ಬೆಂಗಳೂರು: ಕನ್ನಡದ ನಟ ಕಿಶೋರ್ ಕುಮಾರ್ ಅವರನ್ನು 16ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದ ರಾಯಭಾರಿಯಾಗಿ ನೇಮಕ ಮಾಡಲಾಗಿದೆ. ಮಾರ್ಚ್ 1ರಿಂದ 8ರ ತನಕ 2024-2025ನೇ ಸಾಲಿನ 16ನೇ Bengaluru International Film Festival (BIFFES) ಬೆಂಗಳೂರಿನಲ್ಲಿ ನಡೆಯಲಿದೆ. ನಟ ಕಿಶೋರ್ ಕನ್ನಡ ಮಾತ್ರವಲ್ಲದೇ ದಕ್ಷಿಣ ಭಾರತದ ಹಲವು ಭಾಷೆಗಳಲ್ಲಿ ನಟಿಸಿದ್ದಾರೆ. ಬೆಂಗಳೂರು ಫಿಲ್ಮ್ ಫೆಸ್ಟಿವಲ್ 16ನೇ ಆವೃತ್ತಿಗೆ ರಾಯಭಾರಿಯಾಗಿ ನೇಮಿಸಿರುವುದಾಗಿ ಸರ್ಕಾರದ ಆದೇಶದಲ್ಲಿ ತಿಳಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ರಾಯಭಾರಿಯಾಗಿ ನೇಮಕಗೊಂಡಿರುವ ನಟ ಕಿಶೋರ್ ಕುಮಾರ್ ಗೆ ಅಭಿನಂದನೆ. ಸರ್ವ ಜನಾಂಗದ ಶಾಂತಿಯ ತೋಟ ಎಂಬ ಘೋಷವಾಕ್ಯದಡಿ ಈ ಬಾರಿಯ ಚಲನಚಿತ್ರೋತ್ಸವವನ್ನು ಆಯೋಜಿಸಲಾಗುತ್ತಿದ್ದು, ಈ ಸಾಲುಗಳಿಗೆ ಬದ್ಧವಾಗಿರುವ ಕಿಶೋರ್ ಅವರ ಮುಂದಾಳತ್ವದಲ್ಲಿ ಬೆಂಗಳೂರು ಚಲನಚಿತ್ರೋತ್ಸವ ಅತ್ಯಂತ ಯಶಸ್ವಿಯಾಗಲಿದೆ ಎಂಬ ಪೂರ್ಣ ವಿಶ್ವಾಸವಿದೆ ಎಂದು ಬರೆದಿದ್ದಾರೆ.
ಈ ಸಿನಿಮೋತ್ಸವದಲ್ಲಿ ಬೆಂಗಳೂರಿನ 13 ಚಿತ್ರಮಂದಿರಗಳಲ್ಲಿ ದೇಶ-ವಿದೇಶಗಳ ಅತ್ಯುತ್ತಮ ಸಿನಿಮಾಗಳು ಪ್ರದರ್ಶನಗೊಳ್ಳಲಿದೆ. ಅಲ್ಲದೇ ಈ ಚಿತ್ರಗಳ ಕುರಿತಂತೆ ವಿಚಾರ ಸಂಕಿರಣಗಳು ಕೂಡ ನಡೆಯಲಿವೆ.