಂಗ ಪಕ್ಷಪಾತವನ್ನು ಮುಂದುವರಿಸುವುದನ್ನು ನೋಡುವುದು ನಿರಾಶಾದಾಯಕವಾಗಿದೆ. ಪುರುಷ ಉತ್ತರಾಧಿಕಾರಿಯೊಂದಿಗಿನ ಗೀಳು ನಿರಾಶಾದಾಯಕವಾಗಿದೆ. ಇದು ಸಮಾಜದ ಬದಲಾವಣೆಯ ಅಗತ್ಯತೆಯ ಪ್ರತಿಬಿಂಬವಾಗಿದೆ' ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ.
ಮತ್ತೋರ್ವ ಬಳಕೆದಾರ, 'ಅವರಂತಹ ಪ್ರಸಿದ್ಧ ವ್ಯಕ್ತಿಗಳು ಸಾರ್ವಜನಿಕವಾಗಿ ಏನನ್ನು ಹೇಳಬೇಕು ಎಂಬುದರ ಬಗ್ಗೆ ಅತ್ಯಂತ ಜಾಗರೂಕರಾಗಿರಬೇಕು' ಎಂದು ಬರೆದಿದ್ದಾರೆ.
ಚಿರಂಜೀವಿ ಅವರು 1980 ರಲ್ಲಿ ಸುರೇಖಾ ಅವರನ್ನು ಮದುವೆಯಾಗಿದ್ದಾರೆ.