ಚೆನ್ನೈ: ಪ್ರೇಮ್ ನಿರ್ದೇಶನದ, ನಟ ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ 'ಕೆಡಿ' ಚಿತ್ರತಂಡ ಭರ್ಜರಿ ಪ್ರಚಾರವನ್ನು ಆರಂಭಿಸಿದೆ. ಮುಂಬೈಯಲ್ಲಿ ಇತ್ತೀಚಿಗೆ ಟೀಸರ್ ಬಿಡುಗಡೆ ಮಾಡಿದ ಚಿತ್ರತಂಡ ಶುಕ್ರವಾರ ಚೆನ್ನೈನಲ್ಲಿ ಪ್ರಚಾರದ ಭಾಗವಾಗಿ ಸುದ್ದಿಗೋಷ್ಠಿ ನಡೆಸಿತು.
ಈ ವೇಳೆ ನಟ ಕಮಲ್ ಹಾಸನ್ ಅವರ ವಿವಾದಾತ್ಮಕ ಹೇಳಿಕೆಯಿಂದ 'ಥಗ್ ಲೈಫ್' ಸಿನಿಮಾ ಬಿಡುಗಡೆಗೆ ಕರ್ನಾಟಕದಲ್ಲಿ ಅವಕಾಶ ನೀಡದೇ ಇರುವ ತಮಿಳು ಮಾಧ್ಯಮಗಳ ಪ್ರಶ್ನೆಗೆ ಕನ್ನಡದಲ್ಲಿಯೇ ನಯವಾಗಿಯೇ ಮುಟ್ಟಿ ನೋಡಿಕೊಳ್ಳುವಂತೆ ಉತ್ತರಿಸಿದರು.
'ನಾವೇನು ಬೇರೆ ದೇಶದಲ್ಲಿಲ್ಲ. ಇನ್ನೂರು-ಮುನ್ನೂರು ಕಿಲೋ ಮೀಟರ್ ದೂರದಲ್ಲಿದ್ದೇವೆ ಅಷ್ಟೇ. ಎಲ್ಲರೂ ಒಂದೇ. ತಾಯಿಗೆ ಯಾರಾದರೂ ಬೈದರೆ ಸುಮ್ಮನಿರುತ್ತಾರಾ? ಎಂದು ಪ್ರಶ್ನಿಸಿದರು.
ಕರ್ನಾಟಕದಲ್ಲಿ ಎಲ್ಲಾ ತಮಿಳು ಸಿನಿಮಾಗಳು ಚೆನ್ನಾಗಿ ಓಡುತ್ತವೆ. ನಾನೂ ತಮಿಳು ಸಿನಿಮಾಗಳನ್ನು ನೋಡುತ್ತೇನೆ. ಕರ್ನಾಟಕದಲ್ಲಿ ತಮಿಳು ಸಿನಿಮಾಗಳ ಬಿಡುಗಡೆಗೆ ಯಾರೂ ವಿರೋಧ ವ್ಯಕ್ತಪಡಿಸಿಲ್ಲ. ಕಮಲ್ ಸರ್ ಹೇಳಿಕೆಯಿಂದ ಕನ್ನಡಿಗರಿಗೆ ನೋವಾಗಿದೆ. ಹಾಗಾಗೀ ಅವರ ಸಿನಿಮಾ ಬಿಡುಗಡೆಗೆ ವಿರೋಧ ವ್ಯಕ್ತವಾಯಿತು. ಕಮಲ್ ಸರ್ ಕ್ಷಮೆ ಕೇಳಬೇಕಿತ್ತು ಎಂದಿದ್ದಾರೆ.
ಇದೇ ವೇಳೆ ಮಾತನಾಡಿದ ನಟ ಧ್ರುವ ಸರ್ಜಾ, ತಮಿಳುನಾಡಿನ ಜನರಂತೆ ನಾವು (ಕನ್ನಡಿಗರು) ಕೂಡ ನಮ್ಮ ಮಾತೃಭಾಷೆಯನ್ನು ಪ್ರೀತಿಸುತ್ತೇವೆ. ನಮ್ಮ ಮಾತೃಭಾಷೆಯ ವಿಷಯಕ್ಕೆ ಬಂದಾಗ, ಜನರು ಖಂಡಿತವಾಗಿಯೂ ಪ್ರತಿಕ್ರಿಯಿಸುತ್ತಾರೆ' ಎಂದು ಹೇಳಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕನ್ನಡಿಗರು ಫಿದಾ ಆಗಿದ್ದು, ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.