ಈವರೆಗೆ 36ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ನಟ ಪ್ರಜ್ವಲ್ ದೇವರಾಜ್, ಇದೀಗ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದು, ಲೋಹಿತ್ ಹೆಚ್ ನಿರ್ದೇಶನದ ಟೈಮ್-ಲೂಪ್ ಹಾರರ್ ಚಿತ್ರ 'ರಾಕ್ಷಸ'ದೊಂದಿಗೆ ಪ್ರೇಕ್ಷಕರ ಎದುರಿಗೆ ಬರಲಿದ್ದಾರೆ. ಈ ಹಿಂದೆ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿತ್ತು. ಇದೀಗ ಚಿತ್ರವು ಶಿವರಾತ್ರಿ ಹಬ್ಬದಂದು ಫೆಬ್ರುವರಿ 26ಕ್ಕೆ ಚಿತ್ರಮಂದಿರಗಳಲ್ಲಿ ತೆರೆಕಾಣಲು ಸಿದ್ಧವಾಗಿದೆ. ಮಮ್ಮಿ ಸೇವ್ ಮಿ ಮತ್ತು ದೇವಕಿ ಚಿತ್ರ ನಿರ್ದೇಶಿಸಿದ್ದ ಲೋಹಿತ್ ಅವರ ರಾಕ್ಷಸ ವಿಶಿಷ್ಟ ಪರಿಕಲ್ಪನೆಯೊಂದಿಗೆ ಮೂಡಿಬಂದಿದೆ ಎನ್ನುತ್ತದೆ ಚಿತ್ರತಂಡ.
ಚಿತ್ರದಲ್ಲಿ, ಪ್ರಜ್ವಲ್ ಅವರು ಸಮಸ್ಯೆಯ ಸುಳಿಯಲ್ಲಿ ಸಿಕ್ಕಿಬಿದ್ದ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಪರಿಚಿತ ಮತ್ತು ಭಯಾನಕ ಶಕ್ತಿಯಿಂದ ತನ್ನ ಮಗುವನ್ನು ರಕ್ಷಿಸಲು ಹತಾಶವಾಗಿ ಹೋರಾಡುತ್ತಾನೆ. ಸದ್ಯ ಟೀಸರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ತೀವ್ರ ನಿರೀಕ್ಷೆಯನ್ನು ಹುಟ್ಟುಹಾಕಿದೆ.
ಶಾನ್ವಿ ಎಂಟರ್‌ಟೈನ್‌ಮೆಂಟ್ ಅಡಿಯಲ್ಲಿ ದೀಪು ಬಿಎಸ್, ನವೀನ್ ಗೌಡ ಮತ್ತು ಮಾನಸ್ ಈ ಸಿನಿಮಾವನ್ನು ನಿರ್ಮಿಸಿದ್ದು, ನೋಬಿನ್ ಪಾಲ್ ಅವರ ಸಂಗೀತ ಸಂಯೋಜನೆ, ಜೇಬಿನ್ ಪಿ ಜೇಕಬ್ ಅವರ ಛಾಯಾಗ್ರಹಣ, ವಿನೋದ್ ಅವರ ಸಾಹಸ ನಿರ್ದೇಶನವಿದೆ.
ಚಿತ್ರದಲ್ಲಿ ಶ್ರೀಧರ್, ಗೌತಮ್, ಸೋಮಶೇಖರ್, ವಿಹಾನ್ ಕೃಷ್ಣ, ಶೋಭರಾಜ್, ವತ್ಸಲಾ ಮೋಹನ್, ಸಿದ್ಲಿಂಗು ಶ್ರೀಧರ್ ಮತ್ತು ಅರುಣ್ ರಾಥೋಡ್ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ರಾಕ್ಷಸ ಸಿನಿಮಾದ ಶೇ 80 ರಷ್ಟು ಚಿತ್ರೀಕರಣ ರಾಮೋಜಿ ಫಿಲಂ ಸಿಟಿಯಲ್ಲಿ ನಡೆದಿದ್ದು, ಚಿತ್ರದ ಇನ್ನುಳಿದ ಭಾಗವನ್ನು ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಲಾಗಿದೆ.