ಕೌಟುಂಬಿಕ ಕಥೆಯನ್ನು ಒಳಗೊಂಡಿರುವ ಆಸ್ಕರ್ ಕೃಷ್ಣ ನಿರ್ದೇಶನದ 'ದೊಡ್ಮನೆ ಸೊಸೆ' ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗಷ್ಟೇ ನಡೆಯಿತು. ಪದ್ಮಶ್ರೀ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ಗಿರೀಶ್ ಕಾಸರವಳ್ಳಿ ಅವರು ಚಿತ್ರಕ್ಕೆ ಕ್ಲ್ಯಾಪ್ ಮಾಡಿದರು.
ಮಾನ್ಯ ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ತೇಜಸ್ ವಿನಯ್ ಎಸ್ ನಿರ್ಮಿಸಿರುವ ಈ ಚಿತ್ರಕ್ಕೆ ಆಸ್ಕರ್ ಕೃಷ್ಣ ಅವರೇ ಕಥೆ ಬರೆದಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ರಾಗಶ್ರೀ ನಟಿಸುತ್ತಿದ್ದಾರೆ.
ಗಿರೀಶ್ ಕಾಸರವಳ್ಳಿ ಮಾತನಾಡಿ, ಇಂದಿನ ಸಿನಿಮಾಗಳಲ್ಲಿ ಕೌಟುಂಬಿಕ ಕಥೆಗಳು ಕಡಿಮೆಯಾಗಿವೆ. ಹೆಚ್ಚಾಗಿ ಆಕ್ರಮಣಶೀಲತೆ ಮತ್ತು ಹಿಂಸೆಯಿಂದ ಕೂಡಿರುತ್ತವೆ. 'ಸದ್ಯದ ಮಾರುಕಟ್ಟೆ ಉದ್ದೇಶದಿಂದಾಗಿ ಕ್ರೌರ್ಯ, ಹಿಂಸೆ ವಿಜೃಂಭಿಸುತ್ತಿರುವ ಕಾಲದಲ್ಲಿ ಸುಂದರವಾದ ಕುಟುಂಬ ಆಧರಿತ ಕಥೆ ತೆರೆಗೆ ಬರುವುದು ಅಗತ್ಯವಾಗಿದೆ. ದೊಡ್ಮನೆ ಸೊಸೆ ಇಂತಹ ಕಥೆಯೊಂದಿಗೆ ಬರುತ್ತಿದೆ. ಇದು ಕುಟುಂಬಗಳಲ್ಲಿನ ಸಂಕೀರ್ಣ ಸಂಬಂಧಗಳನ್ನು ಮತ್ತು ಮಾನವ ಬಂಧಗಳನ್ನು ಹೇಗೆ ಮರುವ್ಯಾಖ್ಯಾನಿಸಬಹುದು ಎಂಬುದನ್ನು ಪರಿಶೋಧಿಸುತ್ತದೆ' ಎಂದು ಹೇಳಿದರು.
70 ಮತ್ತು 80ರ ದಶಕದ ಶ್ರೇಷ್ಠ ಚಲನಚಿತ್ರಗಳನ್ನು ಪ್ರತಿಬಿಂಬಿಸುತ್ತಾ, ಪುಟ್ಟಣ್ಣ ಕಣಗಾಲ್, ದೊರೆ ಭಗವಾನ್, ರಾಜ್‌ಕುಮಾರ್ ಅವರ ಸಿನಿಮಾಗಳು ಯಾವ ಮೌಲ್ಯಗಳನ್ನು ಹೇಳುತ್ತಿದ್ದವೋ ಅದೇ ಮೌಲ್ಯಗಳನ್ನು ಈ ಚಿತ್ರವೂ ಒಳಗೊಂಡಿದೆ ಎಂದು ಹೇಳಿದರು.
'ಡಾ. ಗಿರೀಶ್ ಕಾಸರವಳ್ಳಿ ಅವರ ಚಿತ್ರಗಳನ್ನು ನೋಡುತ್ತಾ ಬೆಳೆದಿದ್ದೇನೆ. ಇದು ನನ್ನ ನಿರ್ದೇಶನದ 7ನೇ ಚಿತ್ರವಾಗಿದ್ದು, ದೊಡ್ಮನೆ ಸೊಸೆ ಸಾಂಪ್ರದಾಯಿಕ ಮನೆತನದ ಸಾರವನ್ನು ಪ್ರತಿಬಿಂಬಿಸುತ್ತದೆ' ಎಂದು ನಿರ್ದೇಶಕ ಆಸ್ಕರ್ ಕೃಷ್ಣ ಹರ್ಷ ವ್ಯಕ್ತಪಡಿಸಿದರು.
ದೊಡ್ಮನೆ ಸೊಸೆ ಚಿತ್ರದಲ್ಲಿ ಸುಂದರ್ ರಾಜ್, ಸಚಿನ್ ಪುರೋಹಿತ್, ವಂಶಿ, ಶಂಕರಭಟ್, ಲಯಕೋಕಿಲ, ಮುರಳಿ ಕೊಟ್ಟೂರು ಮತ್ತು ಮಮತಾ ಸೇರಿದಂತೆ ಇತರರು ನಟಿಸಿದ್ದಾರೆ. ಚಿತ್ರಕ್ಕೆ ನಿತೀಶ್ ವಿ ಸಂಗೀತ ಸಂಯೋಜನೆ, ಮೈಸೂರು ಸೋಮು ಅವರ ಛಾಯಾಗ್ರಹಣ, ಕೌಶಿಕ್ ಕಿರಣ್ ಅವರ ಸಂಕಲನವಿದೆ. ವಿನಯ್ ಕುಮಾರ್ ಪೆನ್ನಾ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಸಹ ನಿರ್ವಹಿಸುತ್ತಿದ್ದಾರೆ.
ಫೆಬ್ರುವರಿ ಮೂರನೇ ವಾರದಲ್ಲಿ ಚಿತ್ರೀಕರಣ ಆರಂಭಿಸಲು ಚಿತ್ರತಂಡ ಸಜ್ಜಾಗಿದ್ದು, ಬೆಂಗಳೂರು ಮತ್ತು ಸುತ್ತಮುತ್ತಲಿನ ಸುಂದರ ಸ್ಥಳಗಳಲ್ಲಿ ಚಿತ್ರೀಕರಣ ನಡೆಯಲಿದೆ. ಮೇ ತಿಂಗಳಲ್ಲಿ ಚಿತ್ರವನ್ನು ಪ್ರೇಕ್ಷಕರೆದುರು ತರುವ ಗುರಿಯನ್ನು ಚಿತ್ರತಂಡ ಹೊಂದಿದೆ.