ಚೆನ್ನೈ: ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ 2 ಚಿತ್ರದ ಮೂಲಕ ಕನ್ನಡಿಗರ ಮನೆ ಮಾತಾಗಿದ್ದ, ಇತ್ತೀಚೆಗಷ್ಟೇ ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಚಿತ್ರದಲ್ಲಿ ನಟಿಸಿದ್ದ ವೈಭವಿ ಶಾಂಡಿಲ್ಯ ಇದೀಗ ಸದ್ದಿಲ್ಲದೆ ಹಸೆಮಣೆ ಏರಿದ್ದಾರೆ. ಕೊಲ್ಲಾಪುರದಲ್ಲಿ ನಡೆದ ಸಮಾರಂಭದಲ್ಲಿ ತಮ್ಮ ಗೆಳೆಯ ಹರ್ಷವರ್ಧನ್ ಜೆ ಪಾಟೀಲ್ ಅವರೊಂದಿಗೆ ಸಪ್ತಪತಿ ತುಳಿದಿದ್ದಾರೆ.
ಈ ಕುರಿತು ಶನಿವಾರ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ವೈಭವಿ, 'ನಮ್ಮ ಕುಟುಂಬ ಮತ್ತು ಸ್ನೇಹಿತರ ಆಶೀರ್ವಾದದೊಂದಿಗೆ, ಹರ್ಷವರ್ಧನ್ ಮತ್ತು ನಾನು ಪ್ರೀತಿ ಮತ್ತು ಒಗ್ಗಟ್ಟಿನ ಈ ಸುಂದರ ಪ್ರಯಾಣವನ್ನು ಪ್ರಾರಂಭಿಸಿದ್ದೇವೆ. ಎಲ್ಲರ ಪ್ರೀತಿ ಮತ್ತು ಬೆಂಬಲಕ್ಕೆ ಕೃತಜ್ಞರಾಗಿರುತ್ತೇನೆ. ಜೀವಮಾನದ ಸಂತೋಷ ಇಲ್ಲಿದೆ! ಎಂದು ಬರೆದುಕೊಂಡಿದ್ದಾರೆ.
ಸುದ್ದಿಸಂಸ್ಥೆ ಐಎಎನ್‌ಎಸ್ ಜೊತೆ ಮಾತನಾಡಿದ ವೈಭವಿ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ. 'ಹೌದು, ನಾವು ಫೆಬ್ರುವರಿ 21 ರ ಶುಕ್ರವಾರದಂದು ಕೊಲ್ಲಾಪುರದಲ್ಲಿ ಮದುವೆಯಾದೆವು. ಕೊಲ್ಹಾಪುರದಲ್ಲಿ ನಮಗೆ ಆತ್ಮೀಯ ಸ್ನೇಹಿತರು ಮತ್ತು ಕುಟುಂಬವಿದೆ. ಹರ್ಷವರ್ಧನ್ ಬಾಲಿವುಡ್‌ನಲ್ಲಿ ಛಾಯಾಗ್ರಾಹಕರಾಗಿದ್ದಾರೆ. ತಮ್ಮದು ಪ್ರೇಮವಿವಾಹವಾಗಿದ್ದು, ಇಬ್ಬರೂ ಚಿತ್ರರಂಗದವರಾಗಿದ್ದರಿಂದ ಪ್ರೀತಿಯಲ್ಲಿ ಮುಳುಗಿದ್ದೇವೆ. ತಮ್ಮ ಮದುವೆಗೆ ಆಪ್ತರು ಮತ್ತು ಕುಟುಂಬ ಸದಸ್ಯರು ಮಾತ್ರ ಹಾಜರಾಗಿದ್ದರು' ಎಂದು ಹೇಳಿದರು.
ಹರ್ಷವರ್ಧನ್ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಮದುವೆಯ ವಿಡಿಯೋ ತುಣುಕುಗಳನ್ನು ಪೋಸ್ಟ್ ಮಾಡಿದ್ದಾರೆ.
ವೈಭವಿ ಶಾಂಡಿಲ್ಯ ಅವರು ದಕ್ಷಿಣ ಭಾರತದ ತಮಿಳು, ತೆಲುಗು ಮತ್ತು ಕನ್ನಡ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. 'ಜಾನಿವಾ' ಚಿತ್ರದ ಮೂಲಕ ಮರಾಠಿ ಚಿತ್ರರಂಗಕ್ಕೂ ಪದಾರ್ಪಣೆ ಮಾಡಿದರು. ವೈಭವಿ ಕನ್ನಡ ಚಿತ್ರರಂಗದಲ್ಲೂ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರು ‘ರಾಜ್ ವಿಷ್ಣು’ ಚಿತ್ರದ ಮೂಲಕ ಕನ್ನಡಕ್ಕೆ ಪದಾರ್ಪಣೆ ಮಾಡಿದರು.