ಬಹುನಿರೀಕ್ಷಿತ ಹಾರರ್ ಚಿತ್ರ ಟೆಡ್ಡಿ ಬೇರ್ ಇದೇ ಸಂಕ್ರಾಂತಿಯಂದು ಬಿಡುಗಡೆಗೆ ಸಜ್ಜಾಗುತ್ತಿದೆ. ಚಿತ್ರವು ಇತ್ತೀಚೆಗೆ ಸೆನ್ಸಾರ್ ಸೇರಿದಂತೆ ಹಲವು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದು, U/A ಪ್ರಮಾಣಪತ್ರ ಪಡೆದುಕೊಂಡಿದೆ. ಹೊಸ ವರ್ಷದಲ್ಲಿ ಬಿಡುಗಡೆಯಾಗುತ್ತಿರುವ ಹಲವು ಪ್ರಮುಖ ಸಿನಿಮಾಗಳೊಂದಿಗೆ ಜನವರಿ 10 ರಂದು ತೆರೆಗೆ ಬರಲಿದೆ.
ಅದ್ಯಲಕ್ಷಿ ಪ್ರೊಡಕ್ಷನ್ಸ್ ಅಡಿಯಲ್ಲಿ ಜ್ಯೋತಿ ತಾರಕೇಶ್, ಭರತ್ ಮತ್ತು ನವೀನ್ ನಿರ್ಮಿಸಿದ ಟೆಡ್ಡಿ ಬೇರ್, ಖ್ಯಾತ ತೆಲುಗು ನಿರ್ದೇಶಕ ಪುರಿ ಜಗನ್ನಾಥ್ ಅವರ ಮಾಜಿ ಸಹಾಯಕ ಲೋಕೇಶ್ ಬಿ ಅವರ ನಿರ್ದೇಶನದ ಚೊಚ್ಚಲ ಚಿತ್ರವಾಗಿದೆ. ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆಯನ್ನು ಲೋಕೇಶ್ ರಚಿಸಿದ್ದಾರೆ.
ಲೋಕೇಶ್ ಅವರು ಟೆಡ್ಡಿಬೇರ್ ಸೀಕ್ವೆಲ್ ಮತ್ತು ಫ್ರೀಕ್ವೆಲ್ ಎರಡನ್ನೂ ತರುವ ಪ್ಲಾನ್ ನಲ್ಲಿದ್ದಾರೆ. ಸಾಮಾನ್ಯವಾಗಿ ಟೆಡ್ಡಿ ಬೇರನ್ನು ಸಿಂಬಲ್ ಆಫ್ ಲವ್ ಎನ್ನುತ್ತಾರೆ. ಆದರೆ ಈ ಚಿತ್ರದಲ್ಲಿ ಟೆಡ್ಡಿ ಬೇರ್ ನ್ನು ಹಾರರ್ ಸಂಕೇತವಾಗಿ ತೋರಿಸಲಾಗಿದೆ. ಚಿತ್ರದ ನಾಯಕನಾಗಿ ಸುಪ್ರಿಂ ಸ್ಟಾರ್ ಭಾರ್ಗವ್ ಅಭಿನಯ ಮಾಡಿದ್ದು, ಇವರಿಲ್ಲಿ ಸೈಕಾಲಜಿಕಲ್ ಡಾಕ್ಟರ್ ಪಾತ್ರ ಮಾಡಿದ್ದಾರೆ. ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡುವ ಭಾರ್ಗವ್ ‘ಸಾಮಾನ್ಯವಾಗಿ ವಿಜ್ಞಾನ ನಂಬುವವರು ದೇವರನ್ನು ನಂಬಲ್ಲ.
ದೇವರನ್ನು ನಂಬುವವರು ಸೈನ್ಸ್ ನಂಬಲ್ಲ. ಆದರೆ ನನ್ನ ಪಾತ್ರ ಭಗವದ್ಗೀತೆ ಓದಿಕೊಂಡಿರುತ್ತದೆ. ಜೊತೆಗೆ ಸೈನ್ಸ್ನಲ್ಲೂ ನಂಬಿಕೆ ಹೊಂದಿದೆ. ಈ ಎರಡು ವಿಚಾರವನ್ನು ಹೇಗೆ ಬ್ಯಾಲೆನ್ಸ್ ಮಾಡುತ್ತಾನೆ ಎಂಬುದೇ ಕಥಾ ನಾಯಕನ ಪಾತ್ರ’ ಎನ್ನುವರು ಇವರೊಂದಿಗೆ ಶೈಲಜಾ ಸಿಂಹ ಮತ್ತು ದೀನ ಪೂಜಾರಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪೋಷಕ ಪಾತ್ರದಲ್ಲಿ ಸ್ಪರ್ಶ ರೇಖಾ, ದಿಶಾ ಪೂವಯ್ಯ, ಕಿಟ್ಟಿ ತಾಳಿಕೋಟೆ, ಮುತ್ತು, ಅರವಿಂದ್ ಮತ್ತು ಬೇಬಿ ಅಕ್ಷರ ಇದ್ದಾರೆ. ವಿವೇಕ್ ಜಂಗ್ಲಿ ಅವರ ಸಂಗೀತವಿದೆ. ಛಾಯಾಗ್ರಾಹಕರಾದ ದೀಪು ಮತ್ತು ಬೆನಕರಾಜ್ ಚಿತ್ರಕ್ಕೆ ಮತ್ತಷ್ಟು ಜೀವ ತುಂಬಿದ್ದಾರೆ.